ಆರಕ್ಷಕರು ಸಾಮಾನ್ಯ ಜನರಿಗೆ ರಕ್ಷಣೆ ಕೊಡಬೇಕು. ಕಷ್ಟ ಎಂದವರ ಕಷ್ಟಕ್ಕೆ ಸ್ಪಂದಿಸಬೇಕು. ಆದ್ರೆ ಇತ್ತೀಚಿನ ದಿನಗಳಲ್ಲಿ ಪೊಲೀಸರ ವರ್ತನೆ ಯಾಕೋ ತೃಪ್ತಿದಾಯಕವಾಗಿಲ್ಲ. ಈ ಮಾತಿಗೆ ಉದಾಹರಣೆ ಎಂಬಂತೆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೊಲೀಸರ ವರ್ತನೆಯನ್ನ ರಾಜಕಾರಣಿಗಳು ಹಾಗೂ ಸಾಮಾನ್ಯರು ತೀವ್ರವಾಗಿ ಖಂಡಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಳವಳಕಾರಿ ದೃಶ್ಯವೊಂದು ನೋಡುಗರನ್ನು ಬೆಚ್ಚಿಬೀಳಿಸಿದೆ. ರಾತ್ರಿ ವೇಳೆ ಅಪಘಾತಕ್ಕೊಳಗಾದ ವ್ಯಕ್ತಿಯ ಕಿವಿಯಲ್ಲಿ ರಸ್ತೆ ಸುರಿಯುತ್ತಿದ್ದರೆ ಪೊಲೀಸರು ತಮ್ಮ ಬಳಿ ವಾಹನವಿದ್ದರೂ ಅದನ್ನು ಬಳಸದೆ ಬೇರೆ ವಾಹನಗಳನ್ನು ನಿಲ್ಲಿಸುತ್ತಿರುವ ದೃಶ್ಯ ಕಂಡು ಬಂದಿದೆ.ಬೆಂಗಳೂರಿನಲ್ಲಿ ನಡೆದ ಘಟನೆ ಎಂದು ಹೇಳಲಾದ ಈ ದೃಶ್ಯದಲ್ಲಿ ರಸ್ತೆ ಮೇಲೆ ಒಬ್ಬ ವ್ಯಕ್ತಿ ಬಿದ್ದಿದ್ದಾನೆ. ಆತನ ಕಿವಿಯಿಂದ ರಕ್ತಸ್ರಾವವಾಗುತ್ತಿದೆ. ಆದರೆ ಪೊಲೀಸರು ಮಾತ್ರ ತಮ್ಮ 112 ವಾಹನವನ್ನು ರಸ್ತೆ ಬದಿ ಹಾಕಿ ಬೇರೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ತಮ್ಮ ವಾಹನದಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಬಹುದು. ಆದರೆ ಮಾನವೀಯತೆ ಮರೆತ ಪೊಲೀಸರು ಬೇರೆ ವಾಹನಕ್ಕಾಗಿ ಕಾಯುತ್ತಾ ವಿನಾಕಾರಣ ತಡ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.ವಿಡಿಯೋದಲ್ಲಿ ಆರಂಭದಲ್ಲಿ ರಸ್ತೆ ಮೇಲೆ ಬಿದ್ದಿರುವ ವ್ಯಕ್ತಿಯನ್ನು ತೋರಿಸಲಾಗುತ್ತದೆ. ಪೊಲೀಸರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ವಿಡಿಯೋ ಮಾಡುತ್ತಿರುವ ವ್ಯಕ್ತಿ ಪೊಲೀಸರನ್ನು ಪ್ರಶ್ನೆ ಮಾಡುತ್ತಾರೆ. ಪೊಲೀಸರನ್ನು ಪ್ರಶ್ನೆ ಮಾಡುವುದು ದೃಶ್ಯದಲ್ಲಿ ಕೇಳಿ ಬರುತ್ತದೆ. ‘ಸರ್.. ನಿಮ್ಮ ಕಾರು ಇದಿಯಲ್ಲಾ…. ಅದರಲ್ಲೇ ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಕರೆದುಕೊಂಡು ಹೋಗಿ… ಕಳ್ಳರನ್ನ ಸುಳ್ಳರನ್ನ ನಿಮ್ಮನ್ನ ಮಾತ್ರ ಕರೆದುಕೊಂಡು ಹೋಗೋಕೆ 112 ವಾಹನ ಇರೋದಾ? ಈ ವ್ಯಕ್ತಿ ಪ್ರಾಣ ಹೋದರೆ ಅವರನ್ನು ನಂಬಿಕೊಂಡವರನ್ನು ನೀವು ನೋಡಿಕೊಳ್ಳುತ್ತೀರಾ ಸರ್…? ನಿಮ್ಮ ವಾಹನದಲ್ಲಿ (112) ಕರೆದುಕೊಂಡು ಹೋಗಿ ಸರ್…. ನಿಮ್ಮ ವಾಹನ ಇದ್ದರು ತಡ ಯಾಕ್ ಮಾಡ್ತಾ ಇದಿರಾ ಸರ್?” ಎಂದು ವಿಡಿಯೋ ಮಾಡುವ ವ್ಯಕ್ತಿ ಪೊಲೀಸರಿಗೆ ಪ್ರಶ್ನೆ ಮಾಡುತ್ತಾರೆ.
ಯಾವುದೂ ಅಂಬ್ಯುಲೆನ್ಸ್ ಬರ್ತಾಯಿಲ್ಲ ನಾವೇನ್ ಮಾಡೋಣಾ ಎಂದು ಉಡಾಫೆ ಉತ್ತರ ನೀಡಿದ್ದಾರೆ.ತಮ್ಮ ಬಳಿ ಕಾರು ಇದ್ದರೂ ಕೂಡ ಕಿಂಚಿತ್ತು ದಯೆ ಇಲ್ಲದೆ ಪೊಲೀಸರು ನಡೆದುಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಜೊತೆಗೆ ಪೊಲೀಸ್ ವಾಹನ ಸಂಖ್ಯೆ ಕೂಡ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. KA02G4671 ಪೊಲೀಸ್ ವಾಹನದ ನಂಬರ್ ವಿಡಿಯೋದಲ್ಲಿ ಸೆರೆಯಾಗಿದೆ. ಪೋಲೀಸರ ವರ್ತನೆ ಸಾಕಷ್ಟು ಕೆಂಗಣ್ಣಿಗೆ ಗುರಿಯಾಗಿದೆ. ವರ್ಗಾತೀತವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಘಟನೆಯನ್ನ ಖಂಡಿಸಲಾಗುತ್ತಿದೆ.