ಭಾವಚಿತ್ರ-ಪುತ್ಥಳಿಗಳಿಂದಾಚೆಗೆ ಜೀವಂತಿಕೆಯಿಂದಿರುವ ಬೌದ್ಧಿಕ-ಸೈದ್ಧಾಂತಿಕ ಶಕ್ತಿಯಾಗಿ ನೋಡಬೇಕಿದೆ
ಭಾರತದ ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ ರಾಜಕೀಯ ವಿಪ್ಲವಗಳ ನಡುವೆ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದು ಅಜರಾಮರವಾಗಿರುವ ಶಹೀದ್ ಭಗತ್ ಸಿಂಗ್ ವರ್ತಮಾನದ ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ ಎನಿಸುತ್ತಾನೆ. ಬ್ರಿಟೀಷ್ ವಸಾಹತು ಆಳ್ವಿಕೆಯ ಕ್ರೌರ್ಯ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದ ತಣ್ಣನೆಯ ಮೌನದ ನಡುವೆ ಸಿಲುಕಿ ತನ್ನ 23ನೆಯ ವಯಸ್ಸಿನಲ್ಲೇ ಗಲ್ಲಿಗೇರಿದ ಈ ಯುವಕ ಸ್ವಾತಂತ್ರ್ಯಾನಂತರದಲ್ಲಿ ಹಲವು ದಶಕಗಳ ಕಾಲ ಜನಸಾಮಾನ್ಯರ ದೃಷ್ಟಿಯಿಂದ ಅಜ್ಞಾತವಾಗಿದ್ದುದು ವಿಪರ್ಯಾಸ ಎನಿಸಿದರೂ ವಾಸ್ತವ. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ನಿವೃತ್ತ ಪ್ರೊಫೆಸರ್, ಭಾರತೀಯ ಭಾಷಾ ಕೇಂದ್ರದ ಮಾಜಿ ಅಧ್ಯಕ್ಷ ಚಮನ್ ಲಾಲ್ ಅವರು ಭಗತ್ ಸಿಂಗ್‌ನ ಜೀವನ ಮತ್ತು ಹೋರಾಟದ ಹಾದಿಗಳನ್ನು ವ್ಯವಸ್ಥಿತವಾಗಿ ದಾಖಲಿಸದೆ ಹೋಗಿದ್ದರೆ ಬಹುಶಃ ಭಗತ್ ಸಿಂಗ್ ಬಹುಮಟ್ಟಿಗೆ ಅಜ್ಞಾತವಾಗಿಯೇ ಉಳಿದುಹೋಗುತ್ತಿದ್ದ ಎನಿಸುತ್ತದೆ.

ಏನೇ ಆದರೂ ಭಗತ್ ಸಿಂಗ್ ಇಂದು ಎಲ್ಲರೊಳಗೊಂದಾದ ಓರ್ವ ಕ್ರಾಂತಿಕಾರಿ ಸ್ವಾತಂತ್ರ್ಯ ಸಂಗ್ರಾಮಿಯಾಗಿ ಭಾರತದ ಜನಮಾನಸದ ನಡುವೆ ಕಾಣುತ್ತಾನೆ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದು ಹೋರಾಡಿ ಪ್ರಾಣತೆತ್ತ ಸಾವಿರಾರು ಜನರ ನಡುವೆ ಧೃವತಾರೆಯಂತೆ ಭಗತ್ ಸಿಂಗ್ ಧ್ವನಿಸಲು ಕಾರಣ ಅವನ ಸಮಕಾಲೀನ ಪ್ರಸ್ತುತತೆ ಮತ್ತು ಚಾರಿತ್ರಿಕ ಹೆಜ್ಜೆಗಳು. ಸೋವಿಯತ್ ಕ್ರಾಂತಿಯಿಂದ ಪ್ರಭಾವಿತನಾಗಿ ತನ್ನ ರಾಜಕೀಯ ಹೋರಾಟವನ್ನು ರೂಪಿಸಿಕೊಂಡಿದ್ದ ಭಗತ್ ಸಿಂಗ್ ತನ್ನ ಕ್ರಾಂತಿಯ ಹಾದಿಯನ್ನು ಕ್ರಮಿಸುತ್ತಲೇ ಬ್ರಿಟೀಷ್ ವಸಾಹತು ದಬ್ಬಾಳಿಕೆಯ ವಿರುದ್ಧ, ಆಗ ಪ್ರಬಲವಾಗಿದ್ದ ಕೈಗಾರಿಕಾ ಬಂಡವಾಳಶಾಹಿಯ ವಿರುದ್ಧ ಹಾಗೂ ಭಾರತೀಯ ಸಮಾಜದ ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಗಳ ವಿರುದ್ಧ ತನ್ನದೇ ಆದ ಸೈದ್ಧಾಂತಿಕ ನೆಲೆಯಲ್ಲಿ ಜನಸಾಮಾನ್ಯರ ನಡುವೆ ಗುರುತಿಸಿಕೊಂಡಿದ್ದರಿಂದಲೇ, ಇಂದಿಗೂ ಸಹ ಅವನ ಕ್ರಾಂತಿಕಾರಕ ಧ್ವನಿ ನೊಂದವರ ನಡುವೆ, ಶೋಷಿತರ ನಡುವೆ ಪ್ರತಿಧ್ವನಿಸುತ್ತಲೇ ಇರುತ್ತದೆ.
ಸ್ವಾತಂತ್ರ್ಯ ಮತ್ತು ವಿಮೋಚನೆ
ಭಗತ್ ಸಿಂಗ್ ದೃಷ್ಟಿಯಲ್ಲಿ ಭಾರತದ ವಿಮೋಚನೆ ಎಂದರೆ ಕೇವಲ ಅಧಿಕಾರ ಹಸ್ತಾಂತರ ಆಗಿರಲಿಲ್ಲ. ಶತಮಾನಗಳ ದಾಸ್ಯಕ್ಕೊಳಗಾಗಿದ್ದ, ಜಾತಿ ಶ್ರೇಣಿಯಲ್ಲಿ ಕೆಳಸ್ತರದಲ್ಲಿದ್ದ ದೇಶದ ಬಹುಪಾಲು ಶೋಷಿತ ಸಮುದಾಯಗಳ ವಿಮೋಚನೆಯಿಲ್ಲದೆ ರಾಜಕೀಯ ಸ್ವಾತಂತ್ರ್ಯ ಅರ್ಥಹೀನವಾಗುತ್ತದೆ ಎಂದು ಪ್ರತಿಪಾದಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯ ಮತ್ತೊಂದು ಆಯಾಮವನ್ನು ಭಗತ್ ಸಿಂಗ್ ಪ್ರತಿಪಾದಿಸಿದ ಕ್ರಾಂತಿಕಾರಕ ಆಂದೋಲನದಲ್ಲಿ ಗುರುತಿಸಬಹುದಾಗಿತ್ತು. ಮಾರ್ಕ್ಸ್‌ವಾದದಿಂದ ಪ್ರೇರಿತನಾಗಿದ್ದ ಭಗತ್ ಸಿಂಗ್ ಭಾರತದ ಶ್ರಮಿಕ ವರ್ಗಗಳನ್ನು ಬಂಡವಾಳಶಾಹಿಯ ದಾಸ್ಯದಿಂದ ಬಿಡುಗಡೆ ಮಾಡುವ ದೃಢ ಸಂಕಲ್ಪದೊಂದಿಗೆ ತನ್ನದೇ ಆದ ಕ್ರಾಂತಿಕಾರಿ ಮಾರ್ಗಗಳನ್ನು ಅನುಸರಿಸಿದ್ದ. ಕ್ರಾಂತಿ ಎಂದರೆ ಹಿಂಸಾವಾದ ಅಥವಾ ಕಮ್ಯುನಿಸಂ ಎಂದರೆ ಹಿಂಸಾವಾದ ಎಂಬ ಸಮೀಕರಣಗಳನ್ನು ಅಲ್ಲಗಳೆದು, ಶೋಷಿತ ಸಮುದಾಯಗಳಿಗೆ, ಜಾತಿ-ಮತ-ಧರ್ಮಗಳ ಗಡಿರೇಖೆಗಳನ್ನು ಮೀರಿ, ದಾಸ್ಯದಿಂದ ವಿಮೋಚನೆ ಗಳಿಸುವ ಒಂದು ತಾತ್ವಿಕ ನಿಲುವಿನೊಂದಿಗೆ ಭಗತ್ ಸಿಂಗ್ ಬ್ರಿಟೀಷರ ವಿರುದ್ಧ ತನ್ನ ಹೋರಾಟ ನಡೆಸಿದ್ದ. ಆದರೆ ಸ್ವಾತಂತ್ರ್ಯ ಚಳುವಳಿಯ ಅನೇಕರಿಗೆ ಭಗತ್ ಸಿಂಗ್ ಒಬ್ಬ ಹಿಂಸಾವಾದಿಯಾಗಿಯೇ ಕಂಡಿದ್ದುದು ವಿಪರ್ಯಾಸ.

ಏನೇ ಇರಲಿ ಹುತಾತ್ಮ ಭಗತ್ ಸಿಂಗ್ ವರ್ತಮಾನದ ಭಾರತಕ್ಕೆ ಹೇಗೆ ಅಥವಾ ಎಷ್ಟರ ಮಟ್ಟಿಗೆ ಪ್ರಸ್ತುತನಾಗುತ್ತಾನೆ ಎಂಬ ಪ್ರಶ್ನೆಯೊಂದಿಗೆ ನಾವು ಅವನ ಭಾವಚಿತ್ರ ಅಥವಾ ಪುತ್ಥಳಿಗಳ ಮುಂದೆ ನಿಲ್ಲಬೇಕಿದೆ. “ ಇನ್‌ಕ್ವಿಲಾಬ್ ಜಿಂದಾಬಾದ್ ” ಅಥವಾ “ ಕ್ರಾಂತಿ ಚಿರಾಯುವಾಗಲಿ ” ಎಂಬ ಘೋಷಣೆಗೆ ಒಂದು ಅಧಿಕೃತತೆಯನ್ನು ನೀಡಿದ್ದ ಭಗತ್ ಸಿಂಗ್ ತಾನು ಅನುಸರಿಸಿದ ಹಾದಿಯನ್ನು ಮುನ್ನಡೆಸುವ ಜವಾಬ್ದಾರಿ ಹೊರಿಸಿದ್ದು ಈ ದೇಶದ ಯುವ ಸಮುದಾಯದ ಮೇಲೆ. ದುರಂತ ಎಂದರೆ ನಾಲ್ಕುದಶಕಗಳ ಕಾಲ ಈ ದೇಶದ ಯುವ ಸಮುದಾಯಕ್ಕೆ ಭಗತ್ ಸಿಂಗ್‌ನ ಧ್ಯೇಯೋದ್ದೇಶಗಳ, ಉನ್ನತ ಆದರ್ಶಗಳ ಪರಿಚಯವೇ ಆಗಿರಲಿಲ್ಲ. ತದನಂತರ ಆತನ ಜೀವನ ಚರಿತ್ರೆ ಮತ್ತು ಜೈಲು ದಿನಚರಿಯ ಹಾಳೆಗಳು ಸಾರ್ವಜನಿಕರ ನಡುವೆ ತೆರೆದುಕೊಂಡಂತೆಲ್ಲಾ ಭಗತ್ ಸಿಂಗ್ ಆಧುನಿಕ ಭಾರತದ ಯುವ ಸಂಕುಲಕ್ಕೆ ಅಪ್ಯಾಯಮಾನವಾಗತೊಡಗಿದ್ದು ವಾಸ್ತವ.
ಆದರೆ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದ ಬೂರ್ಷ್ವಾ ರಾಜಕೀಯ ಪಕ್ಷಗಳಿಗೆ ಭಗತ್ ಸಿಂಗ್ ಕೇವಲ ರಾಜಕೀಯ ಲಾಂಛನವಾಗಿ ಕಂಡುಬಂದನೇ ಹೊರತು, ಅನುಕರಣೀಯ ಕ್ರಾಂತಿಕಾರಿಯಾಗಿ ಇಂದಿಗೂ ಕಂಡುಬಂದಿಲ್ಲ. ರಾಮಮಂದಿರಕ್ಕಾಗಿ ನಡೆದ ಆಂದೋಲನದಲ್ಲೂ ಭಗತ್ ಸಿಂಗ್‌ನ ಭಾವಚಿತ್ರ ರಾರಾಜಿಸಿದ್ದು ಇದನ್ನೇ ಸೂಚಿಸಿತ್ತು. ಯುವ ಸಮುದಾಯದ ನಡುವೆ ಸಮಾಜ ಪರಿವರ್ತನೆಯ ಹಾಗೂ ವ್ಯವಸ್ಥೆಯನ್ನು ಬದಲಾಯಿಸುವ ಧೋರಣೆಯನ್ನು ಉದ್ಧೀಪನಗೊಳಿಸಲು ಒಂದು ಬೌದ್ಧಿಕ ಶಕ್ತಿಯಾಗಬೇಕಿದ್ದ ಭಗತ್ ಸಿಂಗ್ ರಾಜಕೀಯ ವಲಯದಲ್ಲಿ ಮರುಸ್ಥಾಪನೆಯಾಗಿದ್ದು ವರ್ತಮಾನದ ರಾಜಕೀಯ ಸಿದ್ಧಾಂತಗಳ ವಾಹಕನಾಗಿ. ಇಂದಿಗೂ ವ್ಯಾಪಕವಾಗಿ ಕಂಡುಬರುವ ಭಗತ್ ಸಿಂಗ್ ಸೇನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಆತನ ಸೈದ್ಧಾಂತಿಕ ನಿಲುಮೆ ಮತ್ತು ಚಾರಿತ್ರಿಕ ಪ್ರಜ್ಞೆ ನಗಣ್ಯವಾಗಿರುವುದನ್ನು ಗುರುತಿಸಬಹುದು. ಭಗತ್ ಸಿಂಗ್ ಪ್ರತಿಪಾದಿಸಿದ ದೇಶಪ್ರೇಮದ ವ್ಯಾಖ್ಯಾನದಲ್ಲಿ ದೇಶ ಎನ್ನುವುದು ಭೌಗೋಳಿಕವಾಗಿರಲಿಲ್ಲ. ಬದಲಾಗಿ 150 ವರ್ಷಗಳ ವಸಾಹತು ದಾಸ್ಯಕ್ಕೊಳಗಾಗಿದ್ದ ಭಾರತದ ದುಡಿಯುವ ವರ್ಗಗಳ, ಶೋಷಿತ ಜನರ ಹಾಗೂ ತುಳಿತಕ್ಕೊಳಗಾದ ಅಪಾರ ಜನಸ್ತೋಮದ ಒಂದು ಚೌಕಟ್ಟಾಗಿತ್ತು.
ದೇಶಪ್ರೇಮದ ಹೊಸ ಆಯಾಮ
ಇಂದು ವ್ಯಾಖ್ಯಾನಿಸಲಾಗುತ್ತಿರುವ ದೇಶಪ್ರೇಮ ಅಥವಾ ದೇಶಭಕ್ತಿಯ ಭಾವನಾತ್ಮಕ ಚೌಕಟ್ಟುಗಳಿಂದಾಚೆಗೆ ಭಗತ್ ಸಿಂಗ್ ನಿಲ್ಲುತ್ತಾನೆ. ಹಾಗಾಗಿಯೇ ಬದಲಾಗುತ್ತಿರುವ ಭಾರತದ ಯುವ ಸಮುದಾಯಕ್ಕೆ ಭಗತ್ ಸಿಂಗ್ ಇನ್ನೂ ಹೆಚ್ಚು ನಿಕಟವಾಗುತ್ತಾನೆ, ಅಪ್ಯಾಯಮಾನವಾಗುತ್ತಾನೆ, ಅನುಕರಣೀಯವಾಗುತ್ತಾನೆ. ಒಂದು ವರದಿಯ ಪ್ರಕಾರ ಭಾರತ ಶೇ 66ರಷ್ಟು ಜನಸಂಖ್ಯೆ, ಅಂದರೆ 80 ಕೋಟಿಗೂ ಹೆಚ್ಚು , 35 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಬೃಹತ್ ಯುವಸ್ತೋಮ ಭವಿಷ್ಯ ಭಾರತದ ಬುನಾದಿಯಷ್ಟೇ ಅಲ್ಲದೆ , ಸಾಮಾಜಿಕ ಅಖಂಡತೆ ಮತ್ತು ಸಾಂಸ್ಕೃತಿಕ ಸಮನ್ವಯತೆಯನ್ನು ಮುಂದೊಯ್ಯುವ ದಿಕ್ಸೂಚಿ ಸಮೂಹವೂ ಆಗಿ ಕಾಣುತ್ತದೆ. ಈ ಯುವ ಸಮುದಾಯಗಳು ಇಂದು ಎದುರಿಸುತ್ತಿರುವ ಹಲವು ಆಯಾಮಗಳ ಸವಾಲುಗಳ ನಡುವೆ ಭಗತ್ ಸಿಂಗ್ ಹೇಗೆ ಪ್ರಸ್ತುತ ಎನಿಸುತ್ತಾನೆ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.
ಗಾಂಧಿ ಅನುಸರಿಸಿದ ಅಹಿಂಸಾವಾದ, ಅಂಬೇಡ್ಕರರ ಪ್ರಜಾಸತ್ತಾತ್ಮಕ ಸಮಾಜವಾದ ಮತ್ತು ಸಂಪ್ರದಾಯವಾದಿಗಳ ಧರ್ಮಾಧಾರಿತ ರಾಜಕಾರಣ, ಈ ಮೂರೂ ನೆಲೆಗಳಿಂದ ಭಿನ್ನವಾಗಿ ಕಾಣುವ ಭಗತ್ ಸಿಂಗ್ ಕ್ರಾಂತಿಕಾರಿಯಾಗಿ ಕಾಣುವುದು ಆಳುವ ವರ್ಗಗಳ ವಿರುದ್ಧದ ಪ್ರತಿರೋಧದ ನೆಲೆಯಲ್ಲಿ. ಸ್ವಾತಂತ್ರ್ಯಪೂರ್ವದ ಕೈಗಾರಿಕಾ ಬಂಡವಾಳಶಾಹಿಗಿಂತಲೂ ಕ್ರೂರ ಎನಿಸುವ ನವ ಉದಾರವಾದದ ಕಾರ್ಪೋರೇಟ್ ಬಂಡವಾಳಶಾಹಿಯು ದೇಶದ ಯುವ ಸಮುದಾಯಗಳನ್ನು ಶಾಶ್ವತ ಅಭದ್ರತೆ ಮತ್ತು ಅನಿಶ್ಚಿತತೆಯೆಡೆಗೆ ದೂಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಶ್ರಮಜೀವಿಗಳ ಜೀವನ-ಜೀವನೋಪಾಯ ಹಾಗೂ ಭವಿಷ್ಯವನ್ನು ಕಾಪಾಡುವ ಭಗತ್ ಸಿಂಗ್‌ನ ತಾತ್ವಿಕ ನಿಲುವುಗಳು ಖಂಡಿತವಾಗಿಯೂ ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತವೆ.
ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತ ಅತಿ ಹೆಚ್ಚು ನಿರುದ್ಯೋಗಿಗಳನ್ನೂ ಸೃಷ್ಟಿಸುತ್ತಿದೆ. ಈ ಯುವ ಸಮೂಹದಲ್ಲಿ ಉಂಟಾಗಬಹುದಾದ ತಲ್ಲಣಗಳ ನಿವಾರಣೆಗಾಗಿ ಸುಸ್ಥಿರ ಬದುಕಿನ ಮಾರ್ಗಗಳನ್ನು ನಿರ್ಮಿಸಬೇಕಾದ ಆಳುವ ವರ್ಗಗಳು ಮಾರುಕಟ್ಟೆ ಆರ್ಥಿಕತೆಯ ಆರಾಧಕರಾಗಿ ಇನ್ನೂ ಹೆಚ್ಚಿನ ತಾರತಮ್ಯಗಳನ್ನು ಸೃಷ್ಟಿಸುತ್ತಿವೆ. ಯುವ ಸಮೂಹವನ್ನು ನಿತ್ಯ ಬದುಕಿನ ಒಳಬಿರುಕುಗಳಿಂದ ವಿಮುಖಗೊಳಿಸುವ ಸಲುವಾಗಿಯೇ ಜಾತಿ ಅಸ್ಮಿತೆಗಳನ್ನು, ಮತೀಯವಾದ-ಕೋಮುವಾದವನ್ನು, ಪ್ರಾದೇಶಿಕತೆಯನ್ನು ಪೋಷಿಸುತ್ತಾ, ಭಾವಾತಿರೇಕದ ಕೂಪಕ್ಕೆ ದೂಡಲಾಗುತ್ತಿದೆ. ನಿರ್ದಿಷ್ಟ ಜಾತಿ-ಧರ್ಮಗಳ ಅಸ್ಮಿತೆಗಳಲ್ಲಿ ಬಂಧಿತವಾಗಿರುವ ಯುವ ಸಮೂಹ ತನ್ನೆದುರಿನಲ್ಲೇ ನಡೆಯುವ ದೌರ್ಜನ್ಯ, ಅತ್ಯಾಚಾರ, ಹತ್ಯೆ ಹಾಗೂ ಸಾಮಾಜಿಕ ಅನ್ಯಾಯಗಳಿಗೂ ಮೌನ ಪ್ರೇಕ್ಷಕರಾಗುವ ಒಂದು ವಾತಾವರಣವನ್ನು ರಾಜಕೀಯ ವ್ಯವಸ್ಥೆ ನಿರ್ಮಿಸಿದೆ.
ಭಾರತದ ಒಡಲಲ್ಲಿರುವ ಬೃಹತ್ ಯುವ ಸಮೂಹವನ್ನು ತನ್ನ ಭವಿಷ್ಯದ ಮಾರುಕಟ್ಟೆಯಲ್ಲಿ ಅಗ್ಗದ ಕೂಲಿಗಳಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ನವ ಉದಾರವಾದಿ ಆರ್ಥಿಕತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲೂ ತನ್ನ ಬೇರುಗಳನ್ನು ಹರಡುತ್ತಿದ್ದು, ವಿಶ್ವ ಮಾರುಕಟ್ಟೆಯ ಬಂಡವಾಳ ವೃದ್ಧಿಗಾಗಿ ಬೌದ್ಧಿಕ ಸರಕುಗಳನ್ನು ಉತ್ಪಾದಿಸಲು ವಿಶ್ವವಿದ್ಯಾಲಯಗಳನ್ನು ತಯಾರು ಮಾಡುತ್ತಿವೆ. ಇಲ್ಲಿ ಉತ್ಪಾದಿಸಲ್ಪಡುವ ಬೌದ್ಧಿಕ ಸರಕುಗಳು ಸುತ್ತಲ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳಿಗೆ ವಿಮುಖವಾಗುವಂತೆ ಮಾಡಲು ಆಧುನಿಕ ಡಿಜಿಟಲ್ ಮಾಧ್ಯಮಗಳನ್ನೂ, ಸಾಮಾಜಿಕ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿರುವ ಕಾರ್ಪೋರೇಟ್ ಮಾರುಕಟ್ಟೆ, ತಾನೇ ಸೃಷ್ಟಿಸುತ್ತಿರುವ ಬಡವ-ಸಿರಿವಂತರ ನಡುವಿನ ಕಂದರಗಳನ್ನು ಸುಂದರ ಸರೋವರಗಳಂತೆ ಬಿತ್ತರಿಸುತ್ತಿವೆ. ಮತ್ತೊಂದೆಡೆ ಇದೇ ಯುವ ಸಮೂಹವು ಇತಿಹಾಸದ ಪರಿವೆ ಇಲ್ಲದೆ, ವರ್ತಮಾನದ ವಾಸ್ತವದ ಅರಿವು ಇಲ್ಲದೆ, ನವ ಭಾರತ ಜನಿಸಿದ್ದೇ 2014ರ ನಂತರ ಎಂಬ ಭ್ರಮೆಗೊಳಗಾಗಿದ್ದು , ಭಾರತದ ಬಹುತ್ವ ಸಾಂಸ್ಕೃತಿಕ ಬೇರುಗಳನ್ನೂ ಗಮನಿಸದೆ ಬಹುಸಂಖ್ಯಾವಾದದತ್ತ, ಮತಾಂಧತೆಯತ್ತ, ಮತೀಯ ರಾಷ್ಟ್ರೀಯತೆಯ ಕಡೆಗೆ ಮುಖ ಮಾಡುತ್ತಿದೆ.
ಭವಿಷ್ಯದ ಆಶಾದೀವಿಗೆಯಾಗಿ
ಹಾಗಾಗಿಯೇ ತಮ್ಮ ವರ್ತಮಾನದ ಬದುಕಿಗೆ ಆಸರೆ ನೀಡಿದ ಆಧುನಿಕ ಭಾರತದ ಸಾಮಾಜಿಕ-ಆರ್ಥಿಕ ಮುನ್ನಡೆಯನ್ನೂ, ಬಹುಸಾಂಸ್ಕೃತಿಕ ಸಮನ್ವಯದ ಹಾದಿಗಳನ್ನೂ ಮರೆತಿರುವ ಬೃಹತ್ ಯುವ ಸಮೂಹ ಬೌದ್ಧಿಕ ನಿಷ್ಕ್ರಿಯತೆಗೊಳಗಾಗಿದೆ. ತಮ್ಮ ಸುತ್ತಲೂ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳು, ಅತ್ಯಾಚಾರ, ಮರ್ಯಾದೆಗೇಡು ಹತ್ಯೆ, ಮತದ್ವೇಷ ಮತ್ತು ಜಾತಿ ದ್ವೇಷದ ಕೃತ್ಯಗಳು, ಅಸ್ಪೃಶ್ಯತೆಯಂತಹ ಹೀನಾಚರಣೆಗಳು, ಇದಾವುದೂ ಯುವ ಸಮೂಹದಲ್ಲಿರಬಹುದಾದ ನಾಗರಿಕ ಪ್ರಜ್ಞೆಯನ್ನು, ಸಾಮಾಜಿಕ ಅಂತಃಪ್ರಜ್ಞೆಯನ್ನು, ಸಾಂಸ್ಕೃತಿಕ ಅಂತರಾಳವನ್ನು ಕದಡುತ್ತಿಲ್ಲ. ಮಣಿಪುರದಲ್ಲಿ ನಡೆದ ಅಮಾಯಕ ಮಹಿಳೆಯರ ಬೆತ್ತಲೆ ಮೆರವಣಿಗೆ-ಅತ್ಯಾಚಾರಗಳಾಗಲೀ, ದಿನನಿತ್ಯ ವರದಿಯಾಗುತ್ತಿರುವ ನೂರಾರು ಅಸ್ಪೃಶ್ಯತೆ-ಅತ್ಯಾಚಾರ-ಹತ್ಯೆಗಳಾಗಲೀ ಈ ಯುವ ಸಮೂಹದಲ್ಲಿ ತಲ್ಲಣಗಳನ್ನು ಸೃಷ್ಟಿಸುತ್ತಿಲ್ಲ. ಜಾತಿ-ಮತ-ಧರ್ಮ ಹಾಗೂ ಸಾಮುದಾಯಿಕ ಅಸ್ಮಿತೆಗಳಿಂದ ವಿಘಟಿತವಾಗಿರುವ ಯುವ ಸಮುದಾಯವನ್ನು ಈ ತಲ್ಲಣಗಳಿಂದ ದೂರವಿರಿಸುವ ಸಲುವಾಗಿಯೇ ನವ ಉದಾರವಾದಿ ಮಾರುಕಟ್ಟೆ ಶಕ್ತಿಗಳು ಸಂವಹನ ಮಾಧ್ಯಮಗಳನ್ನೂ ವಶಪಡಿಸಿಕೊಂಡಿವೆ.

ಯಾವುದೇ ರೀತಿಯ ಅನ್ಯಾಯ ಅಥವಾ ದೌರ್ಜನ್ಯದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿ, ಹೊಸ ಸಮಾಜವನ್ನು ಕಟ್ಟುವ ಹಾದಿಯಲ್ಲಿ, ಮಾನವ ಸಮಾಜವನ್ನು ಕಾಡುವ ಪ್ರಾಚೀನ ನಡವಳಿಕೆಗಳು, ಆಚರಣೆಗಳು ಮತ್ತು ಅಮಾನುಷ ಪದ್ಧತಿಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ತನ್ನ ಕ್ರಾಂತಿಕಾರಕ ಹೋರಾಟವನ್ನು ರೂಪಿಸಿದ ಭಗತ್ ಸಿಂಗ್ ವರ್ತಮಾನದ ಭಾರತಕ್ಕೆ ಹೆಚ್ಚು ಪ್ರಸ್ತುತ ಎನಿಸುವುದು ಈ ಕಾರಣಕ್ಕಾಗಿಯೇ. ಭಗತ್ ಸಿಂಗ್ ಪುತ್ಥಳಿಯ ಮುಂದೆ ನಿಂತು “ಕ್ರಾಂತಿ ಚಿರಾಯುವಾಗಲಿ” ಎಂದು ಘೋಷಿಸುವ ಪ್ರತಿಯೊಂದು ಯುವ ಮನಸ್ಸಿನಲ್ಲೂ ಭಗತ್ ಸಿಂಗ್ ಇರುವುದೇ ಆದರೆ, ಆತ ಪ್ರತಿಪಾದಿಸಿದ ಕ್ರಾಂತಿಯ ಹಾದಿಯೂ ಜಾಗೃತವಾಗಿರಬೇಕು. ಕಣ್ಣೆದುರಿನ ದೌರ್ಜನ್ಯಗಳಿಗೆ ಜಾಣ ಮೌನ ವಹಿಸುವ ಸಾಂಸ್ಕೃತಿಕ ಅಸ್ಮಿತೆಯ ಚಿಂತನಾ ವಾಹಿನಿಗಳು ಯುವ ಸಮುದಾಯವನ್ನು ದಿಕ್ಕುತಪ್ಪಿಸುತ್ತಲೇ ಪರಿವರ್ತನೆಯ ಹಾದಿಯಿಂದ ವಿಮುಖವಾಗಿಸುತ್ತವೆ. ವಿಪರ್ಯಾಸವೆಂದರೆ ಈ ಚಿಂತನಾ ವಾಹಿನಿಗಳ ಮುಖಾಂತರವೇ ಭಗತ್‌ಸಿಂಗ್‌ನನ್ನು ತಮ್ಮವನನ್ನಾಗಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿರುತ್ತವೆ.
ಭವಿಷ್ಯ ಭಾರತವನ್ನು ಉಜ್ವಲಗೊಳಿಸಬೇಕಾದ ದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ಭಾರತದ ಯುವ ಜನತೆಗೆ ಭಗತ್ ಸಿಂಗ್‌ನ ಕ್ರಾಂತಿಕಾರಕ ಆಲೋಚನೆಗಳನ್ನು, ಹೋರಾಟದ ಹಾದಿಗಳನ್ನು ಹಾಗೂ ಅಭಿವ್ಯಕ್ತಿಯ ಸಾಧನಗಳನ್ನು ಪರಿಚಯಿಸುವ ದೊಡ್ಡ ಜವಾಬ್ದಾರಿ ಪ್ರಜ್ಞಾವಂತ ಸಮಾಜದ ಮೇಲಿದೆ. ಸೆಪ್ಟಂಬರ್ 28ರಂದು ಯುವ ಕ್ರಾಂತಿಕಾರಿಯನ್ನು ವೈಭವೀಕರಿಸಿ ಭಾವಾತಿರೇಕದ ದೇಶಭಕ್ತಿಯನ್ನು ಮೇಳೈಸುವುದಕ್ಕಿಂತಲೂ ಹೆಚ್ಚಾಗಿ ನಾವು ಭಗತ್ ಸಿಂಗ್ ಕನಸು ಕಂಡಿದ್ದ ಸಮತಾವಾದದ, ಸಮ ಸಮಾಜದ ತಾತ್ವಿಕ ನೆಲೆಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ತನ್ಮೂಲಕ ಭಾರತದ ಸಮನ್ವಯ ಸಂಸ್ಕೃತಿಯನ್ನು, ಪ್ರಜಾಪ್ರಭುತ್ವವನ್ನು, ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಮುನ್ನಡೆಯಬೇಕಿದೆ. 1929ರಲ್ಲಿ ಹುತಾತ್ಮನಾದ ಭಗತ್ ಸಿಂಗ್ 2029ರ ವೇಳೆಗಾದರೂ ಭಾರತದ ಯುವ ಸಮೂಹದ ಪ್ರತಿನಿಧಿಯಾಗಿ ಧ್ವನಿಸಲು ಸಾಧ್ಯವೇ ? ಉತ್ತರ ನಮ್ಮೊಳಗೇ ಇದೆ.
–ನಾ ದಿವಾಕರ





