ವಿಶ್ವಗುರು ಬಸವಣ್ಣನವರ ಸಮಾಜೋಧಾರ್ಮಿಕ ಚಳವಳಿ ಆಧಾರಿಸಿ ಹಿಂದಿ ಭಾಷೆಯಲ್ಲಿ’ಬಸವೇಶ್ವರ ದರ್ಶನ’ ಎಂಬ ಮಹಾನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಯಿತು.ಬೀದರ್ ನಗರದ ಲಾವಣ್ಯ ಫಂಕ್ಷನ್ ಹಾಲ್ ನಲ್ಲಿ ಶನಿವಾರ ಕರೆದ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ ಜಿಲ್ಲೆಯ ವಿವಿಧ ಮಠಾಧೀಶರು, ವಿವಿಧ ಸಂಘಟನೆ, ಸಮುದಾಯದ ಮುಖಂಡರು, ಬಸವಾನುಯಿಗಳು ಪಾಲ್ಗೊಂಡು ನಾಟಕ ತಯ್ಯಾರಿಡೆ ಒಮ್ಮತದ ಒಪ್ಪಿಗೆ ಸೂಚಿಸಿದರು.
ಸಭೆಯ ನೇತೃತ್ವ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಕ್ರಾಂತಿ ಸೂರ್ಯ, ಏಕ್ ಜಂಜಾವಟ ನಾಟಕಗಳು ವೀಕ್ಷಿಸಿದ ನಂತರ ಬಸವಣ್ಣನವರ ಕುರಿತಾದ ನಾಟಕ ಮಾಡಬೇಕೆಂಬ ಆಸೆ ಹುಟ್ಟಿತು. ಇದೀಗ ಅದಕ್ಕೆ ಎಲ್ಲರ ಒಮ್ಮತದ ನಿರ್ಧಾರದಿಂದ ‘ಬಸವೇಶ್ವರ ದರ್ಶನ’ ನಾಟಕ ಮಾಡಬೇಕೆಂಬ ಕನಸು ಈಡೇರುವ ಕಾಲ ಬಂದಿದೆ. ನಾಟಕಗಳ ಮುಖಾಂತರ ಶರಣರ ಚಿಂತನೆಗಳನ್ನು ಪ್ರಸ್ತುತ ಸಮಾಜಕ್ಕೆ ಪರಿಣಾಮಕಾರಿಯಾಗಿ ಮುಟ್ಟಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರ್ದೇಶಕ ಜತೀನ್ ಪಾಟೀಲ್ ಅವರು ಈಗಾಗಲೇ ಬರೆದಿರುವ ʼತತಾಗಥ, ಕ್ರಾಂತಿ ಸೂರ್ಯ, ಮೂಕನಾಯಕ, ರಮಾಯಿ, ‘ಜನತಾ ರಾಜಾʼ ಮಹಾನಾಟಕಗಳು ದೇಶದ ವಿವಿಧೆಡೆ ಯಶಸ್ವಿ ಪ್ರದರ್ಶನ ಕಂಡು ಜನಮಾನಸದಲ್ಲಿ ಹೊಸ ಛಾಪು ಮೂಡಿಸಿವೆ. ಅದೇ ಮಾದರಿಯಲ್ಲಿ ಬಸವಣ್ಣನವರ ಕಲ್ಯಾಣ ಕ್ರಾಂತಿ ಕುರಿತು ʼಬಸವೇಶ್ವರ ದರ್ಶನʼ ಎಂಬ ಮಹಾನಾಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಬಸವಾದಿ ಶರಣರ ವೈಚಾರಿಕ ತತ್ವಗಳನ್ನು ಜನಮಾನಸಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಈ ನಾಟಕ ಮೂಡಿ ಬರಲಿದೆ. ಇದಕ್ಕೆ ಎಲ್ಲಾ ಬಸವ ಅನುಯಾಯಿಗಳು, ಪೂಜ್ಯರು, ಸಾಮಾಜಿಕ ಚಿಂತಕರು ಸಹಕಾರ ನೀಡಬೇಕೆಂದು ಕೋರಿದರು.
ನಿರ್ದೇಶಕ ಜತೀನ್ ಪಾಟೀಲ್ ಮಾತನಾಡಿ, ಈಗಾಗಲೇ ಕ್ರಾಂತಿ ಸೂರ್ಯ, ರಮಾಯಿ, ಮೂಕನಾಯಕ ಸೇರಿದಂತೆ ಅನೇಕ ನಾಟಕಗಳು ರಚಿಸಿ ದೇಶಾದ್ಯಂತ ಪ್ರದರ್ಶನ ಕಂಡಿವೆ. ಇದೀಗ ಬಸವಣ್ಣನವರ ಕುರಿತು ನಾಟಕ ಮಾಡುವುದು ಅತ್ಯಂತ ಹೆಮ್ಮೆ ಎನಿಸುತ್ತದೆ. ಬಸವಣ್ಣನವರ ಕುರಿತಾದ ಮಹಾನಾಟಕ ಬರೀ ನಾಟಕವಾಗದೇ, ದೇಶದ ಇತಿಹಾಸ ದಾಖಲೆ ನಿರ್ಮಿಸುವ ನಾಟಕವಾಗಿ ರೂಪುಗೊಳ್ಳುತ್ತದೆ. ಈ ನಾಟಕಕ್ಕೆ ಸುಮಾರು 74 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈಗಾಗಲೇ ನಾಟಕ ರಚಿಸಲಾಗಿದೆ ಎಂದು ಹೇಳಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ , ಅಕ್ಕ ಗಂಗಾಂಬಿಕೆ , ಸತ್ಯಾದೇವಿ ಮಾತಾಜಿ, ಸಿದ್ಧರಾಮ ಶರಣರು ಬೆಲ್ದಾಳ, ಲಿಂಗಾಯತ ಮಹಾಮಠದ ಪ್ರಭು ದೇವರು ಮಾತನಾಡಿ, ‘ ಬಸವಣ್ಣನವರು ಕರ್ನಾಟಕ ಅಷ್ಟೇ ಸೀಮಿತವಾಗಿಲ್ಲ. ಇಡೀ ಜಗತ್ತಿನ ಮಾನವ ಕುಲಕ್ಕೆ ಸಮಸಮಾಜದ ತತ್ವ ನೀಡಿದ್ದಾರೆ. ಹೀಗಾಗಿ ಅವರ ವಿಚಾರಗಳು ಜಗತ್ತಿನ ಜನರಿಗೆ ಪ್ರಚುರಪಡಿಸುವ ಮೂಲಕ ಕಲ್ಯಾಣ ಕ್ರಾಂತಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲು ನಾವೆಲ್ಲರೂ ಕೈಜೋಡಿಸುತ್ತೇವೆ. ಭಾಲ್ಕಿ ಶ್ರೀಗಳು ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪ್ರಮುಖರಾದ ಬಸವಕುಮಾರ ಪಾಟೀಲ್, ಸೋಮಶೇಖರ್ ಪಾಟೀಲ್ ಗಾದಗಿ, ವೀರುಪಾಕ್ಷ ಗಾದಗಿ, ಜಗನ್ನಾಥ ಜಮಾದಾರ, ಓಂಪ್ರಕಾಶ್ ರೊಟ್ಪೆ, ರವಿ ಪಾಪಡೆ, ಶಿವಶಂಕರ್ ಟೋಕರೆ, ಜಗದೀಶ್ವರ ಬಿರಾದಾರ, ಶಂಭುಲಿಂಗ ವಾಲ್ಡೊಡ್ಡಿ ಸೇರಿದಂತೆ ಅನೇಕರು ಗಣ್ಯರು ಉಪಸ್ಥಿತರಿದ್ದರು.