ನಾಡಿನಾದ್ಯಂತ ದೀಪಾವಳಿ ಎಂದರೆ ಬೆಳಕಿನ ಸಂಭ್ರಮ. ಈ ದೀಪಾವಳಿಗೆ ಮತ್ತಷ್ಟು ಮೆರುಗು ಬರುವುದು ಕಗ್ಗತ್ತಲಲ್ಲಿ ಸಿಡಿಸುವ ಪಟಾಕಿಗಳಿಂದ. ಪಟಾಕಿಗಳೆಂದರೆ ಬಣ್ಣ ಬಣ್ಣದ ಬೆಂಕಿಯ ಚಿತ್ತಾರಗಳನ್ನು ನೋಡಿ ಖುಷಿ ಪಡುವುದು. ಆದರೆ, ಪಟಾಕಿ ಎಂದರೆ ಎಷ್ಟು ಖುಷಿಯೋ ಅಷ್ಟೇ ಆತಂಕ ಕೂಡ. ಪಟಾಕಿ ಸಿಡಿಸಿ ದುರಂತಗಳನ್ನು ಮೈಮೇಲೆ ಎಳೆದುಕೊಂಡವರಿದ್ದಾರೆ. ಹೀಗಾಗಿ ಪಟಾಕಿ ಸಿಡಿಸ ಬೇಡಿ ಎಂದು ಕಣ್ಣಿನ ವೈದ್ಯರು ಕಿವಿ ಮಾತು ಕೊಟ್ಟಿದ್ದಾರೆ.
ಕ್ಷಣದ ಖುಷಿಗೆ ಬದುಕನ್ನೇ ಕತ್ತಲೆಗೊಳಿಸಬೇಡಿ.. ಪಟಾಕಿ ಸಿಡಿಸುವುದು ಬಿಡಿ!
ಅದೊಂದು ಸಂಪ್ರದಾಯ. ದೀಪಗಳ ಹಬ್ಬದಂದು ಪಟಾಕಿ ಸಿಡಿಸಿ ಖುಷಿ ಪಡುವುದು ಆಚಾರ. ಆದರೆ ಅಂಥಾ ಪಟಾಕಿಗಳು ಬದುಕನ್ನೇ ತನ್ನ ಜೊತೆ ಸಿಡಿಸಿ ಸುಟ್ಟು ಬಿಡುವ ಸಾಧ್ಯತೆಗಳಿವೆ. ಇನ್ನೇನು ಕೆಲವೇ ದಿನ ದೀಪಾವಳಿ ನಮ್ಮ ಜೊತೆಯಾಗಲಿದೆ. ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪಟಾಕಿಗೆ ಅವಕಾಶ ಕೊಡಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿದೆ. ಕಳೆದ ಬಾರಿಯಂತೆ ಹಸಿರು ಪಟಾಕಿಗೆ ಈ ಬಾರಿಯೂ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಯಾವ ಪಟಾಕಿಯಾದರೂ ಎಚ್ಚರಿಕೆಯಿಂದ ಇರಲು ಕಣ್ಣಿನ ತಜ್ಞ ವೈದ್ಯರು ಸೂಚಿಸಿದ್ದಾರೆ. ಇಂದು ಈ ಬಗ್ಗೆ ಸರ್ಕಾರಿ ಕಣ್ಣಿನ ಆಸ್ಪತ್ರೆ ಮಿಂಟೋ ಆಸ್ಪತ್ರೆಯಲ್ಲಿ ಪೋಷಕರಿಗೆ ಅರಿವು ಮೂಡಿಸುವ ಸಲುವಾಗಿ ವೈದ್ಯರು ಮಾಧ್ಯಮಗೋಷ್ಟಿ ನಡೆಸಿ ಪಟಾಕಿ ಸಿಡಿಸುವಾಗ ತೆಗೆದುಕೊಳ್ಳ ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಅಚಾನಕ್ ಪಟಾಕಿ ಸಿಡಿದು ಕಣ್ಣಿಗೆ ಗಾಯವಾಗದೆ ಹೇಗೆ ಎಚ್ಚರ ವಹಿಸಬೇಕು.?
– ಪಟಾಕಿ ಸಿಡಿಸುವಾ ಫಸ್ಟ್ ಆ್ಯಡ್ ಬಾಕ್ಸ್ ರೆಡಿ ಇಟ್ಟುಕೊಳ್ಳಿ
– ಉದ್ದದ ಅಗರ್ಬತ್ತಿ ಇಟ್ಟುಕೊಂಡು ಪಟಾಕಿ ಹಚ್ಚಿ
– ಜಾಸ್ತಿ ಬೆಂಕಿ ಉಗುಳುವ ಪಟಾಕಿ ಬಳಸ ಬೇಡಿ
– ಹೂವಿನ ಪಾಟ್ ಎತ್ತರದ ಜಾಗದಲ್ಲಿ ಪಟಾಕಿ ಇಟ್ಟು ಸಿಡಿಸಬೇಡಿ
– ಸಾಧ್ಯವಾದಷ್ಟು ತೆರೆದ ಜಾಗದಲ್ಲಿ ಪಟಾಕಿ ಸಿಡಿಸಿ
– ಅಕಸ್ಮಾತ್ ಕಣ್ಣಿಗೆ ಗಾಯವಾದರೆ ಒದ್ದೆ ಬಟ್ಟೆ ಕಣ್ಣಿನ ಮೇಲೆ ಇಡಿ
– ವಿಳಂಬ ಮಾಡದೆ ತಕ್ಷಣವೇ ಆಸ್ಪತ್ರೆ ಸೇರಿಸಿ
– ಕಣ್ಣಿಗೆ ಗಾಯವದ ಸಂಧರ್ಬದಲ್ಲಿ ಕಣ್ಣನ್ನು ಉಜ್ಜಬಾರದು
– 90 ಬೆಡ್ ಗಳು ಮಿಂಟೋ ಆಸ್ಪತ್ರೆಯಲ್ಲಿ ಮೀಸಲು

ಪಟಾಕಿ ಸಿಡಿಸುವಾಗ ಏನು ಮಾಡಬಾರದು.!?
– 5 ವರ್ಷದೊಳಗಿನ ಮಕ್ಕಳನ್ನು ಪಟಾಕಿ ಸಿಡಿಸಲು ಬಿಡಬಾರದು
– ಮನೆಯೊಳಗೆ ಮತ್ತು ಪಾರ್ಕಿಂಗ್ ಜಾಗದಲ್ಲಿ ಪಟಾಕಿ ಸಿಡಿಸಬಾರದು
– ಸುಟ್ಟ ಪಟಾಕಿಯನ್ನು ಕಂಡಕಂಡಲ್ಲಿ ಎಸೆಯಬಾರದು
– ಸುಟ್ಟ ಪಟಾಕಿಯನ್ನು ಮತ್ತೆ ಮತ್ತೆ ಸುಡಬಾರದು
– ತೆಳು ಬಟ್ಟೆಗಳನ್ನು ಧರಿಸಿ ಪಟಾಕಿ ಸಿಡಿಸಬಾರದು
– ವಿದ್ಯುತ್ ಸೆಂಟರ್ ಪಾಯಿಂಟ್ ಗಳಿಂದ ದೂರ ಇರುವುದು ಕಡ್ಡಾಯ
ಹೀಗೆ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಲು ವೈದ್ಯರು ಸಲಹೆಗಳನ್ನು ನೀಡಿದ್ದಾರೆ. ಪ್ರತಿ ದೀಪಾವಳಿ ಹಬ್ಬದ ಸಮಯದಲ್ಲಿ ಸರಾಸರಿ 60 ಮಕ್ಕಳು ದಾಖಲಾಗುತ್ತಾರೆ. 14 ವರ್ಷದೊಳಗಿನ ಮಕ್ಕಳಿಗೇ ಹೆಚ್ಚು ಪಟಾಕಿ ಸಿಡಿದು ಗಂಭೀರ ಗಾಯಗಳಾಗುತ್ತಿವೆ. ಹೆಣ್ಣು ಮಕ್ಕಳಿಗೆ ಹೋಲಿಸಿಕೊಂಡರೆ ಈ ಪೈಕಿ ಗಂಡು ಮಕ್ಕಳ ಸಂಖ್ಯೆ ಮೂರು ಪಟ್ಟು ಜಾಸ್ತಿ ಇದೆ. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿದು ಇಡೀ ರಾಜ್ಯದಲ್ಲಿ 14% ಮಕ್ಕಳು ಕಣ್ಣಿನ ದೃಷ್ಟಿಗೆ ಧಕ್ಕೆಯಾಗುತ್ತಿವೆ. ಪಟಾಕಿ ಸಿಡಿದು ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಂಭವವೂ ಇದೆ. ಇನ್ನು ಈ ಸಮಯದಲ್ಲಿ ಮಿಂಟೋ ಸರ್ಕಾರಿ ಕಣ್ಣಿನ ಆಸ್ಪತ್ರೆ ದಿನ 24 ಗಂಟೆಯ ಕಾಲವೂ ಸೇವೆ ಒದಗಿಸುವ ಭರವಸೆ ನೀಡಿದೆ.
ಹಸಿರು ಪಟಾಕಿಯೂ ಅಪಾಯಕಾರಿ.. ಪೋಷಕರೇ ಎಚ್ಚರ!
ಹಸಿರು ಪಟಾಕಿ ಕೂಡ ಅಪಾಯಕಾರಿ ಎಂಬ ಅಭಿಪ್ರಾಯವನ್ನು ವೈದ್ಯರು ತಿಳಿಸಿದ್ದಾರೆ. ಈ ಹಸಿರು ಪಟಾಕಿಗಳಲ್ಲಿ ಕೇವಲ 30% ಮಾತ್ರ ಅಮೋನಿಯಂ ಕಡಿಮೆ ಇರಲಿದೆ. ಸ್ವಾಸ್, ಸಫಲ್, ಸ್ಟಾರ್ಕ್ ಎಂಬ ಮೂರು ಹಸಿರು ಪಟಾಕಿಗಳು ಲಭ್ಯವಿದೆ. ಮೂರರಲ್ಲೂ ಕೂಡ ಸ್ಫೋಟಕ ಶಕ್ತಿ ಕಡಿಮೆ ಇರಲಿದೆ ಎನ್ನುವುದು ಬಿಟ್ಟರೆ ಅಪಾಯಕಾರಿ ಅಲ್ಲ ಎನ್ನಲಾಗದು. ಹೀಗಾಗಿ ಹಸಿರು ಪಟಾಕಿಗಳಿಂದಲೂ ಅಪಾಯ ಎದುರಾಗಬಹುದು. ಪೋಷಕರು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು.

ಆಟಂಬಾಂಬ್, ಹೂಕುಂಡ ಪಾಟಕಿಗಳು ಹೆಚ್ಚು ಡೇಂಜರಸ್!
2010ರಿಂದ ಈಚೆಗೆ ನಡೆದಿರುವ ಅಧ್ಯಯನಗಳ ಪ್ರಕಾರ ರಾಜ್ಯದಲ್ಲಿ ಪಟಾಕಿ ಸಿಡಿಸುವುದರಿಂದ 38% ಮಂದಿಗೆ ಬೆರಳಿಗೆ ಗಾಯ, 19% ರಷ್ಟು ಮಂದಿಯ ಕಣ್ಣಿಗೆ ಗಾಯಗಳಾಗುತ್ತಿವೆ. ಪಟಾಕಿ ಸಿಡಿಸುವವರಿಗಿಂತ ಪಕ್ಕದಲ್ಲಿ ನಿಂತು ಅದನ್ನು ನೋಡುವವರಿಗೆ ಹೆಚ್ಚು ಗಾಯಗಳಾಗಿವೆ. ಮುಖ್ಯವಾಗಿ ಆಟಾಂಬಾಬ್, ಹೂಕುಂಡ, ಬಿಜ್ಲಿ ಪಟಾಕಿಗಳಿಂದಲೇ ಹೆಚ್ಚು ಅಪಾಯಗಳು ಉಂಟಾಗಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ನಗರದ ಮಿಂಟೋ ಸರ್ಕಾರಿ ಕಣ್ಣಿನ ಆಸ್ಪತ್ರೆ 9480832430 ಹಾಗೂ 9281740137 ಎಂಬ ಸಹಾಯವಣಿಯನ್ನು ತೆರೆದಿದೆ. ಬೆಂಗಳೂರಿಗರು ದಿನದ 24 ಗಂಟೆಯಲ್ಲಿ ಯಾವಾಗ ಬೇಕಿದ್ದರೂ ಕರೆ ಮಾಡಿ ಮಾಹಿತಿ ಅಥವಾ ಬೇಕಾದ ಚಿಕಿತ್ಸಾ ವಿಧಾನದ ಬಗ್ಗೆ ತಿಳಿದುಕೊಳ್ಳಬಹುದು. ಒಟ್ಟಾರೆ ಬೆಳಕಿನ ಹಬ್ಬ ಎಲ್ಲರ ಬದುಕಿನಲ್ಲೂ ಎಲ್ಲರ ಬದಕಲ್ಲೂ ಬೆಳಕು ತುಂಬಿ ಹರಿಯಿವಂತೆಯೇ ಮಾಡಲಿ ಹೊರತು ಪಟಾಕಿಗಳಂಥಾ ಮಾರಕಗಳಿಂದ ದೃಷ್ಟಿ ಕಳೆದುಕೊಂಡು ಬದುಕು ಕತ್ತಲಾಗದಿರಲಿ ಎಂಬುವುದೇ ನಮ್ಮ ಆಶಯ. ಈ ಬಗ್ಗೆ ಪೋಷಕರು ಮಕ್ಕಳಿಗೆ ಅರಿವು ಮೂಡಿಸಿ ಪುಟಾಣಿಗಳನ್ನು ಪಟಾಕಿಗಳಿಂದ ದೂರವಿರುವ ಅಗತ್ಯವಿದೆ.