
ಬಸವಕಲ್ಯಾಣ: ತಾಲ್ಲೂಕಿನ ಖೇರ್ಡಾ (ಕೆ) ಮತ್ತು ಕೊಹಿನೂರವಾಡಿ ಗ್ರಾಮಗಳ ಜಮೀನುಗಳಲ್ಲಿ ಅತಿವೃಷ್ಟಿ ಹಾಗೂ ಕೆರೆ ಒಡೆದಿದ್ದರಿಂದ ಆಗಿರುವ ನಷ್ಟಕ್ಕೆ ತಿಂಗಳಾದರೂ ಪರಿಹಾರ ನೀಡಿಲ್ಲ. ಸಮಯಕ್ಕೆ ಅರಿಯಾಗಿ ಮುಂಗಾರು ಮಳೆಯಾಗಿದೆ ಎಂದು ರೈತರು ಖುಷಿಗೊಂಡಿದ್ದರು. ಆದರೆ ಮರುದಿನವೇ ಧಾರಾಕಾರ ಮಳೆಗೆ ಕೊಹಿನೂರ ಹಾಗೂ ಅಟ್ಟೂರ್ ಕೆರೆಗಳು ಒಡೆದು ನೂರಾರು ಎಕರೆಯಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಯಿತು.ಕೆಲ ರೈತರು ಬಿತ್ತನೆಗಾಗಿ ಬೀಜ ಮತ್ತು ಗೊಬ್ಬರ ಮನೆಗೆ ತಂದಿಟ್ಟಿದ್ದರು. ಆದರೆ ಜಮೀನುಗಳಲ್ಲಿನ ವಾರಗಟ್ಟಲೇ ನೀರು ಸಂಗ್ರಹಗೊಂಡಿತು.

ಅಲ್ಲದೆ ಎಲ್ಲೆಲ್ಲೂ ಬರೀ ಕಲ್ಲುಗಳೇ ಎದ್ದು ನಿಂತಿದ್ದರಿಂದ ಅನೇಕರು ಬಿತ್ತನೆ ಕೈಗೊಳ್ಳಲಿಲ್ಲ.ಕೊಹಿನೂರ ಕೆರೆ ಒಡೆದಿದ್ದರಿಂದ ಗಂಡೂರಿ ನಾಲೆ ಉಕ್ಕಿ ಹರಿದ ಪರಿಣಾಮವಾಗಿ ಹೆಚ್ಚಿನ ಹಾನಿಯಾಗಿದೆ. ನೀರಿನ ರಭಸಕ್ಕೆ ಕೊಹಿನೂರವಾಡಿ ಮತ್ತು ಖೇರ್ಡಾ (ಕೆ) ಗ್ರಾಮಗಳ ಜಮೀನುಗಳ ಬದುಗಳು ಸಹ ಕಾಣದಷ್ಟು ಮಣ್ಣು ನಾಲೆಯ ಪಾಲಾಯಿತು.’ಮಳೆಯಿಂದ ಕೆಲ ಸೇತುವೆ ಮತ್ತು ರಸ್ತೆಗೆ ಹಾನಿ ಆಗಿತ್ತು. ಅದನ್ನು ಸರಿಪಡಿಸಲಾಗಿದೆ. ಆದರೆ ರೈತರಿಗೆ ಮಾತ್ರ ಪರಿಹಾರ ನೀಡಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಾಸಕರು ಮತ್ತು ಸಂಸದರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈದುವರೆಗೆ ನ್ಯಾಯ ಸಿಕ್ಕಿಲ್” ಎಂದು ಖೇರ್ಡಾ (ಕೆ) ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ರಾಯಾಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣದಲ್ಲಿ ಸ್ಥಳಕ್ಕೆ ಬಂದಿದ್ದರಿಂದ ಕೆಲ ದಿನಗಳಲ್ಲಿಯೇ ಪರಿಹಾರ ದೊರಕಬಹುದು. ಹೊಲಗಳ ಸುಧಾರಣೆಗೆ ಮತ್ತು ಬಿತ್ತನೆ ಕೈಗೊಳ್ಳುವುದಕ್ಕೆ ಸರ್ಕಾರದ ಹಣದಿಂದ ಅನುಕೂಲ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಭರವಸೆಗೆ ತಕ್ಕಂತೆ ಯಾರೂ ನಡೆದುಕೊಂಡಿಲ್ಲ. ಆದ್ದರಿಂದ ರೈತರು ಕಂಗಾಲಾಗಿದ್ದಾರೆ’ ಎಂದು ಕೊಹಿನೂರವಾಡಿ ರೈತ ಮಧುಕರ ಘೋಡಕೆ ಹೇಳಿದ್ದಾರೆ.ಅತಿವೃಷ್ಟಿಯಿಂದ ಹಾನಿಯಾದ ಕೊಹಿನೂರ, ಮುಡಬಿ ಮತ್ತು ಮಂಠಾಳ ಹೋಬಳಿಯ 22 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಪರಿಹಾರದ ಹಣ ಶೀಘ್ರ ರೈತರ ಕೈಗೆ ಸಿಗುವುದಕ್ಕಾಗಿ ಪ್ರಯತ್ನ ನಡೆದಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಮಚಕೂರಿ ತಿಳಿಸಿದ್ದಾರೆ.