ಮಂಗಳವಾರ ಬೆಳ್ಳಂಬೆಳಗ್ಗೆ ಬಿಡಿಎ ಅಧಿಕಾರಿಗಳು ಜೆಸಿಬಿಗಳನ್ನು ಬಳಸಿ ಬಿಡಿಎಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದ್ದ 15 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಮತ್ತು ಶೆಡ್ ಗಳನ್ನು ತೆರವುಗೊಳಿಸಿ ಸುಮಾರು 100 ಕೋಟಿ ಮೌಲ್ಯದ ಒಂದೂಕಾಲು ಎಕರೆ ಜಾಗವನ್ನು ವಶಕ್ಕೆ ಪಡೆದಿದ್ದಾರೆ. ಎಚ್ ಬಿಆರ್ ಬಡಾವಣೆಯ 2 ನೇ ಹಂತದ ನಾಗವಾರದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡ ಸರ್ವೆ ನಂಬರ್ 75 ರ ಒಂದೂಕಾಲು ಎಕರೆ ಜಾಗವನ್ನು ಬಿಟ್ಟುಕೊಡದೇ ಭೂಮಾಲೀಕರು ಆ ಜಾಗದಲ್ಲಿ 15 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಮತ್ತು ಶೆಡ್ ಗಳನ್ನು ನಿರ್ಮಿಸಿದ್ದರು.
ಸರ್ವೇ ನಂಬರ್ ನ 6 ಎಕರೆ ಜಮೀನನ್ನು ಎಚ್ ಬಿಆರ್ 2 ನೇ ಹಂತದ ಬಡಾವಣೆ ನಿರ್ಮಾಣಕ್ಕೆ 1989 ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ ಒಂದೂವರೆ ಎಕರೆ ಜಾಗವನ್ನು ವರ್ತುಲ ರಸ್ತೆಗೆ ಬಳಸಿಕೊಳ್ಳಲಾಗಿತ್ತು. ಉಳಿದ ನಾಲ್ಕೂವರೆ ಎಕರೆ ಪೈಕಿ ಒಂದೂವರೆ ಎಕರೆ ಜಾಗವನ್ನು ಬಿಟ್ಟುಕೊಟ್ಟಿರಲಿಲ್ಲ. ಬಿಡಿಎ ಸ್ವಾಧೀನವನ್ನು ಪ್ರಶ್ನಿಸಿ ಮಾಲೀಕರು 1989 ರಲ್ಲಿ ಸಿಟಿ ಸಿವಿಲ್ ಕೋರ್ಟಿನ ಮೊರೆ ಹೋಗಿದ್ದರಾದರೂ, ಬಿಡಿಎ ಪರವಾಗಿ ತೀರ್ಪು ಬಂದಿತ್ತು. ಇದಲ್ಲದೇ, ಎರಡು ಬಾರಿ ಹೈಕೋರ್ಟ್ ಗೆ ಹೋಗಿದ್ದರೂ ಅಲ್ಲಿಯೂ ಅವರಿಗೆ ಸೋಲುಂಟಾಗಿತ್ತು. ಆದಾಗ್ಯೂ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಅದರಿಂದ ಆದಾಯ ಗಳಿಸುತ್ತಿದ್ದರು. ಹಲವು ಬಾರಿ ಬಿಡಿಎ ಎಚ್ಚರಿಕೆ ನೀಡಿದ್ದರೂ ತೆರವು ಮಾಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮಂಗಳವಾರ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಕಾರ್ಯಪಾಲಕ ಇಂಜಿನಿಯರ್ ಜಿ.ಕುಮಾರ್ ಅವರನ್ನೊಳಗೊಂಡ ಅಧಿಕಾರಿಗಳ ತಂಡವು ಸ್ಥಳೀಯ ಪೊಲೀಸರ ನೆರವಿನಿಂದ 15 ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಿ 15 ವಾಣಿಜ್ಯ ಮಳಿಗೆಗಳು ಹಾಗೂ ಶೆಡ್ ಗಳನ್ನು ನೆಲಸಮ ಮಾಡಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
200 ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಈ ಹಿಂದೆ ಮೂರ್ನಾಲ್ಕು ಬಾರಿ ಕಟ್ಟಡಗಳನ್ನು ನೆಲಸಮ ಮಾಡಲು ತೆರಳಿದ ಸಂದರ್ಭದಲ್ಲಿ ಮಾಲೀಕರು ತಮ್ಮ ಪ್ರಭಾವ ಬೀರಿ ಮತ್ತು ಪ್ರತಿಭಟನೆ ನಡೆಸಿದ್ದರಿಂದ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಡಿಎ ಅಧಿಕಾರಿಗಳು 200 ಕ್ಕೂ ಹೆಚ್ಚು ಪೊಲೀಸರ ಭದ್ರತೆಯನ್ನು ಪಡೆದುಕೊಂಡು ನೆಲಸಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಸ್ವಯಂಪ್ರೇರಿತವಾಗಿ ಜಾಗ ವಾಪಸ್ ಕೊಡದಿದ್ದರೆ ಕ್ರಿಮಿನಲ್ ಕೇಸ್ !
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಬಿಡಿಎ ಉಸ್ತುವಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಷ್ಟೇ ಪ್ರಭಾವಿಗಳು ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಅದರಂತೆ ಬಿಡಿಎ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ಎಚ್ ಬಿಆರ್, ಎಚ್ಎಸ್ಆರ್ ಬಡಾವಣೆಗಳು ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಮಾಹಿತಿಗಳು ಇವೆ. ಈ ಹಿನ್ನೆಲೆಯಲ್ಲಿ ಒತ್ತುವರಿದಾರರು ಬಿಡಿಎ ಜಾಗವನ್ನು ಸ್ವಯಂಪ್ರೇರಿತವಾಗಿ ಕೂಡಲೇ ಬಿಟ್ಟುಕೊಡಬೇಕು. ಇಲ್ಲವಾದರೆ, ಕಾನೂನು ರೀತಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸದರಿ ಜಾಗಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.