ಕೇಂದ್ರ ಸರ್ಕಾರ ಎಚ್ಚರಿಕೆ ಕೊಟ್ಟರೂ ಪಾಲಿಕೆ ಮಾತ್ರ ಇನ್ನೂ ಕಿವುಡಾಗಿ ಕೂತಿದೆ. ಬೆಂಗಳೂರು ಓಮಿಕ್ರಾನ್ ಗಳ ತವರು ಆಗೋಕು ಮೊದಲೇ ಎಚ್ಚೆತ್ತುಕೊಳ್ಳಿ ಎಂದರೂ ಬಿಬಿಎಂಪಿ ಮಾತ್ರ ದಿವ್ಯ ನಿರ್ಲಕ್ಷ್ಯವಹಿಸಿದೆ. ಕಳೆದ ಬಾರಿಯಾದ ಅನಾಹುತಗಳು ಮತ್ತೆ ಮರುಕಳಿಸಬಾರದು, ಮುಂಜಾಗ್ರತೆ ವಹಿಸಿ, ಸಾರ್ವಜನಿಕರಿಗೆ ವೈರಸ್ ತಿಳುವಳಿಕೆ ನೀಡಿ ಎಂದರೆ ಹೆಲ್ಪ್ ಲೈನ್ ಅನ್ನೇ ಹಳ್ಳ ಹಿಡಿಸಿ ಕೂತಿದೆ ಬಿಬಿಎಂಪಿ.
ಮೂರನೇ ಅಲೆ ಮೂನ್ಸೂಚನೆ ಇದ್ದರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ!
ಪ್ರತಿ ದಿನ ಓಮಿಕ್ರಾನ್ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ಇಡೀ ರಾಜ್ಯದಲ್ಲಿ 31 ಓಮಿಕ್ರಾನ್ ಕೇಸ್ ಪತ್ತೆಯಾಗಿದ್ದರೆ, ಈ ಪೈಕಿ ಬೆಂಗಳೂರಿನದ್ದೇ ಸಿಂಹಪಾಲು. ಕಳೆದ ಅಲೆಯಲ್ಲೂ ಕೂಡ ಇಡೀ ರಾಜ್ಯದ ಕರೋನಾ ಹಾಟ್ ಸ್ಪಾಟ್ ಆಗಿದ್ದು ಕೂಡ ಇದೇ ಬೆಂಗಳೂರು. ಹೀಗಾಗಿ ಬೆಂಗಳೂರಿಗೆ ಹೆಚ್ಚಿನ ಕಣ್ಗಾವಲು ಒದಗಿಸುವ ಅಗತ್ಯತೆ ಇದೆ. ಇತ್ತೀಚೆಗಷ್ಟೇ ದೇಶದ ಎಲ್ಲಾ ರಾಜ್ಯಗಳಿಗೂ ಕೇಂದ್ರ ಆರೋಗ್ಯ ಇಲಾಖೆ ಆಯುಕ್ತ ರಾಜೇಶ್ ಭೂಷಣ್ ಸುತ್ತೋಲೆ ಹೊರಡಿಸಿ ಓಮೈಕ್ರಾನ್ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ. ಇಷ್ಟಿದ್ದರೂ ಬಿಬಿಎಂಪಿಯ ನಿರ್ಲಕ್ಷ್ಯ ಮತ್ತೊಂದು ಸುತ್ತಿಗೆ ಸಿಲಿಕಾನ್ ಸಿಟಿಯನ್ನು ಕರೋನಾ ಅಡ್ಡೆಯಾಗುವಂತೆ ಮಾಡುತ್ತೆ ಎಂಬ ಅನುಮಾನ ಮೂಡ ತೊಡಗಿದೆ.
ಕೆಲಸ ಮಾಡುತ್ತಿಲ್ಲ ಬಿಬಿಎಂಪಿ 1533 ಹೆಲ್ಪ್ ಲೈನ್ ನಂಬರ್!
ಲಸಿಕೆ ಪಡೆದುಕೊಳ್ಳಬೇಕು, ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇವೆಲ್ಲವೂ ನಿಜ. ಇದಕ್ಕೂ ಮುಖ್ಯವಾಗಿ ಜನರಿಗೆ ಅಗತ್ಯಕ್ಕೆ ತಕ್ಕಂತೆ ಓಮಿಕ್ರಾನ್ ಬಗ್ಗೆ ತಿಳುವಳಿಕೆ ನೀಡಬೇಕು. ಅದರಲ್ಲೂ ಮುಖ್ಯವಾಗಿ ಓಮಿಕ್ರಾನ್ ಬಗ್ಗೆ ಮಾಹಿತಿ ಜನರಿಗೆ ನೀಡಬೇಕು. ಅಚಾನಕ್ ಆಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಕೂಡ ಹೇಗೆ ಎಲ್ಲಿ ಎಂಬ ಮಾಹಿತಿಯನ್ನೂ ಕೊಡುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ. ಇದಕ್ಕೆಂದೇ ಬಿಬಿಎಂಪಿ ಎರಡನೇ ಅಲೆಯ ವೇಳೆ ಇದಕ್ಕೆಂದೇ 1533 ಎಂಬ ನಂಬರಿನ ಸಹಾಯವಾಣಿಯನ್ನು ತೆರೆದಿತ್ತು. ಇದಕ್ಕೆಂದೇ ಲಕ್ಷ ಲಕ್ಷ ರೂಪಾಯಿ ಖರ್ಚು ಕೂಡ ಮಾಡಲಾಗಿತ್ತು. ಹೀಗೆ ನಿರ್ಮಿಸಲಾದ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿದರೆ ತಾವು ಕರೆ ಮಾಡಿದ ಚಂದಾದದರು ಕಾರ್ಯನಿರತರಾಗಿದ್ದಾರೆ ಎಂದು ಕರೆ ಕಡಿತಗೊಳ್ಳುತ್ತಿದ್ದೆ. ಈ ಮೂಲಕ ಕೊರೋನಾ ಹೆಲ್ಪ್ ಲೈನ್ ವ್ಯವಸ್ಥೆ ಹಳ್ಳ ಹಿಡಿದಿದೆ.
ಕೇಳಿದ್ರಲ್ಲ, ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಯ ಮಹಿಮೆ. ಜನರು ಎಷ್ಟೆ ಸರಿ ಪೋನ್ ಮಾಡಿದರೂ, ಇದೆ ವಾಯ್ಸ್ ರೇಕಾರ್ಡ್ ಬರುತ್ತೆ ಹೊರತ್ತು, ಯಾರು ಕೂಡ ನಿಮ್ಮ ಪೋನ್ ಎತ್ತಿ ಮಾಹಿತಿ ನೀಡಲ್ಲ. ಕಾಲ್ ಸೆಂಟರ್ ಗೆ ಅಂತ 30 ಕ್ಕೂ ಹೆಚ್ಚು ಸಿಬ್ಬಂದಿಯನ್ನೂ ಗುತ್ತಿಗೆ ಅದಾರದ ಮೇಲೆ ನೇಮಿಸಲಾಗಿತ್ತು. ಆದರೆ ಈಗ ಸಿಬ್ಬಂದಿಯೂ ಇಲ್ಲ ಕಾಲ್ ಸೆಂಟರ್ ಕೂಡ ಇಲ್ಲ. ಆದರೆ ಪಾಲಿಕೆ ಮಾತ್ರ ನಾವು ಮೂರನೇ ಅಲೆ ಎದುರಿಸಲು ಸರ್ವ ಸನ್ನದ್ಧವಾಗಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದೆ.
ಇನ್ನೂ ಕೇಂದ್ರ ಸರ್ಕಾರ ಕಳೆದ ಒಂದು ತಿಂಗಳಿಂದ ಮೂರನೇ ಅಲೆಯ ಮೂನ್ಸೂಚನೆ ಕೊಡುತ್ತಾ ಬರುತ್ತಿದೆ. ಮುಂದಿನ ಜನವರಿಯಲ್ಲಿ ಓಮಿಕ್ರಾನ್ ನಿಂದ ಮೂರನೇ ಅಲೆ ಬಂದರೂ ಬರಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡುತ್ತಿದ್ದಾರೆ. ಬೆಡ್, ಆಕ್ಸಿಜನ್, ಆಂಬುಲೆನ್ಸ್ ಹೀಗೆ ನೂರೆಂಟು ವ್ಯವಸ್ಥೆಯನ್ನು ಸಿದ್ಧ ಮಾಡಿಕೊಳ್ಳ ಬೇಕಿರುವ ಬಿಬಿಎಂಪಿ ಮೊದಲು ಹೆಲ್ಪ್ ಲೈನ್ ಅನ್ನು ಮತ್ತೆ ಆರಂಭಿಸುವ ಕಡೆ ಗಮನ ಹರಿಸಬೇಕು. ಆರಂಭದಲ್ಲೇ ಇಂಥಾ ನಿರ್ಲಕ್ಷ್ಯಕ್ಕೆ ಪಾಲಿಕೆ ಜಾರಿದರೆ ಅಕಸ್ಮಾತ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೆ ಎರಡನೇ ಅಲೆಯ ಸನ್ನಿವೇಶಕ್ಕಿಂತಲೂ ಭೀಕರವಾಗಿರಲಿದೆ ಚಿತ್ರಣಗಳು.