
ಹುಮನಾಬಾದ್: ತಾಲ್ಲೂಕಿನ ಕಲ್ಲೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರ್ ತಾಂಡಾ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.
ಗ್ರಾಮದಲ್ಲಿ 450ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 120 ಮನೆಗಳಿವೆ. ಗ್ರಾಮದ ಹೊರವಲಯದ ಬಾವಿಯೊಂದೇ ಜನರ ದಾಹ ತಣಿಸುತ್ತಿತ್ತು .
ಸದ್ಯ ಈ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ ಎಂದು ಹೇಳುತ್ತಿದ್ದಾರೆ . ಈ ಬಾವಿ ಬಿಟ್ಟರೆ ಬೇರೆ ನೀರಿಲ್ಲ. ಕೊನೆಗೆ ಜಮೀನುಗಳಿಗೆ ಹೋಗಬೇಕು ಈ ನಮ್ಮ ಗೋಳು ಕೇಳೋರೂ ಇಲ್ಲ ಎಂದು ಗ್ರಾಮಸ್ಥರು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಚೆಗೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಈ ಬಾವಿ ನೀರು ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ನೀರು ಕಲುಷಿತವಾಗಿದೆ ಎಂದು ಬಂದಿದೆ. ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಪಕ್ಕದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ. ಆದರೆ ಈಗ ಘಟಕದ ಶುದ್ಧೀಕರಣ ಯಂತ್ರ ಸರಿಯಾಗಿ ಕೆಲಸ ಮಾಡದ ಕಾರಣ ಬಂದಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

‘ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ನೀರಿಲ್ಲ. ಅನುಕೂಲ ಇದ್ದವರು ತಮ್ಮ ವಾಹನಗಳ ಮೇಲೆ ಜಮೀನುಗಳಿಂದ ನೀರು ತರುತ್ತಿದ್ದಾರೆ. ಇದು ಎಲ್ಲರಿಂದ ಸಾಧ್ಯವಿಲ್ಲ’ ಎಂದು ನಿವಾಸಿ ಕಿರಣ ತಿಳಿಸಿದರು.
ಜೆಜೆಎಂ ಕಳಪೆ: ಕಲ್ಲೂರ್ ತಾಂಡಾ ಗ್ರಾಮದಲ್ಲಿ ಈ ಹಿಂದೆ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿ ಆಗಿದೆ. ಈ ಕಾಮಗಾರಿಯು ಕಳಪೆಯಾಗಿದೆ . ಇಲ್ಲಿಯ ಅನೇಕ ಸಾರ್ವಜನಿಕರ ಮನೆಗಳಿಗೆ ನೀರು ಬರುತ್ತಿಲ್ಲ. ಸರ್ಕಾರದ ಲಕ್ಷಾಂತರ ರೂಪಾಯಿ ಹಾಳಾಗಿದೆ. ಮೇಲಧಿಕಾರಿಗಳು ಇದ್ದರ ಬಗ್ಗೆ ತನಿಖೆ ನಡೆಸಬೇಕು ಎಂದು ಕರ್ನಾಟಕ ಭೀಮ್ ಆರ್ಮಿ ಮುಖಂಡ ಗೌತಮ್ ಪ್ರಸಾದ್ ಒತ್ತಾಯಿಸಿದ್ದಾರೆ.