ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ SR ವಿಶ್ವನಾಥ್, ಬಿಬಿಎಂಪಿ ಆಯುಕ್ತರಾದ ಅನೀಲ್‌ಕುಮಾರ್ ಹಾಗೂ ಆರೋಗ್ಯ ಇಲಾಖಾ ಅಧಿಕಾರಿ ಎಎಸ್ಪಿ ಸಜೀತ್ ಜೊತೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ ಮೈದಾನದಲ್ಲಿ ನಿರ್ಮಿಸಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಯಾವುದೇ ಮಾತ್ರೆ, ಔಷಧಿಗಳನ್ನು ನೀಡಲಾಗುವುದಿಲ್ಲ. ರೋಗಿಗಳಿಗೆ ಐಸೋಲೇಷನ್ ಮಾಡುವ ಉದ್ದೇಶದಿಂದ ಕೋವಿಡ್ ಕೇರ್ ಸೆಂಟರ್ ಸಿದ್ದಪಡಿಸಿದ್ದು, ಮುಂದಿನ ದಿನಗಳಲ್ಲಿ ಮನೆಯಲ್ಲಿಯೇ ಐಸೋಲೇಷನ್ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೇಳಿದ್ದಾರೆ.
ಇನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿರುವವರಿಗೆ ವಿಟಮಿನ್ಸ್ ಮಾತ್ರೆಗಳ ಕಿಟ್ ಕೊಡಲು ನಿರ್ಧರಿಸಲಾಗಿದೆ. ರೋಗಿಗಳಿಗೆ ಇಸ್ಕಾನ್‌ನಿಂದ ಊಟ ಒದಗಿಸಲಾಗುವುದು ಹಾಗೂ ಜಿಂದಾಲ್‌ನಿಂದ ಸ್ನಾಕ್ಸ್ ಕೊಡಲಾಗುತ್ತದೆ. ಸರ್ಕಾರಕ್ಕೆ 10,100 ಹಾಸಿಗೆಗಳನ್ನು ರೆಡಿ ಮಾಡಲು ಉದ್ದೇಶಿಸಿದ್ದು, ದೇಶದಲ್ಲೇ ಅತೀ ದೊಡ್ಡ ಕೋವಿಡ್ ಸೆಂಟರ್ ನಿರ್ಮಿಸುವುದಾಗಿ ಹೇಳಿದ್ದಾರೆ.
ಚಿಕಿತ್ಸೆಗೆ ಬಂದವರಿಗೆ ಸಮಯ ಕಳೆಯಲು ಮನೋರಂಜನೆ, ಕೇರಂ ಚೆಸ್‌ನಂತಹ ಆಟಗಳು ಒಳಾಂಗಣ ಆಟಗಳು, ಮಕ್ಕಳಿಗೆ ಆಟಿಕೆಗಳು ಸಹ ಒದಗಿಸಲಾಗುವುದು. ಇಲ್ಲಿ ಯಾವುದೇ ಪರೀಕ್ಷೆಗಳು ನಡೆಯುವುದಿಲ್ಲ, ಗಂಟಲು ದ್ರವ ತೆಗೆದು ಲ್ಯಾಬ್‌ಗಳಿಗೆ ಕಳುಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಲ್ಯಾಬ್ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದಿದ್ದಾರೆ.

ಮೃತರ ಬಂಧುಗಳೇ ಶವ ಸಂಸ್ಕಾರಕ್ಕೆ ಬರುವುದಿಲ್ಲ, ಹೀಗಿರುವಾಗ ನಮ್ಮ ಅಧಿಕಾರಿಗಳು, ಸಿಬ್ಬಂದಿಗಳು ಶವಸಂಸ್ಕಾರ ಮಾಡಿದ್ದಾರೆ. ಹಾಗಾಗಿ ಶವ ಸಂಸ್ಕಾರ ವಿಚಾರದಲ್ಲಿ ಕೆಲವೊಮ್ಮೆ ಎಡವಿದ್ದೇವೆ.
ರಾಜ್ಯದಲ್ಲಿ ಎಲ್ಲರಿಗೂ ಕೋವಿಡ್-19 ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ, ಪರೀಕ್ಷೆ ಮಾಡಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಇದಕ್ಕೆ ಜನರ ಸಹಕಾರ ಮುಖ್ಯವಾಗುತ್ತದೆ, ಯಾವುದೇ ಕಾರಣಕ್ಕೂ ಭಯ ಬೇಡ, ನಿಮ್ಮ ಎಚ್ಚರಿಕೆಯಿಂದ ಇದ್ದರೆ ಸಾಕು.
ಬೆಂಗಳೂರು ಹೊರವಲಯಗಳಲ್ಲಿ ಕೋವಿಡ್ ಮೃತದೇಹಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಮಶಾನಗಳನ್ನು ಗುರುತಿಸಲಾಗಿದೆ. ಇನ್ನು ಸರ್ಕಾರದ ಕಡೆಯಿಂದ ಎಲ್ಲಿಯೂ ಪಿಪಿಇ ಕಿಟ್ ಬಿಸಾಡಿಲ್ಲ. ಯಾವುದೋ ಖಾಸಗಿ ಆಸ್ಪತ್ರೆಯವರು ಈ ರೀತಿ ಮಾಡಿರಬಹುದು. ವೈಜ್ಞಾನಿಕವಾಗಿ ಪಿಪಿಇ ಕಿಟ್ ಹಾಗೂ ಸೋಂಕಿತರು ಬಳಸುವ ಹಾಸಿಗೆ ಮೇಲಿನ ಹೊದಿಕೆಗಳನ್ನ ಸುಡಲಾಗುತ್ತಿದೆ. ಎಲ್ಲಿಯೂ ಲೋಪವಾಗದಂತೆ ಜಾಗೃತಿ ವಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ SR ವಿಶ್ವನಾಥ್ ಹೇಳಿದ್ದಾರೆ.