ಬೆಂಗಳೂರು: ನಡು ರಸ್ತೆಯಲ್ಲೇ ಕಾರು ಚಾಲಕನ ಮೇಲೆ ಆಟೋ ಚಾಲಕ ಹಲ್ಲೆ ನಡೆಸಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಇಕೋಸ್ಪೇಸ್ ಸಿಗ್ನಲ್ ಬಳಿ ನಡೆದಿದೆ.
ಇಕೋಸ್ಪೇಸ್ ಸಿಗ್ನಲ್ ಬಳಿ ಅಕ್ಕಪಕ್ಕ ತೆರಳುತ್ತಿದ್ದ ಆಟೋ ರಿಕ್ಷಾಗೆ ಕಾರು ಸ್ವಲ್ಪ ಟಚ್ ಆಗಿದೆ ಎನ್ನಲಾಗಿದೆ. ಇಷ್ಟಕ್ಕೇ ಕೋಪಗೊಂಡ ಆಟೋ ಚಾಲಕ ವಾಹನದಿಂದ ಇಳಿದು ಪಕ್ಕದಲ್ಲಿ ತೆರಳುತ್ತಿದ್ದ ಕಾರು ಚಾಲಕನ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ.
ಸಾರ್ವಜನಿಕವಾಗಿ ಕಾರು ಚಾಲಕನ ಮೇಲೆ ಆಟೋ ಚಾಲಕ ಹಲ್ಲೆ ಮಾಡುತ್ತಿರುವ ದೃಶ್ಯ ಹಿಂಬದಿಯಲ್ಲಿ ಸಾಗುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಟೋ ಚಾಲಕನ ಪತ್ತೆ ಹಚ್ಚಿ ಸೂಕ್ತ ಕ್ರಮ
ಘಟನೆಯ ವಿಡಿಯೋವನ್ನು ಟ್ಟಿಟರ್’ನಲ್ಲಿ ಬೆಂಗಳೂರು ಸಂಚಾರ ಪೊಲೀಸರು, ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ.
ಈ ಟ್ವೀಟ್’ಗೆ ಪ್ರತಿಕ್ರಿಯಿಸಿದ ಬೆಳ್ಳಂದೂರು ಪೊಲೀಸರು, ಆಟೋ ರಿಕ್ಷಾದ ನಂಬರ್ ಪ್ಲೇಟ್ ಅಸ್ಪಷ್ಟವಾಗಿದೆ. ಈಗಾಗಲೇ ಕಾರು ಚಾಲಕನ ವಿಳಾಸ ಪತ್ತೆ ಹಚ್ಚಲಾಗಿದೆ. ಆತನ ಹೇಳಿಕೆ ಪಡೆದ ಬಳಿಕ ಆಟೋ ಚಾಲಕನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.