ಬೆಂಗಳೂರು : ಮತದಾರರ ಮಾಹಿತಿ ಸಂಗ್ರಹಕ್ಕೆ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡದಂತೆ ಭಾರತ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಆದೇಶ ಹೊರಡಿಸಿದೆ.
ಭಾರತ ಚುನಾವಣಾ ಆಯೋಗವು ಪತ್ರದ ಮುಖೇನ ನೀಡಿರುವ ನಿರ್ದೇಶನದ ಪ್ರಕಾರ, ಯಾವುದೇ ಖಾಸಗಿ ಸಂಸ್ಥೆಗಳು ಮನೆ ಮನೆ ಸಮೀಕ್ಷೆ ನಡೆಸಿ ಸಂಭವನೀಯ ದತ್ತಾಂಶ ಸಂಗ್ರಹಣೆ, ಗುರುತಿನ ಚೀಟಿಗಳ ದುರ್ಬಳಕೆ ಆಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರೇತರ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳು ಮತದಾರರ ದತ್ತಾಂಶವನ್ನು ಸಂಗ್ರಹಿಸುವ ಪ್ರಯತ್ನ ನಡೆಸಲು ಅವುಗಳಿಗೆ ದೃಢೀಕರಣ, ನಿರಾಕ್ಷೇಪಣ ಪತ್ರ ನೀಡದಂತೆ ತಿಳಿಸಿದೆ.
ಆದೇಶ ಪ್ರತಿಯಲ್ಲಿ ಸಂಸ್ಥೆಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರರ ನೊಂದಣಾಧಿಕಾರಿಗಳು ಅನುಮತಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೊಂದಣಾಧಿಕಾರಿಗಳು ಕಡ್ಡಾಯವಾಗಿ ಸದರಿ ಆದೇಶ ಪಾಲಿಸಬೇಕು. ಸದ್ಯ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯವು ಚಾಲ್ತಿಯಲ್ಲಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಈ ವರೆಗೆ ಶೇ. 86.55 ರಷ್ಟು ಪ್ರಗತಿ ಸಾಧಿಸಲಾಗಿದೆ.
ಬೆಂಗಳೂರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022ರ ಜನವರಿ 1ರಿಂದ ನವೆಂಬರ್ 9ರವರೆಗೆ 8,997 ಹೊಸದಾಗಿ ಹೆಸರು ಸೇರ್ಪಡೆ ಮಾಡಲಾಗಿದೆ. 2,584 ತಪ್ಪುಗಳು ತಿದ್ದುಪಡಿ ಆಗಿದೆ. 35,071 ರದ್ದತಿ ಮಾಡಲಾಗಿದೆ. ಈ ಸಂಬಂಧ ಮತದಾರರ ಪಟ್ಟಿಯಲ್ಲಿ ಆಗಿರುವ ಸೇರ್ಪಡೆ ಮತ್ತು ರದ್ದತಿ ಪಟ್ಟಿಯನ್ನು ಬೂತ್ ಮಟ್ಟದ ಅಧಿಕಾರಿ ಗಳು ಮನೆ ಮನೆಗೆ ಭೇಟಿ ನೀಡಿ ಶೇ. 100 ರಷ್ಟು ಪರಿಶೀಲನೆ ಕಾರ್ಯಕೈಗೊಂಡಿದ್ದಾರೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.