ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಡೆಸಿದ ನೂತನ ಸಮೀಕ್ಷೆಯ ಪ್ರಕಾರ ನಗರದ ವಿವಿಧ ಭಾಗಗಳಲ್ಲಿ 1,512 ಅನಧಿಕೃತ ಧಾರ್ಮಿಕ ರಚನೆಗಳು, ಕಟ್ಟಡಗಳಿವೆ ಎಂದು ತಿಳಿದು ಬಂದಿದೆ.
ಬಿಬಿಎಂಪಿ ನೀಡಿರುವ ವರದಿ ಪ್ರಕಾರ, ಅತೀ ಹೆಚ್ಚು ಗುಡಿ, ದೇವಸ್ಥಾನ,ದರ್ಗಾ, ಮಸೀದಿ, ಚರ್ಚು, ಗುರುದ್ವಾರ ಸೇರಿದಂತೆ ಅನಧಿಕೃತ ಧಾರ್ಮಿಕ ರಚನೆಗಳು, ಕಟ್ಟಡಗಳು ಬೆಂಗಳೂರು ಪೂರ್ವ ವಲಯದಲ್ಲಿವೆ. ಪೂರ್ವ ವಲಯದಲ್ಲಿ 503 ಇಂತಹ ಅನಧಿಕೃತ ರಚನೆಗಳಿದ್ದು, ದಕ್ಷಿಣ ವಲಯದಲ್ಲಿ 427, ಬೊಮ್ಮನಹಳ್ಳಿಯಲ್ಲಿ 203, ಪಶ್ಚಿಮ ವಲಯದಲ್ಲಿ 129, ರಾಜರಾಜೇಶ್ವರಿ ನಗರದಲ್ಲಿ 95, ಮಹದೇವಪುರದಲ್ಲಿ 76, ದಾಸರಹಳ್ಳಿಯಲ್ಲಿ 53 ಹಾಗೂ ಯಲಹಂಕದಲ್ಲಿ 26 ಇಂತಹ ಅನಧಿಕೃತ ರಚನೆಗಳಿವೆ.
ಈ ಕುರಿತಂತೆ 2009 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಿಸಿದ ಸುಪ್ರೀಂ ಕೋರ್ಟ್, 2009 ರ ಹಿಂದೆ ನಿರ್ಮಾಣವಾದಂತಹವನ್ನು ಸ್ಥಳಾಂತರಿಸುವಂತೆಯೂ, ನಂತರ ನಿರ್ಮಿಸಲ್ಪಟ್ಟದ್ದಕ್ಕೆ ಅನುಮತಿಸಬಾರದೆಂದು ಆದೇಶ ನೀಡಿತ್ತು.
ಈ ಹಿಂದೆ ನಡೆಸಿದ್ದ ಸಮೀಕ್ಷೆಯಲ್ಲಿ ಇಂತ 108 ರಚನೆಗಳಿರುವುದನ್ನು ಗುರುತಿಸಲಾಗಿತ್ತು. ಈ ಸಮೀಕ್ಷೆಯಿಂದ ಅಸಮಾಧಾನಗೊಂಡ ಬಿಬಿಎಂಪಿ ಕಮಿಷನರ್, ಎಂಜಿನಿಯರಿಂಗ್ ಮತ್ತು ಕಂದಾಯ ಇಲಾಖೆಗಳನ್ನು ಒಳಗೊಂಡ ಹೊಸ ಸಮೀಕ್ಷೆಯನ್ನು ನಡೆಸುವಂತೆ ಆದೇಶಿಸಿದ್ದರು.
ಸಮೀಕ್ಷೆ ನಡೆಸುವಾಗ 2009ರ ಮುನ್ನ ಹಾಗೂ 2009ರ ನಂತರ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ಎಲ್ಲಾ ವಾರ್ಡ್ ಎಂಜಿನಿಯರ್ ಹಾಗೂ ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಜೊತೆಗೆ 2009ರ ನಂತರ ನಿರ್ಮಿಸಿದ ಧಾರ್ಮಿಕ ಕಟ್ಟಡಗಳಿಗೆ ಜ.27ರ ಒಳಗೆ ನೋಟಿಸ್ ಜಾರಿ ಮಾಡಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿದವರಿಂದ ಒಂದು ವಾರದಲ್ಲಿ ಸಮಜಾಯಿಷಿ ಪಡೆಯಬೇಕು ಎಂದು ನಿರ್ದೇಶಿಸಿದ್ದರು.
ಹೊಸ ಸಮೀಕ್ಷೆಯು ನಗರದಲ್ಲಿ 1500 ಕ್ಕೂ ಹೆಚ್ಚು ಅನಧಿಕೃತ ರಚನೆಗಳಿರುವುದನ್ನು ಗುರುತಿಸಿದೆ. ಇದರಲ್ಲಿ 214 ರಚನೆಗಳು 2009 ರ ಬಳಿಕ ನಿರ್ಮಾಣವಾದವು ಎಂದು ತಿಳಿಸಲಾಗಿದೆ.
ಸಮೀಕ್ಷೆಯ ಫಲಿತಾಂಶಗಳನ್ನು ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಲಿದ್ದು, ಹೈಕೋರ್ಟಿನಲ್ಲಿ ಇಂತಹದ್ದೇ ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ಹೈಕೋರ್ಟ್’ಗೆ ವರದಿ ಸಲ್ಲಿಸಿದ ನಂತರ ಪೊಲೀಸ್ ಇಲಾಖೆಯ ಭದ್ರತೆಯೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದರು.