“ಬೆಂಗಳೂರಿನಲ್ಲಿ ಕ್ವಾಂಟಮ್ ಕ್ಲಸ್ಟರ್ (Quantum Cluster) ಆರಂಭಿಸಲಾಗುತ್ತಿದ್ದು, ಶೀಘ್ರವೇ ಬೆಂಗಳೂರು ಕ್ವಾಂಟಮ್ ತಂತ್ರಜ್ಞಾನದ ರಾಜಧಾನಿಯಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ತಿಳಿಸಿದರು.

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ‘ಕ್ವಾಂಟಮ್ ಇಂಡಿಯಾ ಬೆಂಗಳೂರು’(Quantum India Bengaluru) ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಮಾತನಾಡಿದರು.
“ಮೊದಲ ಆವೃತ್ತಿಯ ಕ್ವಾಂಟಮ್ ಇಂಡಿಯಾ ಬೆಂಗಳೂರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಬಹಳ ಸಂತೋಷವಾಗಿದೆ. ತಂತ್ರಜ್ಞಾನವೇ ಭವಿಷ್ಯ. ಕರ್ನಾಟಕ ಅತ್ಯಂತ ಪ್ರತಿಭಾವಂತ ಮಾನವ ಸಂಪನ್ಮೂಲ ಹೊಂದಿರುವ ರಾಜ್ಯ. ಇಲ್ಲಿನ ಮಾನವ ಸಂಪನ್ಮೂಲಕ್ಕೆ ದೇಶದ ಯಾವುದೇ ಇತರೆ ನಗರಗಳು ಅಥವಾ ರಾಜ್ಯ ಪೈಪೋಟಿ ನೀಡಲು ಸಾಧ್ಯವಿಲ್ಲ. ನಾವು ನಮ್ಮ ನೆರೆ ರಾಜ್ಯಗಳ ಜೊತೆಗೆ ಮಾತ್ರ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಬೇರೆ ದೇಶಗಳ ಜೊತೆ ಸ್ಪರ್ಧೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

“ನಾವು ಬೆಂಗಳೂರಿನಲ್ಲಿ ಭದ್ರ ಬುನಾದಿ ನಿರ್ಮಿಸಿದ್ದು, ಹೀಗಾಗಿ ವಿಶ್ವದ ಎಲ್ಲಾ ಕಡೆಯಿಂದ ಜನರು ಇಲ್ಲಿಗೆ ಆಕರ್ಷಿತರಾಗಿ ಬರುತ್ತಿದ್ದಾರೆ. ನಿಮಗೆ ಅಗತ್ಯವಿರುವ ಬೆಂಬಲವನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. 20 ವರ್ಷಗಳ ಹಿಂದೆ ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೂತನವಾದ ಐಟಿ ನೀತಿ ಜಾರಿಗೆ ತಂದೆವು. ಅದರ ಪರಿಣಾಮವಾಗಿ ಇಂದು ಬೆಂಗಳೂರು ಬೆಳೆದಿದೆ. ವಿಶ್ವ ಬೆಂಗಳೂರಿನತ್ತ ತಿರುಗಿ ನೋಡುತ್ತಿದೆ. ಇದು ನಮ್ಮ ಶಕ್ತಿ” ಎಂದು ಹೇಳಿದರು.

“ನಮ್ಮ ಎರಡು ಹಾಗೂ ಮೂರನೇ ಹಂತದ ನಗರಗಳು ಕೂಡ ಅತ್ಯುತ್ತಮ ಮಾನವ ಸಂಪನ್ಮೂಲ ಹಾಗೂ ಮೂಲಸೌಕರ್ಯ ನೀಡಲಿದ್ದು, ನೀವು ಈ ಭಾಗಗಳತ್ತ ಗಮನಹರಿಸಬಹುದು. ನಮ್ಮ ರಾಜ್ಯದಲ್ಲಿ ಸುಮಾರು 300ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜು ಹೊಂದಿದೆ. ದಶಕಗಳ ಹಿಂದೆಯೇ ಭಾರತೀಯ ವಿಜ್ಞಾನ ಸಂಸ್ಥೆ ನಮ್ಮಲ್ಲಿ ಆರಂಭವಾಗಿತ್ತು. ಜವಾಹರ್ ಲಾಲ್ ನೆಹರೂ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ದಿಮಗಳನ್ನು ಆರಂಭಿಸಿ ಹೊಸ ಕ್ರಾಂತಿ ಆರಂಭಿಸಲಾಯಿತು. ಹೀಗಾಗಿ ನಾವು ಬಲಿಷ್ಠವಾಗಿ ಬೆಳೆದಿದ್ದೇವೆ” ಎಂದರು.

“ನಾವೆಲ್ಲರೂ ಸೇರಿ ಇಂದಿನಿಂದಲೇ ಕ್ವಾಂಟಮ್ ಯುಗದತ್ತ ಸಾಗೋಣ. ಈ ಕ್ಷೇತ್ರದಿಂದ ಸಾರ್ವಜನಿಕರ ಉದ್ದೇಶ ಈಡೇರಲಿ. ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ, ತಂತ್ರಜ್ಞಾನ ಆವಿಷ್ಕಾರದಲ್ಲಿ ಮುಂದೆ ಸಾಗೋಣ. ನಿಮಗೆ ಶಕ್ತಿ ತುಂಬುವಂತಹ ನೀತಿಗಳನ್ನು ನಮ್ಮ ಸರ್ಕಾರ ರೂಪಿಸಲಿದೆ. ಈ ಮೂಲಕ ಬೆಂಗಳೂರಿನಲ್ಲಿ ಹೊಸ ಕ್ರಾಂತಿಗೆ ಸಿದ್ಧರಾಗೋಣ” ಎಂದು ಕರೆ ನೀಡಿದರು.