ಬೀದರ್: ಬೀದರ್ ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಜೆಸಿಬಿಗಳು ಸದ್ದು ಮಾಡುತ್ತಿವೆ. ಇದು 2008ರ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿದೆ.ಅದಕ್ಕೆ ಕಾರಣವೂ ಇದೆ. ಏಕೆಂದರೆ ಹಿಂದೆಂದೂ ಬೀದರ್ ಜಿಲ್ಲೆಯ ಜನತೆ ನೋಡದಷ್ಟು, ಕೇಳದಷ್ಟು ದೊಡ್ಡ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಒತ್ತುವರಿದಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗಿತ್ತು.ಜೆಸಿಬಿಗಳು, ಹಿಟಾಚಿಗಳು ಜಿಲ್ಲೆಯ ಜನರಿಗೆ ಹೆಚ್ಚು ಚಿರಪರಿಚತವಾಗಿದ್ದೇ ಆ ಸಂದರ್ಭದಲ್ಲಿ. ಈಗ ಪುನಃ ಜೆಸಿಬಿಗಳು ಸದ್ದು ಮಾಡುತ್ತಿರುವುದರಿಂದ ಸಹಜವಾಗಿಯೇ 2008ರಲ್ಲಾದ ಘಟನೆಯನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದೆ.ಆಗಿದ್ದೇನು?2007ರಲ್ಲಿ ಬೀದರ್ ಜಿಲ್ಲೆಗೆ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಅವರು ಜಿಲ್ಲಾಧಿಕಾರಿ ಆಗಿ ಬಂದಿದ್ದರು. ಮರುವರ್ಷ ಮಳೆಗಾಲದ ಆರಂಭದಲ್ಲಿ ನಗರದ ಲೇಬರ್ ಕಾಲೊನಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ನುಗ್ಗಿ, ಅಪಾರ ಹಾನಿಗೆ ಕಾರಣವಾಗಿತ್ತು.
ಸಮಸ್ಯೆಯ ಮೂಲ ಹುಡುಕಿದಾಗ ಒತ್ತುವರಿಯಿಂದ ಅವಾಂತರ ಆಗಿದೆ ಎಂಬುದು ಡಿಸಿಗೆ ವರದಿ ಸಲ್ಲಿಕೆಯಾಗಿತ್ತು.ನಾಲೆಗಳು, ರಾಜಕಾಲುವೆಗಳ ಸಮೀಕ್ಷೆಗೆ ಮುಂದಾದಾಗ ರಸ್ತೆಗಳು, ಸರ್ಕಾರಿ ಆಸ್ತಿ, ಉದ್ಯಾನಗಳೆಲ್ಲ ದೊಡ್ಡ ಮಟ್ಟದಲ್ಲಿ ಅತಿಕ್ರಮಣವಾಗಿದ್ದು ಬೆಳಕಿಗೆ ಬಂತು. ಇದರಲ್ಲಿ ಸಾಮಾನ್ಯ ಜನರಿಗಿಂತ ಪ್ರಭಾವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.ನೋಟಿಸ್ ಕೊಟ್ಟರೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದರೆ, ಅಂದುಕೊಂಡ ಕೆಲಸ ಮಾಡಲು ವಿಳಂಬವಾಗುತ್ತದೆ ಎಂದು ಭಾವಿಸಿದ ಚಾಣಾಕ್ಷ ಹರ್ಷ ಗುಪ್ತಾ ಅವರು, ಅಧಿಕಾರಿಗಳೊಂದಿಗೆ ಗುಪ್ತ ಸಭೆ ನಡೆಸಿ, ಏಕಾಏಕಿ ಅತಿಕ್ರಮಣದ ವಿರುದ್ಧ ದೊಡ್ಡ ಸಮರ ಸಾರಿದರು. ಆರಂಭದಲ್ಲೇ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಒತ್ತುವರಿ ತೆರವುಗೊಳಿಸಿದರು. ಎಷ್ಟೇ ಪ್ರತಿರೋಧ ಬಂದರೂ ಅದನ್ನು ಲೆಕ್ಕಿಸದೆ ತೆರವು ಮಾಡಿಸಿದರು. ಇದಾದ ನಂತರ ಜನ ಸ್ವಯಂಪ್ರೇರಣೆಯಿಂದ ಅತಿಕ್ರಮಣ ತೆರವುಗೊಳಿಸಲು ಪ್ರಾರಂಭಿಸಿದರು.ತೆರವಿನ ಪ್ರಮಾಣ ಎಷ್ಟಿತ್ತು ಎಂದರೆ ಭಾರಿ ಪ್ರಮಾಣದ ಭೂಕಂಪನಕ್ಕೆ ನಗರವೊಂದು ನಲುಗಿ ಹೋಗಿ ಕಟ್ಟಡಗಳೆಲ್ಲ ನೆಲಕ್ಕುರುಳಿದ ದೃಶ್ಯದಂತಿತ್ತು. ಜಿಲ್ಲಾ ಕೇಂದ್ರದ ನಂತರ ಅದು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಣೆಯಾಯಿತು.ನಿರ್ವಹಣೆಗೆ ಪರದಾಟ2008, 2009ರಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಬೀದರ್ ಜಿಲ್ಲೆ ಹೊಸ ಸ್ವರೂಪ ಪಡೆದುಕೊಂಡು ಪುಟಿದೆದ್ದಿತ್ತು. ಆದರೆ, ಆನಂತರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಯಿತು. ಬಳಿಕ ನಿರ್ವಹಣೆಯೂ ಕಷ್ಟಸಾಧ್ಯವಾಯಿತು.
ಇಂದಿಗೂ ರಿಂಗ್‌ರೋಡ್ ಕಾಮಗಾರಿ ಪೂರ್ಣಗೊಂಡಿಲ್ಲ. ರಿಂಗ್ ಆಕಾರದಲ್ಲಿ ರಿಂಗ್‌ರೋಡ್ ಆಗದ ಕಾರಣ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಗುಂಪಾ ರಿಂಗ್ ರೋಡ್‌ನಲ್ಲಿ ಒಂದು ಬದಿಯಷ್ಟೇ ರಸ್ತೆ ನಿರ್ಮಾಣವಾಗಿದೆ. ಇನ್ನೊಂದು ಬದಿಯಲ್ಲಿ ಕಟ್ಟಡಗಳಿದ್ದು, ಇದುವರೆಗೆ ಅವುಗಳನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ನಿತ್ಯ ಸಂಚಾರ ದಟ್ಟಣೆಯಿಂದ ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರಿಂಗ್‌ರೋಡ್‌ನಲ್ಲಿ ಹಲವೆಡೆ ವಿದ್ಯುತ್ ದೀಪಗಳು ಕೆಟ್ಟು ಹೋಗಿ, ರಾತ್ರಿ ವೇಳೆ ಕತ್ತಲಿಗೆ ಕಾರಣವಾಗಿದೆ. ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.ಪ್ರಮುಖ ರಸ್ತೆಗಳ ನಿರ್ವಹಣೆ ಕೂಡ ಅಷ್ಟಕಷ್ಟೇ ಎಂಬಂತಾಗಿದೆ. ಉದ್ಯಾನದ ಜಾಗವನ್ನು ಆ ಸಂದರ್ಭದಲ್ಲಿ ಹದ್ದು ಬಸ್ತು ಮಾಡಲಾಗಿತ್ತು. ಇದರಲ್ಲಿ ಬಹುತೇಕವು ಅಭಿವೃದ್ಧಿ ಕಂಡಿಲ್ಲ. ವಾರಾಂತ್ಯಕ್ಕೆ ಈಗಲೂ ಹೆಚ್ಚಿನ ಜನ ಬರೀದ್ ಷಾಹಿ ಉದ್ಯಾನವನ್ನೇ ನೆಚ್ಚಿಕೊಂಡಿದ್ದಾರೆ.ಇಷ್ಟೇ ಅಲ್ಲ, ಅಂದು ನಿರ್ಮಾಣಗೊಂಡ ಫುಟ್‌ಪಾತ್‌ಗಳೆಲ್ಲ ಅತಿಕ್ರಮಣವಾಗಿದ್ದು, ಪಾದಚಾರಿಗಳು ರಸ್ತೆಯಲ್ಲಿ ನಡೆದಾಡದಂತಾಗಿದೆ. ಪೊಲೀಸ್ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಆರು ಜನ ಪಾದಚಾರಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.