ಬೀದರ್: ಬಸವಕಲ್ಯಾಣ ತಾಲ್ಲೂಕಿನ ದಾಸರವಾಡಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 10ನೇ ತರಗತಿಯ ವಿಶೇಷ ಚೇತನ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿರುವ ಪೋಷಕರು ಪ್ರತಿಭಟನೆ ನಡೆಸಿ, ದೂರು ದಾಖಲಿಸಿದ್ದಾರೆ.
ಪವನ ನಾಗಪ್ಪ ಹಣಮಂತವಾಡಿ (16) ಮೃತ ಬಾಲಕ.
ಸಂಜೆ 5 ಗಂಟೆಗೆ ವಿದ್ಯಾರ್ಥಿಗಳು ಕೊಠಡಿಗಳ ಹೊರಗೆ ಬಂದು ಅಧ್ಯಯನದಲ್ಲಿ ನಿರತರಾಗಿದ್ದಾಗ ಪವನ ಅಲ್ಲಿಂದ ಬಾರದೆ ಕಿಟಕಿಯ ಸರಳುಗಳಿಗೆ ಬಟ್ಟೆಯನ್ನು ಕಟ್ಟಿ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಇದನ್ನು ತಿಳಿದ ವಸತಿ ಶಾಲಾ ಸಿಬ್ಬಂದಿ ತಾಲ್ಲೂಕಿನ ಹಣಮಂತವಾಡಿಯಲ್ಲಿರುವ ಪಾಲಕರಿಗೆ ಈ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಮೃತ ವಿದ್ಯಾರ್ಥಿಯ ತಾಯಿ ಮಹಾದೇವಿ ಹಾಗೂ ಅಣ್ಣ ಗುಂಡಪ್ಪ ಹಾಗೂ ಗ್ರಾಮದ ಹತ್ತಾರು ಮಂದಿ ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ಇರಲಿಲ್ಲ. ಅಲ್ಲದೆ ಕೊರಳಿಗೆ ಬಟ್ಟೆ ಸುತ್ತಿಕೊಂಡು ನೆಲಕ್ಕೆ ಕುಳಿತಂತಿದ್ದಾನೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದರು ಪವನ್ ಪೋಷಕರು ತನಿಖೆಗೆ ಒತ್ತಾಯಿಸಿದ್ದಾರೆ.
ಮಾತ್ರವಲ್ಲದೇ ಇಂದಿರಾಗಾಂಧಿ ವಸತಿ ಶಾಲೆ ಮುಂಭಾಗದಲ್ಲಿ ರಾತ್ರಿ 9.30 ವರೆಗೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಮುಡಬಿ ಪೊಲೀಸ್ ಠಾಣೆಯಲ್ಲಿ ಪವನ್ ತಾಯಿ ಮಹಾದೇವಿ ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ ?
“ನಾನು ವಿಧವೆ. ನನ್ನ ಮಗ ವಿಶೇಷಚೇತನನಾಗಿದ್ದು, ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಅವನು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ನನಗೆ ಸಂಶಯವಿದೆ. ಈ ಬಗ್ಗೆ ಶಾಲಾ ಪ್ರಾಚಾರ್ಯರಿಗೆ ಕೇಳಿದರೆ ನನಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ನನ್ನ ಮಗನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು” ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.