ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಸೋಮವಾರ ಮತ್ತೆ ಬೀಗ ಜಡಿದಿದ್ದಾರೆ.
27 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್‌ಗೆ ಒಂದೂವರೆ ತಿಂಗಳ ಹಿಂದೆ ಅಧಿಕಾರಿಗಳು ಇದೇ ರೀತಿ ಬೀಗವನ್ನ ಹಾಕಿದ್ದರು. ಆಗ 5 ಕೋಟಿ ರೂಪಾಯಿಗಳ ಚೆಕ್ ಪಾವತಿಸಿದ ಮಾಲ್‌ನ ಆಡಳಿತ ಮಂಡಳಿ ಬಾಕಿ ಪಾವತಿಗೆ ಕಾಲಾವಕಾಶ ಕೇಳಿತ್ತು. ಅದರಂತೆಯೇ, ಅಧಿಕಾರಿಗಳು ಬಾಕಿ ಪಾವತಿಗೆ ಸಮಯಾವಾಕಾಶ ನೀಡಿದ್ದರು. ಕೊಟ್ಟ ಸಮಯದಲ್ಲಿ ತೆರಿಗೆ ಕಟ್ಟದ ಹಿನ್ನಲೆಯಲ್ಲಿ ಇಂದು ಸಾಯಂಕಾಲ ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದಾರೆ.
ಕಳೆದ ಮೂರು ವರ್ಷದಿಂದ ಸರಿಯಾದ ಸಮಯಕ್ಕೆ ತೆರಿಗೆ ಕಟ್ಟದೆ ಮಾಲ್‌ನ ಆಢಳಿತ ಮಂಡಳಿ ಕಳ್ಳಾಟವಾಡುತ್ತಿರುವುದರ ವಿರುದ್ದ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ. ಇದುವರೆಗೆ ಮಂತ್ರಿ ಮಾಲ್ ಅಸಲು ಬಡ್ಡಿ ಸೇರಿಸಿ ಉಟ್ಟು 36 ಕೋಟಿ ರೂಪಾಯಿ ತೆರಿಗೆ ಬಾಕಿ ಪಾವತಿಸಬೇಕಿದೆ.

ಈ ಬಗ್ಗೆ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿಯೊಬ್ಬರು ತೆರಿಗೆ ಕಟ್ಟದಿದ್ದರೆ ಸಂಪೂರ್ಣ ಮಾಲ್‌ಅನ್ನು ಬಾಗಿಲು ಹಾಕಿಸುವ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿ ಮಾಲ್‌ಗೆ ಬೀಗ ಹಾಕಿದಾಗ ಒಂದು ತಿಂಗಳೊಳಗೆ ಬಾಕಿ ಪಾವತಿಸುವುದಾಗಿ ಆಡಳಿತ ಮಂಡಳಿ ಹೇಳಿತ್ತು. ಆದರೆ, ಅವರಿಗೆ ನೀಡಿದ ಗಡುವು ಮೀರಿದ ಕಾರಣ ನಾವು ಮಾಲ್‌ಗೆ ಬೀಗ ಹಾಕಬೇಕಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತೆರಿಗೆ ಪಾವತಿಗೆ 15 ದಿನ ಕಾಲಾವಕಾಶ ನೀಡಿದ ಬಿಬಿಎಂಪಿ
ಮಂತ್ರಿ ಮಾಲ್ ಆಡಳಿತ ಮಂಡಳಿಯು ತೆರಿಗೆ ಪಾವತಿಗೆ 15 ದನಗಳ ಕಾಲಾವಕಾಶ ಕೋರಿದ್ದರು. ಅದರಂತೆಯೇ, ಬಿಬಿಎಂಪಿ ಆಯುಕ್ತರು ಕೆಲವು ಷರತ್ತಿನೊಂದಿಗೆ ಈ ತಿಂಗಳ ಕೊನೆಯಷ್ಟರಲ್ಲಿ ಬಾಕಿ ಪಾವತಿಸುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.








