ಬಿಜೆಪಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು, ಬಿಜೆಪಿಯಿಂದ ಡಮ್ಮಿ ಅಭ್ಯರ್ಥಿಯನ್ನು ಹಾಕಿಸಿಕೊಂಡು ಸುಲಭವಾಗಿ ಗೆಲ್ಲುತ್ತಿದ್ದ ಕಾಂಗ್ರೆಸ್ನ ಕೆ.ಸಿ ಕೊಂಡಯ್ಯರಿಗೆ ಈ ಸಲ ಗೆಲುವಿನ ದಾರಿ ಅಷ್ಟು ಸುಗಮವಲ್ಲ. ಈ ಸಲ ಎಚ್ಚೆತ್ತು ಕೊಂಡ ಬಿಜೆಪಿ ಹೈಕಮಾಂಡ್ ಶ್ರೀರಾಮುಲು ಮತ್ತು ತಂಡಕ್ಕೆ ಪ್ರಬಲ ಅಭ್ಯರ್ಥಿ ಹಾಕುವಂತೆಯೂ, ಇಲ್ಲವಾದರೆ ತಾನೇ ಅಭ್ಯರ್ಥಿಯನ್ನು ಹುಡುಕುವುದಾಗಿಯೂ ಮೊದಲೇ ಎಚ್ಚರಿಕೆ ನೀಡಿತ್ತು. ಹೀಗಾಗಿ ಈ ಸಲ ಬಿಜೆಪಿಯಿಂದ ವೈ.ಎಂ ಸತೀಶ್ ಎಂಬ ಮೈನಿಂಗ್ ಕುಳವನ್ನು ಕಂಕ್ಕೆ ಇಳಿಸಲಾಗಿದೆ. ಸತೀಶ್ ಕೊಂಡಯ್ಯರಂತೆ ಹಣ ಖರ್ಚು ಮಾಡಬಲ್ಲ ವ್ಯಕ್ತಿ. ಜೊತೆಗೆ ಸತೀಶ್ ಪೂರ್ವಜರು ಬಳ್ಳಾರಿಗಾಗಿ ಸಾಕಷ್ಟು ಕೆಲಸ ಮಾಡಿದ್ದು, ಅವರ ಹೆಸರು ಇಂದಿಗೂ ಇಲ್ಲಿ ಜನಜನಿತ.
ಕಳೆದ ಸಲ ಶ್ರೀರಾಮುಲು ರೆಡ್ಡಿಗಳು ಚನ್ನಬಸವಗೌಡ ಎಂಬ ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಕೊಂಡಯ್ಯರಿಗೆ ನೆರವಾಗಿದ್ದರು. . ಈ ಸಲವೂ ಅವರಿಗೇ ಟಿಕೆಟ್ ನೀಡಲು ಬಳ್ಳಾರಿ ಬಿಜೆಪಿ ಉದ್ದೇಶಿಸಿತ್ತು. ಆದರೆ ಹೈಕಮಾಂಡ್ ಮಧ್ಯ ಪ್ರವೇಶದಿಂದ ವೈ.ಎಂ. ಸತೀಶ್ ಅಭ್ಯರ್ಥಿಯಾಗಿದ್ದಾರೆ.
ಸತೀಶ್ ಹಿನ್ನೆಲೆ
ಸತೀಶ್ ಅಜ್ಜ ವೈ. ಮಹಾಬಲೇಶ್ವರಪ್ಪ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸುವಲ್ಲಿ ಅವರು ಪ್ರಬಲ ಹೋರಾಟ ನಡೆಸಿದ್ದರು. ಇಂದು ಬಳ್ಳಾರಿಯಲ್ಲಿ ಜನಪ್ರಿಯವಾಗಿರುವ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಅಧ್ಯಕ್ಷರೂ ಅವರೇ. ಈ ಸಂಸ್ಥೆ ಬಳ್ಳಾರಿಯಲ್ಲಿ ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ. ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ನ ಮೊದಲ ಅಧ್ಯಕ್ಷರೂ ಅವರೇ. ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅವರಿಗೆ ಸಾಕಷ್ಟು ಗೌರವವಿದೆ.
ಈ ಅಂಶ ಸತೀಶ್ಗೆ ನೆರಾವಾಗಬಹುದು. ಹಾಗೆಯೇ ಗಣಿ ಉದ್ಯಮಿಯಾಗಿರುವ ಅವರು ಸಿಕ್ಕಾಪಟ್ಟೆ ಹಣವನ್ನೂ ಖರ್ಚು ಮಾಡುತ್ತಿದ್ದಾರೆ.
ಕೊಂಡಯ್ಯಗೆ ಟಿಕೆಟೇ ಕಷ್ಟವಾಗಿತ್ತು!
ಈ ಸಲ ಅನಿಲ್ ಲಾಡ್ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಸಂತೋಷ್ ಲಾಡ್ ಶಿಷ್ಯ ನುಂಡರಗಿ ನಾಗರಾಜ್ ಎಂಬುವವರೂ ಟಿಕೆಟ್ಗಾಗಿ ಲಾಬಿ ನಡೆಸಿದರು. ನಾಗರಾಜ್ ದಲಿತರಲ್ಲಿ ಎಡಗೈ ಸಮುದಾಯದವರು. ಈ ಕಾರಣಕ್ಕೇ ಕೋಲಾರ ಸಂಸದ ಕೆ.ಎಚ್ ಮುನಿಯಪ್ಪನವರು ಮುಂಡರಗಿ ನಾಗರಾಜ್ ಪರ ದೆಹಲಿಯಲ್ಲಿ ಲಾಬಿ ನಡೆಸಿದರು. ‘ನಮ್ಮ ಸಮುದಾಯದವರು ಒಬ್ಬರೂ ಎಂಎಲ್ಸಿ ಇಲ್ಲ. ಹೀಗಾಗಿ ಮುಂಡರಗಿ ನಾಗರಾಜ್ ಅವರಿಗೇ ಟಿಕೆಟ್ ನೀಡಿ’ ಎಂದು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು. ಆದರೆ ಅಂತಿಮವಾಗಿ, ಕೊಂಡಯ್ಯರ ಗಾಡ್ಫಾದರ್ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವದಿಂದ ಕೊಂಡಯ್ಯರಿಗೆ ಕೊನೆಗೂ ಮತ್ತೊಮ್ಮೆ ಟಿಕೆಟ್ ಸಿಕ್ಕಿದೆ.
ಯಾರ ಕಾಲು ಯಾರು ಎಳಯುವರೋ?
ಕಳೆದ ಸಲವಂತೂ ಡಮ್ಮಿ ಅಭ್ಯರ್ಥಿ ಹಾಕಿ ಕೊಂಡಯ್ಯರಿಗೆ ನೆರವಾಗಿದ್ದ ಶ್ರೀರಾಮುಲು ತಂಡ ಈ ಸಲ ಸತೀಶ್ ಪರ ಮನಬಿಚ್ಚಿ ಕೆಲಸ ಮಾಡುವುದೋ ಅಥವಾ ತೆರೆಮರೆಯಲ್ಲಿ ಕೊಂಡಯ್ಯನವರಿಗೆ ನೆರವಾಗುವುದೋ ಎಂಬುದನ್ನು ನೋಡಬೇಕು.
ತಮ್ಮ ಶಿಷ್ಯ ಮುಂಡರಗಿ ನಾಗರಾಜ್ಗೆ ಟಿಕೆಟ್ ಪಡೆಯುವಲ್ಲಿ ವಿಫಲರಾದ ಕಾಂಗ್ರೆಸ್ನ ಸಂತೋಷ್ ಲಾಡ್ ಕೊಂಡಯ್ಯ ವಿರುದ್ಧ ಕೆಲಸ ಮಾಡಬಹುದು. ಅಥವಾ, ಕೊಂಡಯ್ಯ ಮತ್ತು ಸಂತೋಷ್ ಲಾಡ್ ಇಬ್ಬರೂ ಜಿಂದಾಲ್ ಕಂಪನಿಯ ಹಿತರಕ್ಷಕರಾದ ಕಾರಣಕ್ಕೆ ಸಜ್ಜನ್ ಜಿಂದಾಲ್ ರಾಜಿ ಮಾಡಿಸಬಹುದು.
ಐವರು ಕಾಂಗ್ರೆಸ್ ಶಾಸಕರು ನಿರ್ಣಾಯಕ
ಐವರು ಕಾಂಗ್ರೆಸ್ ಶಾಸಕರಿದ್ದು ಇವರೆಲ್ಲ ಕೊಂಡಯ್ಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಸ್ವಲ್ಪಮಟ್ಟಿಗೆ ತಟಸ್ಥ ನಿಲವು ಹೊಂದಿದ್ದು, ಕೊಂಡಯ್ಯ ಪರ ಕೆಲಸ ಮಾಡಲಿದ್ದಾರೆ. ಸೊಂಡೂರು ಶಾಸಕ ತುಕಾರಾಂ ಸಂತೋಷ್ ಲಾಡ್ ಹೇಳಿದಂತೆ ಮಾಡುತ್ತಾರೆ. ಕಂಪ್ಲಿ ಶಾಸಕ ಗಣೇಶ್, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಮತ್ತು ಹರಪನಹಳ್ಳಿ ಶಾಸಕ ಪರಮೇಶ್ವರ್ ನಾಯ್ಕ್ ಮೂವರಿಗೂ ಕೊಂಡಯ್ಯ ಜೊತೆಗಿನ ಸಂಬಂಧ ಹಳಸಿದೆ.
ಈ ಶಾಸಕರು ಕೊಂಡಯ್ಯ ವಿರುದ್ಧ ತೆರೆಮರೆಯಲ್ಲಿ ಕೆಲಸ ಮಾಡಿದರೆ ಕೊಂಡಯ್ಯ ಗೆಲವು ಕಷ್ಟವಾಗಲಿದೆ. ಈ ಶಾಸಕರ ಜೊತೆಗೆ ಸಂತೋಷ್ ಲಾಡ್ ಕೈ ಜೋಡಿಸಿದರೆ ಕೊಂಡಯ್ಯ ಸೋತಂತೆಯೇ. ಪಕ್ಷದ ಆದೇಶಕ್ಕೆ ತಲೆಬಾಗಿ ಈ ಶಾಸಕರು ಕೊಂಡಯ್ಯ ಪರ ಕೆಲಸ ಮಾಡಿದರೆ ಕೊಂಡಯ್ಯ ಗೆಲುವು ನಿಶ್ಚಿತ.
ಆನಂದ್ಸಿಂಗ್ ಯಾವ ಕಡೆ?
ಒಂದು ಅವಧಿಗೆ ಕಾಂಗ್ರೆಸ್ನಲ್ಲಿ, ಇನ್ನೊಂದು ಅವಧಿ ಬಿಜೆಪಿಯಲ್ಲಿ ಕಾಣಿಸಿಕೊಂಡು ಹೊಸಪೇಟೆಯಿಂದ ಎಂಎಲ್ಎ ಆಗುತ್ತಿರುವ, ಈಗ ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ಸಿಂಗ್ ಪರೋಕ್ಷವಾಗಿ ಕೊಂಡಯ್ಯ ಪರ ನಿಲುವು ವ್ಯಕ್ತಪಡಿಸಿದ್ದಾರೆ. ಕೊಂಡಯ್ಯ ನಾಮಪತ್ರ ಸಲ್ಲಿಸಿದ ಸ್ವಲ್ಪ ಹೊತ್ತಿನಲ್ಲೇ ಅವರು ಹೇಳಿಕೆ ನೀಡಿ, ‘ನಾನು ಕೊಂಡಯ್ಯ ಅಣ್ಣ-ತಮ್ಮರಿದ್ದಂತೆ. ಆದರೆ ರಾಜಕೀಯವಾಗಿ ಬೇರೆಬೇರೆ’ ಎಂದಿದ್ದಾರೆ.
ಈ ಮೂಲಕ ಅವರು ತಮ್ಮ ಬೆಂಬಲಿಗರಿಗೆ ಕೊಂಡಯ್ಯ ಪರವಾಗಿ ಇರುವಂತೆ ಕಣ್ಸನ್ನೆ ಮಾಡುತ್ತಿದ್ದಾರೆಯೇ?
ಕೊಂಡಯ್ಯ ಕೂಡ ಮತದಾರರಲ್ಲಿ ಗೊಂದಲ ಮೂಡಿಸಲು ಯತ್ನಿಸಿದ್ದಾರೆ. ‘ನನ್ನ ಮಗ ಮತ್ತು ಬಿಜೆಪಿ ಅಭ್ಯರ್ಥಿ ಸತೀಶ್ ಮಗ ಹೊಟೆಲ್ ವ್ಯವಹಾರದಲ್ಲಿ ಪಾಲುದಾರರು. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ’ ಎಂದಿದ್ದಾರೆ. ಮತದಾರರಿಗೆ ಇದು ಯಾವ ಸಂದೇಶ ಕೊಡುತ್ತಿದೆ? ಇವರೆಲ್ಲ ಒಂದೇ ಬಿಡೋ ಎಂದು ಭಾವಿಸಿ ಮತ್ತೆ ಕೊಂಡಯ್ಯ ಪರ ಮತ ಹಾಕಬಹುದೇ?
‘ಇದು ನನ್ನ ಕೊನೆಯ ಚುನಾವಣೆ’ ಎಂಬ ಮಂತ್ರವನ್ನು ಪದೇ ಪದೇ ಹೇಳುತ್ತಿರುವ ಕೊಂಡಯ್ಯ ಅನುಕಂಪ ಗಿಟ್ಟಿಸಲೂ ಯತ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ಚುನಾವಣಾ ಫಲಿತಾಂಶದಿಂದ ಯಾರು ಯಾರ ಜೊತೆಗಿದ್ದರು, ಯಾರ ಕಾಲು ಯಾರು ಎಳೆದರು ಎಂಬುದು ಬಹಿರಂಗವಾಗಲಿದೆ.
ಅಭ್ಯರ್ಥಿಗಳಿಬ್ಬರ ಬಳಿಯೂ ಸಾಕಷ್ಟು ಸಂಪತ್ತು ಇದ್ದು, ಗ್ರಾಮ ಪಂಚಾಯತಿ ಸದಸ್ಯರಿಗೆ ಡಿಮ್ಯಾಂಡ್ ಬಂದಿದೆ ಎಂಬುದಂತೂ ನಿಚ್ಚಳ ಸತ್ಯ.