ಪಶ್ಷಿಮಬಂಗಾಳದ ರಾಜಕೀಯ ಕ್ಷೇತ್ರದಿಂದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ತೃಣ ಮೂಲ ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಯಶಸ್ಸು ಸಾಧಿಸಲು ಹರಸಾಹಸ ಪಡುತ್ತಿವೆ. ಇದರ ಮಧ್ಯೆಯೇ ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳಿಗೆ ಹೊಸ ಆಯಾಮ ದೊರೆಯುತ್ತಿದೆ.
ಮುಸ್ಲಿಂ ಸಮುದಾಯದ ಪ್ರಭಾವಿ ವ್ಯಕ್ತಿ ಅಬ್ಬಾಸ್ ಸಿದ್ದೀಕಿ ಹೊಸ ಪಕ್ಷ ಕಟ್ಟಲಿದ್ದಾರೆಂಬ ಸುದ್ದಿ ಪಶ್ಚಿಮ ಬಂಗಾಳ ಜನತೆಯಲ್ಲಿ ಕುತೂಹಲ ಮೂಡಿಸಿದೆ. ಇದು ಈಗ ಚಾಲ್ತಿಯಲ್ಲಿರುವ ಪಕ್ಷಗಳಿಗೂ ನಡುಕ ಹುಟ್ಟಿಸಿದೆ. ಇತ್ತ 10 ವರ್ಷದಿಂದ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಿಮ್ಮೆಟ್ಟಲು ಬಿಜೆಪಿ ಸಜ್ಜಾಗಿ ನಿಂತಿದೆ. ತೃಣಮೂಲ ಕಾಂಗ್ರೆಸ್ ತೊರೆದ ಪ್ರಭಾವಿ ರಾಜಕೀಯ ನಾಯಕರುಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿಸಲು ಹರಸಾಹಸ ಪಡುತ್ತಿದೆ.
ಜನವರಿ21 ರಂದು ಹೊಸ ಪಕ್ಷದ ಉದಯ
ಅಬ್ಬಾಸ್ ಸಿದ್ದೀಕಿ ನೇತೃತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಜನವರಿ 21 ರಂದು ಹೊಸ ಪಕ್ಷ ಉದಯವಾಗಲಿದೆ. ಈಗಾಗಲೇ ಅಬ್ಬಾಸ್ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿಯನ್ನು ಬೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಅವರಿಂದ ಸಂಪೂರ್ಣ ಬೆಂಬಲ ದೊರೆತಿದೆ ಎಂದಿದ್ದಾರೆ. ಈಗಾಗಲೆ ಪ. ಬಂಗಾಳದ ಉತ್ತರ, ದಕ್ಷಿಣ ಮತ್ತು ಪೂರ್ವ ಮಿಡ್ನಾಪುರದಲ್ಲಿ ನಡೆದ ಧಾರ್ಮಿಕ ಸಭೆಗಳಲ್ಲಿ ಹೊಸ ಪಕ್ಷದ ಸ್ಥಾಪನೆ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದರು. ಹೊಸ ಪಕ್ಷಕ್ಕೆ ಸಂಬಂಧಿಸಿದಂತಹ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.
ನಾವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 60 ರಿಂದ 80 ಸ್ಥಾನಗಳಿಗೆ ಸ್ಪರ್ಧಿಸಿ ಗೆಲ್ಲುವ ಇರಾದೆ ಹೊಂದಿದ್ದೇವೆ. ಮುಂಬರುವ ಚುನಾವಣೆಯಲ್ಲಿ 294 ಕ್ಷೇತ್ರಗಳಿಗೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆಂದು ಅಬ್ಬಾಸ್ ಸಿದ್ದೀಕಿ ಹೇಳಿದ್ದಾರೆ.
ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಅಬ್ಬಾಸ್ ಅವರು ಅಸಾದ್ದುದೀನ್ ಒವೈಸಿಯ ಭೇಟಿಯ ನಂತರ ಕಾನೂನು ಸಚಿವ ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕ ಮಲಾಯ್ ಘಾಟಕ್ ರುಶೇಡ್ ಜೊತೆಗೆ ಗುಪ್ತ ಸಭೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಇಲ್ಲ. ಆದರೆ, ಕೆಲವು ಮುಸ್ಲಿಂ, ಆದಿವಾಸಿ, ದಲಿತ ಪ್ರತಿನಿಧಿಗಳು ತುಳಿತಕ್ಕೆ ಒಳಗಾಗಿದ್ದಾರೆ. ಅವರ ಪರ ಧ್ವನಿಯೆತ್ತಲು ಸ್ಪರ್ಧಿಸುವ ಅನಿವಾರ್ಯತೆಯಿದೆ ಎಂದು ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ.
“ನಾವು ಒಂದು ಸಮುದಾಯಕ್ಕೆ ಸೀಮಿತವಾಗಿ ಪಕ್ಷ ಕಟ್ಟುತ್ತಿಲ್ಲ. ನಮ್ಮ ಪಕ್ಷ ನೊಂದವರಿಗೆ ಶೋಷಿತರಿಗೆ ಆಸರೆಯಾಗಲಿದೆ. ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಬುಡಕಟ್ಟು, ದಲಿತ, ಆದಿವಾಸಿ, ಹಿಂದೂ, ಕ್ರಿಶ್ಚಿಯನ್, ಹಿಂದುಳಿದವರ, ಶೋಷಿತರ ಧ್ವನಿಯಾಗಿ ನಿಂತು ಅವರ ಅಭಿವೃದ್ಧಿಯತ್ತ ಶ್ರಮಿಸಲಾಗುತ್ತದೆ,” ಎಂದು ಸಿದ್ದೀಕಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹೊಸ ಪಕ್ಷದ ಉದಯದಿಂದ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಬಿಜೆಪಿಗೆ ದೊಡ್ಡ ತಲೆನೋವಾದಂತಿದೆ. ಏಕೆಂದರೆ ಹೊಸದಾಗಿ ಉದಯಗೊಳ್ಳುತ್ತಿರುವ ಪಕ್ಷ ಶೋಷಿತರನ್ನು ಮತ್ತು ಅಲ್ಪಸಂಖ್ಯಾತರನ್ನ ಗುರಿಯಾಗಿಸಿಕೊಂಡಿದ್ದರಿಂದ ಇತರೆ ಪಕ್ಷಗಳ ಮತಬ್ಯಾಂಕ್ಗಳ ಮೇಲೆ ಪರಿಣಾಮ ಬೀರಲಿದೆ. ಮಮತಾ ಬ್ಯಾನರ್ಜಿ ಪರ ಅಲ್ಪಸಂಖ್ಯಾತರ ಸುಮಾರು 30% ಮತಗಳ ಚಲಾವಣೆಯಾಗುತ್ತವೆ. ಈ ಮತಗಳು ಈಗ ವಿಭಜನೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.