ಮಠ-ಮಾನ್ಯಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು, ಕುರ್ಚಿಗೆ ಕುತ್ತು ಬಂದಾಗ ಸ್ವಾಮೀಜಿಗಳನ್ನು ಬೀದಿಗಿಳಿಸಿ ಲಾಬಿ ನಡೆಸುವುದು ಇತ್ತೀಚಿನ ವರ್ಷಗಳಲ್ಲಿ ರಾಜ್ಯ ರಾಜಕಾರಣದ ಭಾಗವೇ ಆಗಿಬಿಟ್ಟಿದೆ.
ಆದರೆ, ಸಾಕ್ಷಾತ್ ನಡೆದಾಡುವ ದೇವರು ಎಂದೇ ಜನಜನಿತರಾದ ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರನ್ನು ಕೂಡ ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳುವ ರಾಜ್ಯದ ರಾಜಕಾರಣಿಗಳ ಆಘಾತಕಾರಿ ಲಜ್ಜೇಗೇಡಿತನ ಈಗ ಬಯಲಾಗಿದೆ.
ಜೀವಮಾನವಿಡೀ ಮೇರು ಆದರ್ಶದ, ದಾರ್ಶನಿಕ ಬದುಕು ಬದುಕಿದ ಶ್ರೀಗಳು, ಬರೋಬ್ಬರಿ ಅರ್ಧ ಶತಮಾನ ಕಾಲ ಲಕ್ಷಾಂತರ ಮಕ್ಕಳಿಗೆ ಆಶ್ರಯ ನೀಡಿ, ಊಟ, ವಸತಿ, ವಿದ್ಯೆಯನ್ನು ಧಾರೆ ಎರೆದು ಕರ್ನಾಟಕವಷ್ಟೇ ಅಲ್ಲದೆ, ದೇಶಾದ್ಯಂತ ಹಲವು ಪ್ರತಿಭಾವಂತರನ್ನು ನಾಡಿಗೆ ಕೊಟ್ಟವರು. ಬಸವಣ್ಣ ಕಾಯಕ ತತ್ವ ಮತ್ತು ದಾಸೋಹವನ್ನು ನಿರಂತರ ಪಾಲಿಸಿ, ಲಕ್ಷಾಂತರ ಜೀವಗಳಿಗೆ ಬದುಕು ಕೊಟ್ಟವರು. ಸರಳತೆ ಮತ್ತು ಸದಾಚಾರಗಳಿಂದಲೇ ಮನುಷ್ಯನೊಬ್ಬ ದೈವತ್ವಕ್ಕೆ ಏರಬಲ್ಲ ಎಂಬುದಕ್ಕೆ ಸಾರ್ವಕಾಲಿಕ ಮಾದರಿ ಎಂಬಂತೆ ಬದುಕಿದವರು. 2019ರಲ್ಲಿ ತಮ್ಮ 111ನೇ ವಯಸ್ಸಿಗೆ ಲಿಂಗೈಕ್ಯರಾದ ಸ್ವಾಮೀಜಿಗಳ, 114ನೇ ಜನ್ಮ ದಿನಾಚರಣೆ ನಿನ್ನೆ, ಏಪ್ರಿಲ್ 1ರಂದು ನಾಡಿನಾದ್ಯಂತ ಬಹಳ ಸಂಭ್ರಮದಿಂದ ಜರುಗಿದೆ. ಈ ಹಿಂದೆ ಸ್ವಾಮೀಜಿಗಳ ಪ್ರತಿ ವರ್ಷದ ಜನ್ಮ ದಿನಾಚರಣೆಗೆ ರಾಜಕೀಯ ನಾಯಕರ ಜಾತ್ರೆಯೇ ನೆರೆಯುತ್ತಿತ್ತು. ಆದರೆ ಈ ಬಾರಿ ಸಿಎಂ ಯಡಿಯೂರಪ್ಪ ಸೇರಿದಂತೆ ಯಾವೊಬ್ಬ ನಾಯಕರೂ ಮಠದತ್ತ ಮುಖ ಹಾಕಿಲ್ಲ!
ಕಳೆದ ಒಂದೂವರೆ ದಶಕದಲ್ಲಿ; ‘ಸಂಕಟ ಬಂದಾಗ ವೆಂಕಟರಮಣನ ನೆನೆವ’ ಹಲವು ರಾಜಕಾರಣಿಗಳ ಪಾಲಿಗೆ ತುಮಕೂರಿನ ಸಿದ್ದಗಂಗಾ ಮಠ ಸಂಕಷ್ಟಹರ ಕ್ಷೇತ್ರದಂತೆಯೇ ಆಗಿತ್ತು. ಅಧಿಕಾರ ಹೋದಾಗ, ವಚನಭ್ರಷ್ಟರಾದಾಗ, ಅಧಿಕಾರದ ಕುರ್ಚಿಗೆ ಸಂಚಕಾರ ಬಂದಾಗ, ಹೀಗೆ ರಾಜಕೀಯ ನಾಯಕರಿಗೆ ಸಂಕಷ್ಟ ಬಂದಾಗೆಲ್ಲಾ ಪರಿಹಾರದ ಅಭಯ ಹಸ್ತವಾಗಿ ಮಠ ಕಾಣಿಸುತ್ತಿತ್ತು.
ಅಷ್ಟೇ ಅಲ್ಲ; ಇಡೀ ಜಗತ್ತಿನಲ್ಲೇ ಇನ್ನಾರೂ ಮಾಡಲಾರದ ಮಟ್ಟಿನ ಮಾನವ ಸೇವೆ ಮಾಡಿದ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕು ಎಂಬ ಸಂಗತಿ ಮಠದ ಭಕ್ತರಷ್ಟೇ ಅಲ್ಲದೆ, ಇಡೀ ಕನ್ನಡ ನಾಡಿನ ಉದ್ದಗಲಕ್ಕೆ ಜನಮನದ ಆಗ್ರಹವೂ ಆಗಿತ್ತು. ಹಾಗೇ ಜನರ ಆ ಭಾವನೆಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಆ ಪಕ್ಷಗಳ ಮುಖಂಡರು ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬುದನ್ನೇ ರಾಜಕೀಯ ಅಜೆಂಡಾದಂತೆ ಬಳಸಿಕೊಂಡಿದ್ದರು. ಬಿಜೆಪಿ ಅಧಿಕಾರದಲ್ಲಿರುವಾಗ ಕಾಂಗ್ರೆಸ್, ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಬಿಜೆಪಿ ಮತ್ತು ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಜೆಡಿಎಸ್ ಶ್ರೀಗಳ ಭಾರತ ರತ್ನ ವಿಷಯವನ್ನೇ ಮುಂದಿಟ್ಟುಕೊಂಡು ಅಭಿಯಾನ, ಆಗ್ರಹ, ಹೋರಾಟಗಳನ್ನೂ ಮಾಡಿದ್ದವು.

ಸುಮಾರು ಎರಡು ದಶಕಗಳಿಂದಲೂ ಶ್ರೀಗಳಿಗೆ ಭಾರತ ರತ್ನ ಘೋಷಿಸಬೇಕು ಎಂಬ ಮಾತು ಕೇಳಿಬರುತ್ತಿದ್ದರೂ, 2007ರಲ್ಲಿ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಿಂದ ಆ ಕೂಗು ಜೋರಾಗಿತ್ತು. 2014-15ರ ಹೊತ್ತಿಗೆ ಶ್ರೀಗಳಿಗೆ 108 ತುಂಬಿದಾಗಲಂತೂ ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ಬೃಹತ್ ಆಂದೋಲನವನ್ನೇ ನಡೆಸಿ ಶ್ರೀಗಳಿಗೆ ಭಾರತ ರತ್ನ ಕೊಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಶಿಫಾರಸು ಮಾಡಬೇಕು. ರಾಜ್ಯ ಸರ್ಕಾರ ಶಿಫಾರಸು ಮಾಡಿದರೆ, ಕೇಂದ್ರದ ತಮ್ಮದೇ ಪಕ್ಷದ ನರೇಂದ್ರ ಮೋದಿಯವರ ಸರ್ಕಾರ ಮರುಕ್ಷಣವೇ ಭಾರತ ರತ್ನ ಘೋಷಿಸಲಿದೆ ಎಂದು ಹೇಳಿತ್ತು. ಹಾಲಿ ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ನಾಯಕರು ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದರು ಕೂಡ.
ಹಾಗೇ, ಸ್ವಾಮೀಜಿಗಳಿಗೆ ಭಾರತ ರತ್ನ ಕೊಡುವಂತೆ ನಾವು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬೇಡಿಕೊಂಡರೂ, ಅಂಗಾಲಾಚಿದರೂ ಕೊಡಲಿಲ್ಲ ಎಂದು ಸ್ವತಃ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕೂಡ ಹೇಳಿದ್ದರು. ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಕೂಡ ಈ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಸಾಕಷ್ಟು ದನಿ ಎತ್ತಿದ್ದರು ಕೂಡ.
ಆದರೆ, ಇದೇ ನಾಯಕರುಗಳು ಸ್ವತಃ ತಾವೇ ಅಧಿಕಾರದಲ್ಲಿದ್ದಾಗ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಹೆಸರು ಸೂಚಿಸಿದ್ದರೆ ಎಂಬುದು ಪ್ರಶ್ನೆ. ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ‘ದ ಫೈಲ್’ ಸುದ್ದಿ ಜಾಲತಾಣದ ಹಿರಿಯ ಪತ್ರಕರ್ತ ಜಿ ಮಹಾಂತೇಶ್ ಅವರು ‘2008ರಿಂದ 2019-20ನೇ ಸಾಲಿನವರೆಗೆ ಭಾರತ ರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಸಾಧಕರ ಹೆಸರುಗಳ ಪಟ್ಟಿ’ ನೀಡುವಂತೆ ಕೋರಿ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ರಾಜ್ಯ ಸರ್ಕಾರ ನೀಡಿರುವ ಉತ್ತರ, ಆಘಾತಕಾರಿ ಸಂಗತಿಯನ್ನು ಬಯಲು ಮಾಡಿದೆ! 2008ರಿಂದ, ಅಂದರೆ, ಮಾತೆತ್ತಿದರೆ ತಾವು ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಹೇಳುವ ಸಿಎಂ ಯಡಿಯೂರಪ್ಪ ಅವರ ಮೊದಲ ಅವಧಿಯಿಂದ, ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಗೋಗರೆದರೂ ಕೇಂದ್ರ ಸರ್ಕಾರ ನೀಡಲಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಅವಧಿ ಮತ್ತು ಬಳಿಕ ಕುಮಾರಸ್ವಾಮಿ ಅವರ ಸಿಎಂ ಅವಧಿಯವರೆಗೆ ರಾಜ್ಯ ಸರ್ಕಾರ, ಭಾರತ ರತ್ನ ಪ್ರಶಸ್ತಿಗೆ ರಾಜ್ಯದಿಂದ ಸ್ವಾಮೀಜಿ ಸೇರಿ ಯಾರೊಬ್ಬರ ಹೆಸರನ್ನೂ ಶಿಫಾರಸು ಮಾಡಿಯೇ ಇಲ್ಲ ಎಂದು ಸ್ವತಃ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಎಸ್ ರೋಹಿಣಿ ಅವರು ಲಿಖಿತ ಉತ್ತರ ನೀಡಿದ್ದಾರೆ!
2008ರಿಂದ ಈವರೆಗೆ ಬಿಜೆಪಿ ಸರ್ಕಾರದಲ್ಲಿ ಬಿ ಎಸ್ ಯಡಿಯೂರಪ್ಪ(ಮೂರು ಬಾರಿ), ಸದಾನಂದ ಗೌಡ, ಜಗದೀಶ್ ಶೆಟ್ಟರ್, ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರುಗಳು ಮುಖ್ಯಮಂತ್ರಿಗಳಾಗಿದ್ದಾರೆ. ಆದರೂ ಹತ್ತು ವರ್ಷಗಳಲ್ಲಿ ಒಮ್ಮೆ ಕೂಡ ನಡೆದಾಡುವ ದೇವರ ಹೆಸರನ್ನು ಯಾವ ಮುಖ್ಯಮಂತ್ರಿಯೂ ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿಲ್ಲ ಮತ್ತು ಅವರಿಗೆ ಭಾರತ ರತ್ನ ಕೊಡಿ ಎಂದು ಅಧಿಕೃತವಾಗಿ ವ್ಯವಹರಿಸಿಲ್ಲ ಎಂಬ ಆಘಾತಕಾರಿ ಸಂಗತಿಯನ್ನು ಮಹಾಂತೇಶ್ ಅವರ ಮಾಹಿತಿ ಹಕ್ಕು ಅರ್ಜಿ ಬಯಲಿಗೆಳೆದಿದೆ!
ಈ ಬಗ್ಗೆ ಪ್ರತಿಕ್ರಿಯಿಸಿದ ಜಿ ಮಹಾಂತೇಶ್, “ಆರಂಭದಲ್ಲಿ ಈ ಮಾಹಿತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗ, ರಾಜ್ಯ ಬಿಜೆಪಿ ಸರ್ಕಾರ, ಅದು ಗೌಪ್ಯ ಮಾಹಿತಿಯಾಗಿದ್ದು ಬಹಿರಂಗಪಡಿಸಲಾಗದು ಎಂದು ಮಾರುತ್ತರ ನೀಡಿತ್ತು. ಆದರೆ, ಪಟ್ಟುಬಿಡದೆ ಮೇಲ್ಮನವಿ ಸಲ್ಲಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಭಾರತ ರತ್ನಕ್ಕೆ ಸೂಚಿಸುವ ಹೆಸರು ಗೌಪ್ಯ ಮಾಹಿತಿ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದನ್ನು ಮನವರಿಕೆ ಮಾಡಿದ ಬಳಿಕ ‘2008ರಿಂದ 2019-20ರವರೆಗೆ ರಾಜ್ಯ ಸರ್ಕಾರ ಯಾವುದೇ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಸೂಚಿಸಿಲ್ಲ’ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಇದು ಸ್ವಾಮೀಜಿಗಳ ವಿಷಯದಲ್ಲಿ ರಾಜ್ಯದ ಮೂರೂ ಪಕ್ಷಗಳ ಮುಖವಾಡ ಬಯಲು ಮಾಡಿದೆ” ಎಂದು ಹೇಳಿದರು.
ಹೌದು, ಧರ್ಮ, ದೇವರು, ಮಠಮಾನ್ಯಗಳನ್ನು ರಾಜಕೀಯ ದಾಳವಾಗಿಸಿಕೊಂಡು ಅಧಿಕಾರ ಹಿಡಿಯುವ ಹೀನಾಯ ಪ್ರವೃತ್ತಿಯೇ ರಾಜಕಾರಣದ ಅಸಲೀ ಮುಖವಾಗಿರುವಾಗಿದೆ. ಇಂತಹ ಲಜ್ಜೆಗೇಡಿ ರಾಜಕಾರಣ, ನಡೆದಾಡುವ ದೇವರು ಎಂದೇ ಜಗತ್ತು ಆರಾಧಿಸುವ ಸಿದ್ದಗಂಗಾ ಸ್ವಾಮೀಜಿಗಳ ವಿಷಯದಲ್ಲಿ ಕೂಡ ನಡೆದಿದೆ ಎಂಬುದು ನಾಚಿಕೆಗೇಡಿನ ಸಂಗತಿ. ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ವಿಷಯವನ್ನು ಕೂಡ ರಾಜಕೀಯ ಬೇಳೆ ಬೇಯಿಸಲು ಯಾವ ತಾರತಮ್ಯವಿಲ್ಲದೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಬಳಸಿಕೊಂಡಿವೆ ಎಂಬುದು ಈ ರಾಜಕೀಯ ಪಕ್ಷಗಳು ಮತ್ತು ಆ ಪಕ್ಷಗಳ ಮುಖಂಡರ ನೈತಿಕ ದಿವಾಳಿತನಕ್ಕೆ ನಿದರ್ಶನವಲ್ಲವೆ?