ಇವತ್ತು ಬೆಂಗಳೂರು ಬಂದ್.. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯ ಬಂದ್ಗೆ ಕರೆ ಕೊಡಲಾಗಿತ್ತು. ಆ ಬಳಿಕ ಬೆಂಗಳೂರು ಬಂದ್ಗೆ ಕರೆ ನೀಡಲಾಯ್ತು. ಜಲಸಂರಕ್ಷಣಾ ಸಮಿತಿ ನೀಡಿರುವ ಬಂದ್ ಕರೆ ಸಾಕಷ್ಟು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ಬಹುತೇಕ ಯಶಸ್ವಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಬಂದ್ಗೆ ಬಿಎಂಟಿಸಿ ಸಿಬ್ಬಂದಿ ಕೈ ಜೋಡಿಸರುವುದು ಬಂದ್ ಯಶಸ್ವಿಯಾಗಲು ಸಹಕಾರಿ ಆಗಿದೆ ಎನ್ನಬಹುದು. ಆದರೆ ಬಿಎಂಟಿಸಿ ಅಧಿಕಾರಿಗಳು ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದು, ಬಂದ್ ತಡೆಯುವ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನ ಯಶಸ್ವಿಯಾದರೆ ಬಂದ್ ನೀರಸ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹೋರಾಟಗಾರರ ಪ್ರತಿಷ್ಠೆಯಾದ ಕಾವೇರಿಗಾಗಿ ಬಂದ್..!
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗು ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಕಾವೇರಿಗಾಗಿ ಒಂದು ದಿನ ಬೆಂಗಳೂರು ಬಂದ್ ಮಾಡುವ ನಿರ್ಧಾರ ಮಾಡಲಾಗಿತ್ತು. ಮಧ್ಯಪ್ರವೇಶ ಮಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗು ಕೆಲವು ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್ ಬೇಡ, ಇಡೀ ಕರ್ನಾಟಕ ಬಂದ್ ಮಾಡೋಣ ಎಂದು ತಿಳಿಸಿದ್ರು. ಇಬ್ಬರ ಉದ್ದೇಶವೂ ಕಾವೇರಿ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವುದನ್ನು ತಡೆಯುವುದೇ ಆಗಿತ್ತು. ಆದರೂ ಇಬ್ಬರೂ ಹೋರಾಟಗಾರರು ಬಂದ್ನಲ್ಲೇ ಅಭದ್ರತೆ ಮೂಡುವಂತೆ ಮಾಡಿದ್ದು ಸಾರ್ವಜನಿಕರ ಬೇಸರಕ್ಕೆ ಕಾರಣವಾಯ್ತು. ಅದರಲ್ಲೂ ಕೆಲವೂ ಸಂಘಟನೆಗಳನ್ನು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಿದ್ದು, ಕನ್ನಡಪರ ಹೋರಾಟಗಾರರ ಮೇಲಿದ್ದ ಗೌರವಕ್ಕೆ ಚ್ಯುತಿ ತಂದಿದೆ ಎನ್ನಬಹುದು.
ಹೋರಾಟದಿಂದ ಹಿಂದೆ ಸರಿದಿದ್ದು ಯಾರು..? ಯಾಕೆ..
ಹೋಟೆಲ್ ಮಾಲೀಕರ ಸಂಘ ಈ ಮೊದಲು ಬಂದ್ಗೆ ಬೆಂಬಲ ನೀಡಿತ್ತು. ಮಂಗಳವಾರ ಬೆಂಗಳೂರು ಬಂದ್ ಆಚರಣೆ ಮಾಡಲು ಎಲ್ಲಾ ರೀತಿಯ ಬೆಂಬಲ ನೀಡಲಿದ್ದೇವೆ ಎಂದು ಘೋಷಣೆ ಮಾಡಿತ್ತು. ಆದರೆ ಪ್ರವೀಣ್ ಶೆಟ್ಟಿ ಸೇರಿದಂತೆ ಹಲವಾರು ಸಂಘಟನೆಯ ನಾಯಕರು ಶುಕ್ರವಾರ ಕರ್ನಾಟಕ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದ ಬಳಿಕ ಮಂಗಳವಾರದ ಬಂದ್ಗೆ ಬೆಂಬಲ ನೀಡದೆ ಇರಲು ನಿರ್ಧಾರ ಮಾಡಲಾಗಿದೆ. ಇನ್ನು ಓಲಾ, ಊಬರ್ ಸಂಘಟನೆ ಕೂಡ ಕರ್ನಾಟಕ ಬಂದ್ಗೆ ಬಂಬಲ ನೀಡಲು ನಿರ್ಧಾರ ಮಾಡಿದ್ದು, ಬೆಂಗಳೂರು ಬಂದ್ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಲಾಗಿದೆ. ಬೀದಿ ವ್ಯಾಪಾರಿಗಳ ಸಂಘಟನೆಯೂ ಕೂಡ ಕರ್ನಾಟಕ ಬಂದ್ಗೆ ಬೆಂಬಲ ಎಂದಿದೆ. ಇದೀಗ ಕನ್ನಡ ಸಂಘಟನೆಗಳ ಉದ್ದೇಶ ಬೆಂಗಳೂರು ಬಂದ್ ಹಾಳು ಮಾಡುವುದಾಗಿತ್ತಾ..? ಅನ್ನೋ ಅನುಮಾನ ಬರುತ್ತಿದೆ.
ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ.. ಬಂದ್ಗಿಲ್ಲ ಅನುಮತಿ..
ಬೆಂಗಳೂರು ಬಂದ್ಗೆ ಕರೆ ನೀಡಲಾಗಿದೆ. ಅದರಂತೆ ಬೆಂಗಳೂರು ಬಂದ್ ನಡೆಯುತ್ತದೆ. ಒಂದೆರಡು ಕಡೆ ಕಲ್ಲೆಸೆತ ಪ್ರಕರಣಗಳು ನಡೆದರೆ ಬಹುತೇಕ ಸಂಚಾರ ಸ್ತಬ್ಧ ಆಗಲಿದೆ. ಇದೇ ಕಾರಣಕ್ಕಾಗಿ ಬೆಂಗಳೂರು ಜಿಲ್ಲಾಧಿಕಾರಿ ಎಲ್ಲಾ ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿ ಆದೇಶ ಮಾಡಿದ್ದಾರೆ. ಇನ್ನೂ ಮೈಸೂರು ವಿವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ. ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ ಕೂಡ ಪರೀಕ್ಷೆ ಮುಂದೂಡಿದೆ. ಇನ್ನು ಬೆಂಗಳೂರು ಪೊಲೀಸರು ಬಂದ್ಗೆ ಸಕಲ ತಯಾರಿ ಮಾಡಿಕೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದು, ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಗುಂಪು ಸೇರುವುದು ಸೇರಿದಂತೆ ಮೆರವಣಿಗೆಯನ್ನು ನಿಷೇಧಿಸಿದ್ದಾರೆ. ಆದರೂ ಹೋರಾಟ ನಡೆಯುತ್ತೆ, ಸರ್ಕಾರ ರೈತರ ಮೇಲೆ ಕೇಸ್ ಹಾಕಲಿದೆ. ನಾಯಕರ ಪ್ರತಿಷ್ಠೆ ಬೆಂಗಳೂರು ಬಂದ್ನ ಗೊಂದಲಕ್ಕೆ ಕಾರಣವಾಗಿದ್ದು, ಮುಂದಾದರೂ ರಾಜ್ಯದ ವಿಚಾರ ಬಂದಾಗ ಒಟ್ಟಾಗುವುದನ್ನು ಕಲಿಯಬೇಕಿದೆ.