ಬೀದರ್: ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಗೆ ನಡೆದ ಚಳವಳಿಯ ಸಂದರ್ಭದಲ್ಲಿ ಹಿಂದೂ, ಬೌದ್ಧ ಮತ್ತು ಅಲ್ಲಿನ ಇತರೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ತೀವ್ರ ಕಳವಳಕಾರಿಯಾದದ್ದು ಎಂದು ಅಭಿಪ್ರಾಯ ಪಟ್ಟಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅನ್ಯ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿರಿಸಿ ಹತ್ಯೆ, ಲೂಟಿ, ಅಗ್ನಿಸ್ಪರ್ಶ, ಮಹಿಳೆಯರ ವಿರುದ್ಧದ ಘೋರ ಅಪರಾಧಗಳು ಮತ್ತು ಮಂದಿರಗಳಂತಹ ಪೂಜಾ ಸ್ಥಳಗಳ ಮೇಲಿನ ದಾಳಿ ಕ್ರೂರತನದಿಂದ ಕೂಡಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ತಕ್ಷಣವೇ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಇಂತಹ ಘಟನೆಗಳನ್ನು ತಡೆದು, ಜನರ ಪ್ರಾಣ, ಆಸ್ತಿ, ಗೌರವ ರಕ್ಷಿಸಬೇಕು.
ನೆರೆಯ ಮಿತ್ರ ರಾಷ್ಟ್ರವಾಗಿ ಭಾರತ ಕೂಡ ಇದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡಬೇಕೆಂದು ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿ ಒತ್ತಾಯಿಸಿದೆ.