ವಿಶ್ವ ವ್ಯಾಪಾರ ಸಂಸ್ಥೆ (WTO) ಅನುಮತಿ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಕಳೆದ ವರ್ಷ ಏಪ್ರಿಲ್ನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಜೊತೆ ಮಾತುಕತೆ ಬಳಿಕ ಇಡೀ ವಿಶ್ವಕ್ಕೆ ಭಾರತದ ಆಹಾರ ಪೂರೈಸುವುದಾಗಿ ಹೇಳಿದ್ದರು. ಪ್ರಪಂಚದ ಆಹಾರ ಸಂಗ್ರಹ ಖಾಲಿಯಾಗುತ್ತಿದೆ, ನಾನು ಅಮೆರಿಕ ಅಧ್ಯಕ್ಷರೊಂದಿಗೆ ಮಾತನಾಡುತ್ತಿದ್ದಾಗ, ಆಹಾರ ಸಂಕಷ್ಟದ ಬಗ್ಗೆ ಜೋ ಬಿಡನ್ ಪ್ರಸ್ತಾಪಿಸಿದ್ರು. ವಿಶ್ವ ವ್ಯಾಪಾರ ಸಂಸ್ಥೆ ಅನುಮತಿ ಕೊಟ್ಟರೆ, ನಾಳೆಯಿಂದ ಇಡೀ ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಾಗಿದೆ ಎಂದು ನಾನು ಸಲಹೆ ನೀಡಿದ್ದೇನೆ ಎಂದಿದ್ದರು. ಆದರೆ ಇದೀಗ ಕರ್ನಾಟಕ ಸರ್ಕಾರ ಕೇಳುತ್ತಿರುವ ಅನ್ನಭಾಗ್ಯ ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎನ್ನುವ ಮೂಲಕ ‘ಊರಿಗೆ ಉಪಕಾರಿ ಮನೆಗೆ ಅಪಕಾರಿ’ ಎನ್ನುವ ನೀತಿಯನ್ನು ಅಳವಡಿಸಿಕೊಂಡಂತೆ ವರ್ತಿಸುತ್ತಿದೆ.
ಕೇಂದ್ರ ದಾಸ್ತಾನು ಮಾಡಿದ್ದು ಕರ್ನಾಟಕಕ್ಕೆ ಕೊಡಲು ಅಲ್ಲ..!

ಕೇಂದ್ರ ಸರ್ಕಾರ ಅಕ್ಕಿ ನೀಡಲು ಮನವಿ ಮಾಡಿದರೂ ತಿರಸ್ಕಾರ ಮಾಡಿದೆ. ಇದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರ ದಾಸ್ತಾನು ಮಾಡಿರುವ ಕರ್ನಾಟಕ ಸರ್ಕಾರ ಕೇಳಿದಾಗ ಕೊಡುವುದಕ್ಕೆ ಅಲ್ಲ. ದೇಶದಲ್ಲಿ ನೆರೆ ಅಥವಾ ಬರಗಾಗ, ಯುದ್ಧದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವುದಕ್ಕೆ ದಾಸ್ತಾನು ಮಾಡಿರುವುದು ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಅನ್ನಭಾಗ್ಯ ಅಕ್ಕಿ ನೀಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್ ಸರ್ಕಾರ ದೆಹಲಿಗೆ ದಂಡಯಾತ್ರೆ ಹೊರಟಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಲು ಮುಂದಾಗಿರುವ ರಾಜ್ಯ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಕಳೆದ ಮೂರು ದಿನಗಳಿಂದ ಭೇಟಿಗೆ ಅವಕಾಶ ಸಿಗದೆ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ.
ಜುಲೈ ತಿಂಗಳಲ್ಲಿ 10 ಕೆಜಿ ಅಕ್ಕಿ ಸಿಗೋದು ಡೌಟ್..!

ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸಲು ಪರದಾಡುತ್ತಿರುವ ರಾಜ್ಯ ಸರ್ಕಾರ ಸಿಎಂ ಹಾಗೂ ಆಹಾರ ಸಚಿವರು ದೆಹಲಿ ಮಟ್ಟದಲ್ಲಿ ಕಸರತ್ತು ಮಾಡಿದ್ದಾರೆ. ಕೇಂದ್ರದ ಆಹಾರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಪ್ರಯತ್ನ ಮಾಡಿದ್ದಾರೆ. ಆದ್ರೆ ಮಹಾರಾಷ್ಟ್ರ ಪ್ರವಾಸದಲ್ಲಿರುವ ಗೋಯೆಲ್ ಭೇಟಿಗೆ ಸಿಕ್ಕಿಲ್ಲ. ಇನ್ನು ಈ ಬಗ್ಗೆ ಮಾತನಾಡಿರುವ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಕಳೆದ ಮೂರು ದಿನಗಳಿಂದ ಭೇಟಿಗೆ ಕಾಲಾವಕಾಶ ನೀಡುತ್ತಿಲ್ಲ. ಗುರುವಾರ ಬೆಳಗ್ಗೆ 10 ಗಂಟೆಗೆ ಕೇಂದ್ರದ ರಾಜ್ಯ ಖಾತೆ ಸಚಿವರು ಭೇಟಿಗೆ ಕಾಲಾವಕಾಶ ನೀಡಿದ್ರು, ಆದರೆ ಇದೀಗ ಏಕಾಏಕಿ ಭೇಟಿ ಅವಕಾಶ ನಿರಾಕರಿಸಿದ್ದಾರೆ. ಬಿಜೆಪಿ ಅವರು ಅಕ್ಕಿ ನೀಡೊ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ಜನರಿಗೆ ನೀಡಿರೋ ಭರವಸೆಯಂತೆ ಅಕ್ಕಿ ನೀಡುತ್ತೇವೆ. ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ಛತ್ತೀಸ್ಗಢ, ಪಂಜಾಬ್ ರಾಜ್ಯಗಳು ಅಕ್ಕಿ ನೀಡಲು ಮುಂದೆ ಬಂದಿವೆ. ಅಕ್ಕಿಯದರದಲ್ಲಿ ಹೆಚ್ಚಳವಾಗುತ್ತಿದೆ. ಅದಕ್ಕೆ ಬೇಕಾದ ಹಣದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಜನರ ಬೇಡಿಕೆಯಂತೆ 8 ಕೆಜಿ ಅಕ್ಕಿ ಮತ್ತು ಎರಡು ಕೆಜಿ ರಾಗಿ ಅಥವಾ ಜೋಳ ನೀಡಲಿದ್ದು, ಜುಲೈ 1 ರಿಂದ ಅಕ್ಕಿ ನೀಡುವ ಯೋಜನೆ ತಡವಾಗಲಿದೆ. ಅಗಸ್ಟ್ ಒಳಗಾಗಿ ಅಕ್ಕಿ ನೀಡುತ್ತೇವೆ ಎಂದಿದ್ದಾರೆ.
ಅಮಿತ್ ಷಾ ಭೇಟಿ ಮಾಡಿ ಚರ್ಚಿಸಿದ ಸಿಎಂ ಸಿದ್ದರಾಮಯ್ಯ..!

ದೆಹಲಿಯಲ್ಲೇ ಬೀಡು ಬಿಟ್ಟಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ದೆಹಲಿಯಲ್ಲಿ ಅಮಿಶ್ ಷಾ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಭಿನಂದನೆ ತಿಳಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ನೀತಿಯಿಂದ ಬಡವರ ಊಟಕ್ಕೆ ತೊಂದರೆ ಆಗ್ತಿದೆ. ಕೇಂದ್ರದ ಇತ್ತೀಚಿನ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ನೇರವಾಗಿ ಬಡವರ 2 ಹೊತ್ತಿನ ಊಟಕ್ಕೂ ತೊಂದರೆ ಕೊಡುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಧೋರಣೆ ಬದಲಾದರೆ ಒಳ್ಳೆಯದು ಎಂದಿರುವ ಸಿದ್ದರಾಮಯ್ಯಗೆ ಗುರುವಾರ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಜೊತೆಗೆ ಚರ್ಚೆ ಮಾಡುವುದಾಗಿ ಅಮಿತ್ ಷಾ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ರಾಜ್ಯಕ್ಕೆ ಅಕ್ಕಿ ಕೊಡ್ತಿಲ್ವಾ..? ಅನ್ನೋ ಅನುಮಾನ ರಾಜ್ಯದ ಜನರಿಗೆ ಕಾಡುತ್ತಿರುವುದಂತು ಸತ್ಯ.
ಕೃಷ್ಣಮಣಿ