ಖ್ಯಾತ ಸಾಹಿತಿ, ಪತ್ರಕರ್ತ ದಿವಂಗತ ರವಿ ಬೆಳಗೆರೆ(Ravi Belegere) ಅವರ ಪ್ರಸಿದ್ಧ ಕಾದಂಬರಿ ‘ಹೇಳಿ ಹೋಗು ಕಾರಣ’(Heli Hogu Kaarana) ನಕಲಿ ಪ್ರತಿಗಳಾಗಿ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿರುವ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ರವಿ ಬೆಳಗೆರೆ ಅವರ ಪುತ್ರಿ ಭಾವನಾ ಬೆಳಗೆರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಮೆಜಾನ್,(Amazon ) ಫ್ಲಿಪ್ಕಾರ್ಟ್(Flipkart ) ಹಾಗೂ ಮಿಶೋ(Meesho) ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

‘ಹೇಳಿ ಹೋಗು ಕಾರಣ’ ಕಾದಂಬರಿ ರವಿ ಬೆಳಗೆರೆ ಅವರ ಅತ್ಯಂತ ಜನಪ್ರಿಯ ಹಾಗೂ ಭಾವನಾತ್ಮಕ ಕೃತಿಗಳಲ್ಲಿ ಒಂದು. ಈ ಕಾದಂಬರಿಗೆ ಇಂದಿಗೂ ಓದುಗರಲ್ಲಿ ಅಪಾರ ಬೇಡಿಕೆ ಇದೆ. ಪುಸ್ತಕ ಪ್ರಿಯರು ಮಾತ್ರವಲ್ಲದೇ, ಈಗಿನ ಯುವಜನತೆಯೂ ಈ ಕೃತಿಯನ್ನು ಆಸಕ್ತಿಯಿಂದ ಓದುತ್ತಿದೆ. ಹೀಗಾಗಿ ಈ ಕಾದಂಬರಿಗೆ ಇರುವ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ಪುಸ್ತಕ ಭಾವನಾ ಪ್ರಕಾಶನದಿಂದ ಅಧಿಕೃತವಾಗಿ ಮುದ್ರಣಗೊಳ್ಳುತ್ತಿದೆ. ಆದರೆ, ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಮಿಶೋಂತಹ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾವನಾ ಪ್ರಕಾಶನದ ಅಧಿಕೃತ ಪ್ರತಿಯ ಬದಲು ನಕಲಿ ಹಾಗೂ ಕಡಿಮೆ ಗುಣಮಟ್ಟದ ಪುಸ್ತಕಗಳು ಮಾರಾಟವಾಗುತ್ತಿವೆ ಎಂದು ಭಾವನಾ ಬೆಳಗೆರೆ ಆರೋಪಿಸಿದ್ದಾರೆ.

ಭಾವನಾ ಅವರ ಪ್ರಕಾರ, ಕೆಲವು ಪ್ಲಾಟ್‌ಫಾರ್ಮ್‌ಗಳು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಮಾರಾಟ ಮಾಡುತ್ತಿವೆ ಅತ್ಯಂತ ಕಡಿಮೆ ಗುಣಮಟ್ಟದ ಕಾಗದ ಮತ್ತು ಮುದ್ರಣ ಮಾಡಿ. ಕೇವಲ 147 ರೂಪಾಯಿಗೆ ಪುಸ್ತಕ ಮಾರಾಟ ಮಾಡುತ್ತಿದೆ. ಇದು ಓದುಗರಿಗೆ ಮೋಸ, ಇದು ಸ್ಪಷ್ಟವಾದ ಕೃತಿ ಚೌರ್ಯ (Copyright Violation) ಎಂದು ಆರೋಪಿಸಿದ್ದಾರೆ. ಅಲ್ಲದೇ ಭಾವನಾ ಬೆಳಗೆರೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಒರಿಜಿನಲ್ ಹಾಗೂ ಡುಪ್ಲಿಕೇಟ್ ಪುಸ್ತಕಗಳ ನಡುವಿನ ವ್ಯತ್ಯಾಸವನ್ನು ತೋರಿಸಿದ್ದಾರೆ.

ಇದನ್ನು ನೋಡಿ ನನ್ನ ರಕ್ತ ಕುದಿಯುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ನನ್ನ ತಂದೆ ತೀರಿಹೋದ ಮೇಲೆ ಅವರ ಹೆಸರನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಅಮೆಜಾನ್ ಮೇಲೆ ಒಂದು ಕೋಟಿ ರೂಪಾಯಿ ಕೃತಿ ಚೌರ್ಯ ಮೊಕದ್ದಮೆ ಹಾಕುತ್ತೇನೆ. ಫ್ಲಿಪ್ಕಾರ್ಟ್ ಹಾಗೂ ಮಿಶೋ ಮೇಲೂ ತಲಾ ಒಂದು ಕೋಟಿ ರೂಪಾಯಿ ಕೇಸ್ ಹಾಕುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ತಂದೆಯ ಹೆಸರು ಹಾಳಾಗಬಾರದು, ತಂದೆ ಹೋದ ಮೇಲೆ ನಾವು ಕಡಿಮೆ ಗುಣಮಟ್ಟದ ಪುಸ್ತಕಗಳು ಮಾರಾಟ ಮಾಡುತ್ತಿದ್ದೇವೆ ಎಂದು ಜನ ನಮ್ಮ ಮೇಲೆ ತಪ್ಪು ತಿಳಿದುಕೊಳ್ಳುತ್ತಾರೆ. ಅಮಾಯಕ ಓದುಗರಿಗೆ ಮೋಸ ಆಗಬಾರದು ಎಂಬ ಉದ್ದೇಶದಿಂದ ಈ ವಿಷಯವನ್ನು ಕೋರ್ಟ್‌ಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ನನಗೆ ಉತ್ತರ ಬೇಕು, ನ್ಯಾಯ ಬೇಕು ಎಂದು ಭಾವನಾ ಬೆಳಗೆರೆ ಆಗ್ರಹಿಸಿದ್ದಾರೆ.












