ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇತ್ತೀಚಿಗೆ ಪ್ರಧಾನಿ ಮೋದಿ ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಿದ್ದ ವೇಳೆ ಸ್ವಾಮಿ ವಿವೇಕಾನಂದರ ಪ್ರತಿಮೆ ಎದುರು ಕುಳಿತು ಧ್ಯಾನ ಮಾಡಿದ್ದರು. ಅದನ್ನೇ ಹೋಲುವಂತೆ ಪೇಯಿಂಟಿಂಗ್ ನೀಡಿದ್ದಾರೆ ದೊಡ್ಡ ಗೌಡ್ರು. ಈ ಬಗ್ಗೆ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ Narendra Modi, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ನಾನು ಭೇಟಿಯಾಗಿದ್ದೆ.
ಲೋಕಕಲ್ಯಾಣ್ ಮಾರ್ಗದ ನಂಬರ್ 7ರಲ್ಲಿ ಭೇಟಿ ಮಾಡಿ ಚರ್ಚಿಸಿದೆ. ಅವರ ಜ್ಞಾನ, ಹಲವಾರು ಆಯಾಮದ ವಿಚಾರಗಳು ಆಳವಾದ ಮೌಲ್ಯವನ್ನು ಹೊಂದಿವೆ. ಪೇಯಿಂಟಿಂಗ್ ಕೊಟ್ಟಿದ್ದು, ನನ್ನನ್ನು ಹಿಂದಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಹೆಚ್.ಡಿ ದೇವೇಗೌಡರು ಹಾಗು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿಯನ್ನು ಭೇಟಿ ಮಾಡಿದ್ದಾದರೂ ಯಾಕೆ ಅನ್ನೋ ಅನುಮಾನವನ್ನು ಹುಟ್ಟು ಹಾಕಿದೆ. ರಾಜ್ಯದಲ್ಲಿ ಮುಡಾ ಸೈಟ್ ಹಾಗು ವಾಲ್ಮೀಕಿ ನಿಗಮದ ಹಗರಣಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದ್ದು, ಸರ್ಕಾರವನ್ನು ಕಟ್ಟಿ ಹಾಕಲು ವಿರೋಧ ಪಕ್ಷಗಳಾದ ಜೆಡಿಎಸ್ ಹಾಗು ಬಿಜೆಪಿ ಕಸರತ್ತು ನಡೆಸುತ್ತಿರುವಾಗ ಈ ಭೇಟಿ ಅನುಮಾನವನ್ನು ಗಟ್ಟಿಗೊಳಿಸುತ್ತಿದೆ. ಸಿದ್ದರಾಮಯ್ಯ ಅವರನ್ನು ಅಣಿಯಲು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದಾರಾ..? ಅನ್ನೋ ಚರ್ಚೆಗಳು ನಡೆಯುತ್ತಿವೆ.
ಜೆಡಿಎಸ್ ದಿಗ್ಗಜರಾದ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಸುಖಾ ಸುಮ್ಮನೆ ಭೇಟಿಯಾಗಿಲ್ಲ ಅನ್ನೋದು ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಇನ್ನೂ ಒಂದು ವಿಚಾರವೂ ಇರುವ ಸಾಧ್ಯತೆಯಿದೆ. ವಾಲ್ಮೀಕಿ ಹಗರಣ ಹಾಗು ಮುಡಾ ಹಗರಣದ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೂ ರಾಜ್ಯದಲ್ಲಿ ಕೇಂದ್ರ ಬಜೆಟ್‌ನಲ್ಲಿ ಏನೂ ಕೊಟ್ಟಿಲ್ಲ ಅನ್ನೋ ವಿಚಾರವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್‌ನ ಇಬ್ಬರು ಸಂಸದರು ಸೇರಿ ರಾಜ್ಯದಿಂದ 19 ಮಂದಿ ಎನ್‌ಡಿಎ ಸಂಸದರು ಇದ್ದಾರೆ. ಆದರೂ ರಾಜ್ಯದ ಪಾಲಿಗೆ ಹೇಳಿಕೊಳ್ಳುವಂತಹ ಒಂದೇ ಒಂದು ಯೋಜನೆ ಬಂದಿಲ್ಲ ಎನ್ನುವುದು ಕನ್ನಡಿಗರನ್ನು ಆಕ್ರೋಶಿತರನ್ನಾಗಿ ಮಾಡುತ್ತಿದೆ. ಆಂಧ್ರ ಹಾಗು ಬಿಹಾರದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ಕೊಟ್ಟಿರುವ ಜನರಿಗೆ ಬಂಪರ್ ಹೊಡೆದಿದ್ದು, ಕೇಂದ್ರ ಬಜೆಟ್‌ನ ಬಹುಪಾಲು ಕೇವಲ ಎರಡು ರಾಜ್ಯದ ಪಾಲಾಗಿದೆ. ಈ ವಿಚಾರವನ್ನೂ ಚರ್ಚೆ ನಡೆಸಿ ಕನ್ನಡಿಗರಿಗೆ ಸಮಾಧಾನ ತರದುವಂತಹ ಘೋಷಣೆಗೂ ಮನವಿ ಮಾಡಿರುವ ಸಾಧ್ಯತೆಗಳಿವೆ. ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರ ಬಜೆಟ್ ಬಳಸಿಕೊಂಡಿದೆ ಎನ್ನುವುದು ಕಾಂಗ್ರೆಸ್ ಹಾಗು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ನೇರ ಆರೋಪ. ಇದೇ ವಿಚಾರಕ್ಕೆ ಈಗಾಗಲೇ ನೀತಿ ಆಯೋಗದ ಸಭೆಯಲ್ಲಿ INDIA ಒಕ್ಕೂಟದ ಎಲ್ಲಾ ಪಕ್ಷಗಳು ಬಹಿಷ್ಕಾರ ಮಾಡಿವೆ. ಬಿಹಾರ ಹಾಗು ಆಂಧ್ರದ ಅಭಿವೃದ್ಧಿ ಆದರೆ ಇಡೀ ದೇಶದ ಅಭಿವೃದ್ಧಿ ಆಗುತ್ತದೆಯೇ ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ. ಇದೀಗ ಹೆಚ್.ಡಿ ದೇವೇಗೌಡರು ಹಾಗು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ರಾಜಕೀಯ ಏನೇ ಇರಲಿ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ, ರಾಜ್ಯಕ್ಕೂ ಒಂದಿಷ್ಟು ಅನುದಾನ ಕೊಡಿಸಿದರೆ ಅನುಕೂಲ ಅಲ್ಲವೇ..?
ಕೃಷ್ಣಮಣಿ