ಹಾಗೆ ನೋಡಿದರೆ ಶಿಂಧೆಗಿಂತ ಮೊದಲೇ ಅಜಿತ್ ಪವಾರ್ 2019ರಲ್ಲೇ ಬಿಜೆಪಿ ಜೊತೆ ಹೋಗಿದ್ದರು. ನವೆಂಬರ್ ತಿಂಗಳಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದರು. ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ಅಜಿತ್ ಪವಾರ್ ಡಿಸಿಎಂ ಪಟ್ಟ ಅಲಂಕರಿಸಿದ್ದರು. ಆದರೆ ಈ ಮೈತ್ರಿಗೆ ಬಹುಮತ ಇಲ್ಲದ ಕಾರಣ ಮಹಾ ವಿಕಾಸ ಅಘಾಡಿ ಸರ್ಕಾರ ಅಸ್ವಿತ್ವಕ್ಕೆ ಬಂದಿತ್ತು.

2019 ರಿಂದ 2022ರವರೆಗೆ ಮಹಾ ವಿಕಾಸ ಅಘಾಡಿ ಸರ್ಕಾರ ಪತನವಾಗುವರೆಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು. ಶಿಂಧೆ ಸರ್ಕಾರ ರಚನೆಯಾದ ಬಳಿಕ ಅಜಿತ್ ಪವಾರ್ ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಆಗಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಅಜಿತ್ ಪವಾರ್ ಮುಂಬೈನಲ್ಲಿ ನಡೆದ ಎನ್‌ಸಿಪಿ ಸಭೆಗೆ ಗೈರಾಗಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಹೊಗಳಿ ಹೇಳಿಕೆ ನೀಡಿದ್ದರು.
ಮೇ ತಿಂಗಳಿನಲ್ಲಿ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸಂದರ್ಭದಲ್ಲಿ ಅಜಿತ್ ಪವಾರ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದು ಎಂದು ವರದಿ ಪ್ರಕಟವಾಗಿತ್ತು.

ರಾಜಕೀಯ ಎಂಬ ಚದುರಂಗದ ಆಟದಲ್ಲಿ ಅಂದು ಅಘಾಡಿ ಸರ್ಕಾರ ರಚನೆಯಲ್ಲಿ ಶರದ್ ಪವಾರ್ ಮುಖ್ಯ ಪಾತ್ರವನ್ನು ವಹಿಸಿದ್ದರು. ಚುನಾವಣೆಗೂ ಮೊದಲು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಶಿವಸೇನೆ ಜೊತೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಮಾಡಿಕೊಂಡಿದ್ದು ಬಹಳ ಅಚ್ಚರಿಗೆ ಕಾರಣವಾಗಿತ್ತು. ಆದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ 1 ವರ್ಷ ಬಾಕಿ ಇರುವಾಗ ಶಿಂಧೆ ಬಣ ಶಿವಸೇನೆ, ಬಿಜೆಪಿ ಜೊತೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮೈತ್ರಿ ಮಾಡಿಕೊಂಡಿದ್ದು ಹುಬ್ಬೇರುವಂತೆ ಮಾಡಿದೆ.

