
ವಿಜಯಪುರ : ಚಡಚಣ ಪಟ್ಟಣದಲ್ಲಿ ಕಳೆದ ಜೂನ್ 16 ರಂದು ಗುಂಡು ಹಾರಿಸಿ ರೌಡಿಶೀಟರ್ ಅಶೋಕ್ ಗಂಟಗಲ್ಲಿ ಎಂಬಾತನನ್ನು ಹತ್ಯೆ ಮಾಡಿದ ಪ್ರಕರಣದ ಬೆನ್ನು ಹತ್ತಿದ ಚಡಚಣ ಪೊಲೀಸರು ಅತೀ ದೂರದ ಮಧ್ಯಪ್ರದೇಶ ರಾಜ್ಯದಿಂದ ಭೀಮಾ ತೀರಕ್ಕೆ ಕಂಟ್ರಿ ಪಿಸ್ತೂಲ್ ಪೂರೈಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಿಡಿಯಾ ಗ್ರಾಮದ ಮುಸ್ತಫಾ ಹೈದರ ತಡವಿ (36) ಎಂದು ಗುರುತಿಸಲಾಗಿದ್ದು ಈತ ಮಧ್ಯಪ್ರದೇಶದ ರಾಜ್ಯದ ಗಡಿಭಾಗದ ಹಳ್ಳಿಯೊಂದರಿಂದ ಭೀಮಾ ತೀರದ ರೌಡಿಗಳಿಗೆ ಕಂಟ್ರಿ ಪಿಸ್ತೂಲ್ ಪೂರೈಸುತ್ತಿದ್ದ ಎನ್ನಲಾಗಿದೆ.
ಅಲ್ಲದೇ, ಚಡಚಣ ಶೂಟೌಟ್ ಪ್ರಕರಣದ ಆರೋಪಿಗಳಿಗೂ ಈತನೇ ಕಂಟ್ರಿ ಪಿಸ್ತೂಲ್ ಪೂರೈಸಿದ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿ ಚಡಚಣ ಸಿಪಿಐ ಸುರೇಶ್ ಬೆಂಡೆಗೊಂಬಳ ಹಾಗೂ ಸಿಬ್ಬಂದಿಯು ಆರೋಪಿ ಮುಸ್ತಫಾನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ, ಆತನಿಂದ ಒಂದು ಕಂಟ್ರಿ ಪಿಸ್ತೂಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆ ಪ್ರಕರಣಗಳಿಂದ ಸುದ್ದಿಯಾಗುವ ಭೀಮಾ ತೀರದಲ್ಲಿ ಆಗಾಗ ನೆತ್ತರು ಹರಿಯುತ್ತಿದೆ. ಭೀಮಾ ತೀರದಲ್ಲಿ ಗುಂಡಿನ ಸದ್ದು ಕೇಳಿ ಬಂದರೆ ಹೆಣ ಉರುಳಿತು ಎಂದೇ ಅರ್ಥ. ವಿರೋಧಿಗಳು ನಡೆಸಿದ ಗುಂಡಿನ ದಾಳಿಗೆ ಪಟ್ಟಣ ಪಂಚಾಯತ್ ಸದಸ್ಯೆಯ ಪತಿ ಕೊಲೆಗೀಡಾಗಿದ್ದರು. ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ ನಡೆದ ಘಟನೆಯಲ್ಲಿ ಅಶೋಕ್ ಮಲ್ಲಪ್ಪ ಗಂಟಗಲ್ಲಿ ಹತ್ಯೆಗೀಡಾಗಿದ್ದು ಇವರು ಪಟ್ಟಣ ಪಂಚಾಯತ್ ಸದಸ್ಯೆಯ ಪತಿ ಆಗಿದ್ದರು.

ಗುಂಡಿನ ದಾಳಿಯಲ್ಲಿ ಅಶೋಕ್ಗೆ ಮೂರಕ್ಕೂ ಹೆಚ್ಚು ಗುಂಡುಗಳು ತಗುಲಿತ್ತು. ಗುಂಡಿನ ದಾಳಿಯಿಂದ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, ಕೊಲೆಗೀಡಾದ ರೌಡಿಶೀಟರ್ ಇತ್ತೀಚೆಗೆ ಪೆರೋಲ್ ಮೇಲೆ ಮೃತ ಅಶೋಕ್ ಜೈಲಿನಿಂದ ಹೊರಬಂದಿದ್ದರು. ಈತ ಕೊಲೆ ಹಾಗೂ ಇತರೆ ಕೇಸ್ಗಳಲ್ಲಿ ಅಪರಾಧಿಯಾಗಿದ್ದರು. ಹಳೇ ದ್ವೇಷದ ಹಿನ್ನೆಲೆ ರೌಡಿಶೀಟರ್ ಅಶೋಕ್ನ ಕೊಲೆ ನಡೆದಿತ್ತು.