ತಿರುಪತಿ ಲಡ್ಡುಗೆ ಹಂದಿ, ದನದ ಕೊಬ್ಬು ಹಾಕಿದ್ದಾರೆ ಅನ್ನೋ ವಿಚಾರವಾಗಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆಘಾತ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆ ಮಾಡುವಂತೆ ಒತ್ತಾಯ ಮಾಡಿದ್ದು, ಸನಾತನ ಧರ್ಮ ರಕ್ಷಣಾ ಮಂಡಳಿ ರಚಿಸುವ ಮೂಲಕ ಸನಾತನ ಧರ್ಮವನ್ನು ಅಪವಿತ್ರ ಆಗದಂತೆ ತಡೆಯಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗೂಡಬೇಕು ಎಂದಿದ್ದಾರೆ ಪವನ್ ಕಲ್ಯಾಣ್. ಜೊತೆಗೆ ಟಿಟಿಡಿ ಆಡಳಿತ ಮಂಡಳಿ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಅಂತಾನೂ ಹೇಳಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಬಗ್ಗೆ ಅಯೋಧ್ಯೆ ಮಂದಿರ ಅರ್ಚಕ ಸತ್ಯೇಂದ್ರ ದಾಸ್ ಮಾತನಾಡಿದ್ದಾರೆ. ಇದು ಸನಾತನ ಧರ್ಮಕ್ಕೆ ಮಾಡಿದ ಅಪಮಾನ, ಮೀನಿನ ಎಣ್ಣೆ, ದನ, ಹಂದಿ ಕೊಬ್ಬು ಬಳಸಿಸುವುದು ವ್ಯವಸ್ಥಿತವಾದ ಪಿತೂರಿ ರೀತಿ ಕಾಣುತ್ತಿದೆ ಎಂದು ಅಯೋಧ್ಯೆ ಮಂದಿರ ಅರ್ಚಕ ಸತ್ಯೇಂದ್ರ ದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿರುಪತಿ ಪ್ರಸಾದಕ್ಕೆ ಅಪಮಾನ ಮಾಡಿದ್ದಾರೆ ಎಂದು ತಿರುಮಲ ದೇಗುಲದ ಮಾಜಿ ಅರ್ಚಕ ರಮಣ ದೀಕ್ಷಿತಲು ಹೇಳಿದ್ದಾರೆ. ನಾನು ಈ ಹಿಂದೆಯೂ ಹಲವು ಬಾರಿ ಇದನ್ನು ಹೇಳಿದ್ದೇನೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೂ ನಾನು ತಂದಿದ್ದೆ. ಟ್ರಸ್ಟ್ ಗಮನಕ್ಕೆ ತಂದರೂ ಅವರು ಸುಮ್ಮನಾದರು, ಹೀಗಾಗಿ ಹೋರಾಟದಲ್ಲಿ ನಾನು ಏಕಾಂಗಿ ಆಗಬೇಕಾಯ್ತು ಎಂದು ದೇಗುಲ ಮಾಜಿ ಅರ್ಚಕ ರಮಣ ದೀಕ್ಷಿತಲು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಆಂಧ್ರಪ್ರದೇಶ ಸಿಎಂ ಏನೆಲ್ಲಾ ಆರೋಪ ಮಾಡಿದ್ದಾರೆ, ಆ ವಿಚಾರ ಅತ್ಯಂತ ಗಂಭೀರ ಆಗಿದ್ದು, ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ರಷೀದ್ ಅಲ್ವಿ ಮಾತನಾಡಿ, ತಿರುಪತಿ ಅನ್ನೋದು ನಂಬಿಕೆಯ ಕ್ಷೇತ್ರವಾಗಿದ್ದು, ಈ ರೀತಿಯ ಘಟನೆಗಳು ಆಗಿದ್ದರೆ, ನಂಬಿಕೆಯನ್ನು ಹಾಳು ಮಾಡುವ ಉದ್ದೇಶವಾಗಿದೆ. ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿಗೆ ಅರ್ಹತೆಯಿಲ್ಲ. ಈ ರೀತಿಯ ಘಟನೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರಲಿಲ್ಲ ಎಂದಿದ್ದಾರೆ.
ಕೇರಳದ ಎರ್ನಾಕುಲಂನಲ್ಲಿ ಲಡ್ಡು ಪ್ರಸಾದದ ಬಗ್ಗೆ ಕೇಂದ್ರ ಸಚಿವ ಬಂಡಿ ಸಂಜಯ್ ಮಾತನಾಡಿ, ತಿರುಪತಿ ಲಡ್ಡನ್ನು ಭಕ್ತರು ಶ್ರೇಷ್ಠ ಎಂದು ಭಾವಿಸ್ತಾರೆ. ಈ ಘಟನೆ ಕ್ಷಮೆಗೆ ಅರ್ಹವಾದುದಲ್ಲ. ಹಿಂದಿನ ಸರ್ಕಾರದಲ್ಲಿ ಈ ರೀತಿಯ ಘಟನೆ ನಡೆದಿದೆ. ಬೇರೆ ಧರ್ಮದವರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.