ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಮೂರು ಉಪ ಚುನಾವಣೆಗಳ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.
ಮೂರೂ ಕಡೆ ಆಡಳಿತಾರೂಢ ಬಿಜೆಪಿ ಶತಾಯಗತಾಯ ಗೆಲುವು ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಮಸ್ಕಿಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಚುನಾವಣಾ ಉಸ್ತುವಾರಿ ವಹಿಸಿಕೊಂಡು ಈ ಹಿಂದೆ ಶಿರಾ ಉಪ ಚುನಾವಣೆಯಲ್ಲಿ ಮಾಡಿದ ಜಾದೂವನ್ನೇ ಪುನರಾವರ್ತಿಸಲು ಯತ್ನಿಸುತ್ತಿದ್ದಾರೆ. ಆದರೆ, ಬೆಳಗಾವಿ ಲೋಕಸಭಾ ಕ್ಷೇತ್ರವೂ ಸೇರಿದಂತೆ ಈ ಬಾರಿಯ ಉಪ ಚುನಾವಣೆ ಬಿಜೆಪಿ ಪಾಲಿಗೆ ಸಲೀಸಾಗಿಲ್ಲ. ಮೂರೂ ಕಡೆ ಕಠಿಣ ಸವಾಲುಗಳಿವೆ ಎನ್ನಲಾಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಯಡಿಯೂರಪ್ಪ ಈ ಬಾರಿಯ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಸ್ವತಃ ತಂತ್ರಗಾರಿಕೆ ಹೆಣೆದು, ನಿರಂತರ ರ್ಯಾಲಿ, ಸಭೆಗಳಲ್ಲಿ ಭಾಗವಹಿಸಿ ಭರ್ಜರಿ ಪ್ರಚಾರ ನಡೆಸಿದ್ದರು. ಗುರುವಾರ ಮತ್ತು ಬುಧವಾರ ಕೂಡ ಕೊನೇ ಸುತ್ತಿನ ತಂತ್ರಗಾರಿಕೆಯ ಭಾಗವಾಗಿ ಸರಣಿ ಸಭೆಗಳನ್ನು ನಡೆಸಿದ್ದರು.

ಆದರೆ, ಈ ನಡುವೆ ಶುಕ್ರವಾರ ದಿಢೀರ್ ಅನಾರೋಗ್ಯಕ್ಕೀಡಾದ ಯಡಿಯೂರಪ್ಪ, ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಮಗೆ ಕೋವಿಡ್ ದೃಢಪಟ್ಟಿರುವ ವಿಷಯವನ್ನು ಸ್ವತಃ ಯಡಿಯೂರಪ್ಪನವರೇ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದು, ಕಳೆದ ವರ್ಷ ಕೂಡ ಅವರಿಗೆ ಕೋವಿಡ್ ಸೋಂಕು ತಗುಲಿತ್ತು ಮತ್ತು ಇತ್ತೀಚೆಗೆ ತಾನೆ ಅವರು ಕೋವಿಡ್ ಲಸಿಕೆಯನ್ನೂ ಪಡೆದಿದ್ದರು.

ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು, ಅನಾರೋಗ್ಯದ ನಡುವೆಯೂ ಉಪ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು. ಇದೀಗ ಕರೋನಾ ದೃಢಪಟ್ಟ ಬಳಿಕ ಅವರು ಟ್ವೀಟ್ ಮಾಡಿ, ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ, ಸ್ವಯಂ ಕ್ವಾರಂಟಯನ್ ಆಗಿ ಎಂದು ಸಲಹೆ ನೀಡಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ಕುರಿತು ಉಭಯ ಪಕ್ಷಗಳ ನಡುವೆ ಟ್ವೀಟ್ ಸಮರ ತಾರಕಕ್ಕೇರಿದ್ದು, ಸಿಎಂ ಯಡಿಯೂರಪ್ಪ ಅವರು ಮತ್ತೆ ಕೋವಿಡ್ ಸೋಂಕಿತರಾಗಿರುವುದು ದುರಾದೃಷ್ಟಕರ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಆದರೆ, ಜ್ವರದ ನಡುವೆಯೂ ಸಿಎಂ ನಿರಂತರ ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸಿರುವುದು ಕೋವಿಡ್ ಹಿನ್ನೆಲೆಯಲ್ಲಿ ಬೇಜವಾಬ್ದಾರಿಯ ವರ್ತನೆ ಎಂದು ಕಾಂಗ್ರೆಸ್ ಟೀಕಿಸಿದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ, ಕಾಂಗ್ರೆಸ್ ನಾಯಕರು ಕೂಡ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಚುನಾವಣಾ ರ್ಯಾಲಿಗಳನ್ನು ನಡೆಸಿಲ್ಲವೆ? ಎಂದು ತಿರುಗೇಟು ನೀಡಿದೆ.
admin
ಆದರೆ, ಇಲ್ಲಿ ಇರುವ ಪ್ರಶ್ನೆ; ಕಾಂಗ್ರೆಸ್ ಅಥವಾ ಇತರೆ ಯಾವುದೇ ಪಕ್ಷ ಅಥವಾ ಆ ಪಕ್ಷಗಳ ಮುಖಂಡರು ಕೋವಿಡ್ ನಿಯಮ ಪಾಲಿಸದೇ ಸಭೆ-ಸಮಾರಂಭ-ರ್ಯಾಲಿಗಳನ್ನು ಮಾಡುವುದಕ್ಕೂ, ಸ್ವತಃ ಸರ್ಕಾರದ ಚುಕ್ಕಾಣಿ ಹಿಡಿದ ಸಿಎಂ ಹಾಗೆ ನಿಯಮ ಗಾಳಿಗೆ ತೂರಿ ಪ್ರಚಾರ ಸಭೆ ನಡೆಸುವುದಕ್ಕೂ ವ್ಯತ್ಯಾಸವಿದೆ. ಕಾನೂನುಗಳನ್ನು, ನಿಯಮಾವಳಿಗಳನ್ನು ರಚಿಸುವ, ಜಾರಿಗೆ ತರುವ ಮತ್ತು ಪಾಲಿಸದೇ ಇದ್ದಲ್ಲಿ ಜನಸಾಮಾನ್ಯರ ವಿರುದ್ಧ ಕ್ರಮಕೈಗೊಳ್ಳುವ ಸರ್ಕಾರ ಮತ್ತು ಸರ್ಕಾರದ ಚುಕ್ಕಾಣಿ ಹಿಡಿದವರ ಇಂತಹ ವರ್ತನೆ ಜನಸಾಮಾನ್ಯರಲ್ಲಿ ಹುಟ್ಟಿಸುವ ಅಸಡ್ಡೆಯ ಪರಿಣಾಮ ಏನು ಎಂಬುದನ್ನು ಈಗಾಗಲೇ ಕುಂಭಮೇಳ ಮತ್ತು ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಪ್ರಚಾರ ಸಭೆಗಳ ವಿಷಯದಲ್ಲಿ ಕಂಡಿದ್ದೇವೆ. ಇದೀಗ ರಾಜ್ಯದ ಮುಖ್ಯಮಂತ್ರಿಗಳೂ ಅಂತಹದ್ದೇ ತಪ್ಪನ್ನು ಮಾಡಿರುವುದು ರಾಜ್ಯದ ಜನತೆಗೆ ಕೋವಿಡ್ ನಿಯಮಾವಳಿ ಪಾಲನೆಯ ವಿಷಯದಲ್ಲಿ ಯಾವ ಸಂದೇಶ ರವಾನಿಸುತ್ತಿದೆ ಎಂಬುದು ಕೇಳಲೇಬೇಕಾದ ಪ್ರಶ್ನೆ.

ಈ ನಡುವೆ, ಮೂರು ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ರಾಜ್ಯ ಸರ್ಕಾರ ಕೋವಿಡ್ ಪ್ರಕರಣಗಳ ಏರುಗತಿಯ ಬಗ್ಗೆ ತಲೆ ಕೆಡಿಸಿಕೊಂಡಿದೆ. ಈವರೆಗೆ ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸಿ ಯಾವ ಕೋವಿಡ್ ನಿಯಮವನ್ನೂ ಪಾಲಿಸದೆ ಗಾಳಿಗೆ ತೂರಿ ಲಕ್ಷಾಂತರ ಜನರ ಜನಜಾತ್ರೆ ನಡೆಸಿದ ಸಿಎಂ ಸೇರಿದಂತೆ ಸರ್ಕಾರದ ಎಲ್ಲಾ ಪ್ರಮುಖರಿಗೆ ಪ್ರಚಾರ ಮುಗಿಯುತ್ತಿದ್ದಂತೆ ದಿಢೀರ್ ಕರೋನಾ ನೆನಪಾಗಿದೆ. ಕರೋನಾ ನಿಯಂತ್ರಣದ ಕ್ರಮವಾಗಿ ಲಾಕ್ ಡೌನ್ ಹೇರುವ ಬಗ್ಗೆ ತಜ್ಞರ ಜೊತೆ ಚರ್ಚೆಗೆ ಚಾಲನೆ ನೀಡಲಾಗಿದೆ. ಕರೋನಾ ಎರಡನೇ ಅಲೆ ರಾಜ್ಯವ್ಯಾಪಿ ಬೀಕರ ಸ್ವರೂಪ ಪಡೆದುಕೊಂಡಿದ್ದರೂ ಈವರೆಗೆ ಜಾಣ ಕಿವುಡುತನ ತೋರುತ್ತಿದ್ದ ರಾಜ್ಯ ಕರೋನಾ ಕಾರ್ಯಪಡೆ ಕೂಡ ಚುನಾವಣೆ ಮುಗಿಯುತ್ತಲೇ ನಿದ್ರೆಯಿಂದ ಎದ್ದು ಕೂತಂತೆ ರಾಜ್ಯವ್ಯಾಪಿ ಲಾಕ್ ಡೌನ್ ನಂತಹ ಕಠಿಣ ಕ್ರಮದ ಸಲಹೆ ನೀಡಿದೆ.

ಇದು ನಾಚಿಕೆಗೇಡಿನ ನಡೆ. ಕರೋನಾ ಅಲೆಯ ವ್ಯಾಪಕ ಪ್ರಸರಣದ ನಡುವೆಯೂ ಸರ್ಕಾರದ ಚುಕ್ಕಾಣಿ ಹಿಡಿದವರೇ ಲಕ್ಷಾಂತರ ಮಂದಿಯ ರ್ಯಾಲಿಗಳನ್ನು ನಡೆಸುವಾಗ, ಕಣ್ಣು ಮುಚ್ಚಿ ಕೂತು ರಾಜ್ಯದಲ್ಲಿ ಕರೋನಾ ಹರಡುವ ವೇಗಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದ ಕಾರ್ಯಪಡೆಯ ಮಂದಿ, ಈಗ ಬಾಯಿ ಬಿಡುತ್ತಿರುವುದು ಏನನ್ನು ಸೂಚಿಸುತ್ತದೆ? ಇಂತಹ ಸಮಯಕ್ಕೊಂದು ವರಸೆ ಪ್ರದರ್ಶನ, ಜನಸಾಮಾನ್ಯರಲ್ಲಿ ಸರ್ಕಾರ ಮತ್ತು ಅದರ ಇಂತಹ ಕಾರ್ಯಪಡೆಗಳ ಬಗ್ಗೆ, ಅವು ರೂಪಿಸುವ ನಿಯಮಗಳ ಬಗ್ಗೆ ಎಂತಹ ಅಸಡ್ಡೆಗೆ, ಅಪಹಾಸ್ಯಕ್ಕೆ ಕಾರಣವಾಗಬಹುದು? ಅಂತಿಮವಾಗಿ ಜನರ ಅಂತಹ ಭಾವನೆ, ಕರೋನಾ ನಿಯಂತ್ರಣಕ್ಕೆ ಹರಸಾಹಸಗಳಿಗೆ ಹೇಗೆ ದೊಡ್ಡ ಸವಾಲಾಗಬಹುದು ಎಂಬ ಕನಿಷ್ಟ ತಿಳಿವಳಿಕೆಯಾದರೂ ಈ ಕಾರ್ಯಪಡೆಗೆ ಇದೆಯೇ ಎಂಬ ಪ್ರಶ್ನೆ ಕೂಡ ಎದ್ದಿದೆ.