ದೇಶದಾದ್ಯಂತ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣಾ ಕಣ ಕಾವೇರುತ್ತಿದೆ. ನವೆಂಬರ್ 6ರಿಂದ ನವೆಂಬರ್ 11ವರೆಗೆ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ.

ಒಟ್ಟು 243 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ -ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲು ಹಾಗೂ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿಗೆ (ಮಹಾಘಟಬಂಧನ್) ಅಧಿಕಾರಕ್ಕೆ ಬರಲು 122 ಸ್ಥಾನ ಗೆಲ್ಲಬೇಕಿದೆ. ಈ ಹಿನ್ನೆಲೆಯಲ್ಲಿ ಎರಡೂ ಮೈತ್ರಿಕೂಟಗಳು ಚುನಾವಣಾ ಅಖಾಡಕ್ಕಿಳಿದಿದ್ದು, ಮತದಾರರನ್ನು ಸೆಳೆಯಲು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆ ಗ್ಯಾರಂಟಿ ಚುನಾವಣೆಯಾಗುತ್ತಿದ್ದು, ಎರಡೂ ಮೈತ್ರಿಕೂಟಗಳು ಮತದಾರರಿಗೆ ಕೆಲವು ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿವೆ.

ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿಗೆ (ಮಹಾಘಟಬಂಧನ್) ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದು, ರಾಷ್ಟ್ರೀಯ ನಾಯಕರು ಸೇರಿದಂತೆ ಮೈತ್ರಿಕೂಟದ ಪ್ರತಿ ಪಕ್ಷಗಳು ಹಾಗೂ ಪ್ರತಿ ನಾಯಕರು ಕೂಡ ಚುನಾವಣಾ ಕಣದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಎನ್‌ಡಿಎ ಮೈತ್ರಿಕೂಟದ ನಾಯಕರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೇ ಪ್ರಚಾರದ ಕಣಕ್ಕಿಳಿಸಿದ್ದಾರೆ. ಎರಡೂ ಮೈತ್ರಿ ಕೂಟದ ರಾಷ್ಟ್ರೀಯ ನಾಯಕರು ಇಂದು ರಾಜ್ಯದ ಅನೇಕ ವಿಧಾನ ಸಭಾಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ.

ಇನ್ನು ಅತ್ತ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಬಿರುಸಿನ ಪ್ರಚಾರ ನಡೆಸುತ್ತಿದ್ದರೆ, ಇತ್ತ ಎನ್‌ಡಿಎ ಮೈತ್ರಿಕೂಟದ ಸ್ಥಳೀಯ ನಾಯಕರು ಕಣ್ಮರೆಯಾಗಿದ್ದಾರೆ. ಎನ್‌ಡಿಎ ಮೈತ್ರಿಕೂಟದಲ್ಲಿ ಇನ್ನೂ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯಾಗದೇ ಇರುವುದರಿಂದಲೇ, ಸ್ಥಳೀಯ ನಾಯಕರು ಚುನಾವಣಾ ಪ್ರಚಾರ ಕಣದಿಂದ ದೂರ ಸರಿದಿದ್ದಾರಾ ಎನ್ನುವ ಪ್ರಶ್ನೆ ಮೂಡಲು ಕಾರಣವಾಗಿದೆ. ಇನ್ನು ಆಡಳಿರೂಢ ಪಕ್ಷದ ನಾಯಕರಾಗಿರುವ ನಿತೀಶ್ ಕುಮಾರ್ ಕೂಡ ಚುನಾವಣಾ ಅಖಾಡದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಸಕ್ರೀಯರಾಗದೇ ಇರುವುದು ಅನೇಕ ಊಹಾಪೋಹಗಳಿಗೆ ಮೂಲವಾಗುತ್ತಿದೆ.

ಒಂದೆಡೆ ಮಹಾಘಟಬಂಧನ್ ನಾಯಕರು, ಬಿಹಾರ ಚುನಾವಣೆಯಲ್ಲಿ ಅಧಿಕಾರ ವಿರೋಧಿ ಅಲೆ, ಬಿಜೆಪಿಯ ಭ್ರಷ್ಟಾಚಾರ ಹಾಗೂ ದುರಾಡಳಿತದ ಅಂಶಗಳಿಂದ ಎನ್‌ಡಿಎ ಮೈತ್ರಿಕೂಟ ಈ ಬಾರಿ ಸೋಲು ಕಾಣಲಿದೆ ಎನ್ನುವ ಭರವಸೆಯಲಿದ್ದರೆ, ಮತ್ತೊಂದೆಡೆ ಚುನಾವಣಾ ಪೂರ್ವ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ವರದಿ ಮಾಡುತ್ತಿದ್ದೆ. ಸಮೀಕ್ಷೆ ವರದಿ ಹಾಗೂ ನಾಯಕರ ಲೆಕ್ಕಾಚಾರ ಏನೇ ಇದ್ದರೂ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಭವಿಷ್ಯ ಮತದಾರರ ಕೈಯಲ್ಲಿದೆ. ಹೀಗಾಗಿ ಮತದಾರರು ಈ ಬಾರಿ ಯಾವ ಪಕ್ಷದ ಕೈಹಿಡಿಯಲ್ಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

			
                                
                                
                                