ಬಿಬಿಎಂಪಿಯ ದಾಸರಹಳ್ಳಿ ವಲಯದ ಎರಡು ಶಾಲೆಯ ಒಟ್ಟು 31 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರು ಪತ್ತೆಯಾದ ತರಗತಿಯ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ದಾಸರಹಳ್ಳಿ ವಲಯದ ಪೀಣ್ಯ ಎರಡನೇ ಹಂತದ ಖಾಸಗಿ ಶಾಲೆಯ 5ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಸೋಮವಾರ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಕಳೆದ ಗುರುವಾರ ರಾಜಗೋಪಾಲ ನಗರದ ಖಾಸಗಿ ಶಾಲೆಯ 5 ಮತ್ತು 6ನೇ ತರಗತಿಯ ಒಟ್ಟು 21 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು.
ಉಳಿದ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊಠಡಿ ಹಾಗೂ ಆವರಣಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ದಾಸರಹಳ್ಳಿ ವಲಯದ ಆರೋಗ್ಯ ವೈದ್ಯಾಧಿಕಾರಿ ಸುರೇಶ್ ರುದ್ರಪ್ಪ ಮಾಹಿತಿ ನೀಡಿದ್ದಾರೆ.
ಕಂಟೈನ್ಮೆಂಟ್ ವಲಯಗಳ ಸಂಖ್ಯೆ 21ಕ್ಕೆ ಏರಿಕೆ !
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಮವಾರ ಐದು ಹೊಸ ಕಂಟೈನ್ಮೆಂಟ್ ವಲಯ ಸೃಷ್ಟಿಯಾಗಿವೆ. ಈ ಮೂಲಕ ಒಟ್ಟು ಕಂಟೈನ್ಮೆಂಟ್ ವಲಯಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಮಹದೇವಪುರ ವಲಯದಲ್ಲಿ ನಾಲ್ಕು ಹಾಗೂ ದಾಸರಹಳ್ಳಿ ವಲಯದಲ್ಲಿ ಒಂದು ಹೊಸದಾಗಿ ಕಂಟೈನ್ಮೆಂಟ್ ವಲಯ ಸೃಷ್ಟಿಯಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ನಗರದಲ್ಲಿ 500ರ ಗಡಿದಾಟಿದ ದೈನಂದಿನ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಕಳೆದ ಭಾನುವಾರ 429ಕ್ಕೆ ಇಳಿಕೆಯಾದರೆ, ಸೋಮವಾರ 400ಕ್ಕೆ ಕುಸಿದಿದೆ. ಉಳಿದಂತೆ ನಗರದಲ್ಲಿ ಸೋಮವಾರ 358 ಮಂದಿ ಗುಣಮುಖರಾಗಿದ್ದು, ಸೋಂಕಿತರ ಸಾವಿನ ಬಗ್ಗೆ ವರದಿಯಾಗಿಲ್ಲ.
ನಗರದಲ್ಲಿ 3,542 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 29 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಮೂವರು ಐಸಿಯು ಮತ್ತು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದೆಲ್ಲರೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.