ಬಿಬಿಎಂಪಿ ಚುನಾವಣೆ ಮೇಲೆ ಈ ಮೂರು ಪಕ್ಷಗಳ ಕಣ್ಣು ನೆಟ್ಟಿದೆ. 2020 ಸೆಪ್ಟೆಂಬರ್ ನಂತರ ಕೌನ್ಸಿಲ್ ಪ್ರತಿನಿಧಿಗಳು ಅಧಿಕಾರವಾಧಿ ಮುಕ್ತಾಯಗೊಂಡಿದ್ದು, ಅದಾದ ಬಳಿಕ ಯಾವುದೇ ಚುನಾವಣೆ ನಡೆದಿಲ್ಲ. ಕರೋನಾ ಹಾಗೂ ರಾಜಕೀಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಿದ್ದು ಇದೀಗ ಕೆಲವೇ ತಿಂಗಳಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ನಡೆಯುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್ ಕೂಡ ಆದಷ್ಟು ಬೇಗ ಚುನಾವಣೆ ನಡೆಸಿ ಎಂದು ಚುನಾವಣೆ ಆಯೋಗಕ್ಕೆ ಸೂಚಿಸಿದ್ದು, ಚುನಾವಣೆ ನಡೆಸಲು ಆಯೋಗ ಸಿದ್ಧವಿದೆ. ಆದರೆ ಆಡಳಿತರೂಢ ಬಿಜೆಪಿ ಹಲವು ಕಾರಣಗಳನ್ನು ಕೊಟ್ಟು ಚುನಾವಣೆಯನ್ನು ಮುಂದೂಡುತ್ತಾ ಬಂದಿತ್ತು. ಆದರೆ ಇತ್ತೀಚೆಗೆ ಬಿಜೆಪಿ ತಮ್ಮ ರಾಜ್ಯ ಕಚೇರಿಯಲ್ಲಿ ಈ ಬಗ್ಗೆ ಕೋರ್ ಕಮಿಟಿ ಸಭೆ ನಡೆಸಿದ್ದು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಕೆ ಚುನಾವಣೆ ಎದುರಿಸಲು ತುದಿಗಾಲಲ್ಲಿ ನಿಂತಿದೆ.
ಇದರ ನಡುವೆ ಬಿಬಿಎಂಪಿ ಹೊಸದಾಗಿ ರೂಪಿಸಲಾಗಿರುವ ವಾರ್ಡ್‌ಗಳ ಡ್ರಾಫ್ಟ್ ಸಿದ್ಧಪಡಿಸಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರನ್ನು ಮತ್ತಷ್ಟು ವಿಸ್ತಾರಗೊಳಿಸಬೇಕು ಎಂದು ಕೂಗು ಬಹಳ ಹಿಂದಿನಿಂದಲೂ ಕೇಳಿ ಬಂದಿದ್ದವು. ಇದೀಗ ಅದಕ್ಕೆ ಕಾಲ ಕೂಡಿ ಬಂದಿದ್ದು, 198 ವಾರ್ಡ್‌ಗಳಿಂದ 243 ವಾರ್ಡ್‌ಗಳಿಗೆ ಸಂಖ್ಯೆ ಏರಿಕೆಯಾಗಲಿದೆ. ಇತ್ತೀಚೆಗಷ್ಟೇ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ 243 ವಾರ್ಡ್‌ಗಳ ಕರುಡನ್ನು ಸಿದ್ಧಪಡಿಸಿ ಚುನಾವಣಾ ಆಯೋಗಕ್ಕೆ ಹಾಗೂ ಸರ್ಕಾರಕ್ಕೆ ಜನವರಿ 28ರ ಹೊತ್ತಿಗೆ ಸಲ್ಲಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳು ಸದ್ಯಕ್ಕಿವೆ. ಇದನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ 243 ವಾರ್ಡ್‌ಗಳನ್ನಾಗಿ ಮಾಡಲಿದೆ ಪಾಲಿಕೆ. ಹೀಗಾಗಿ ಈ ಬಾರಿ ಚುನಾವಣೆ ನಡೆದರೆ 243 ಕೌನ್ಸಿಲರ್‌ಗಳು ಚುನಾಯಿತಗೊಂಡು ಬರಲಿದ್ದಾರೆ. ಸದ್ಯ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ 198 ವಾರ್ಡ್ ಕೌನ್ಸಿಲರ್‌ಗಳು ಸೇರಿದಂತೆ 28 ಶಾಸಕರು, 6 ಸಂಸದರು ಹಾಗೂ 75 ಅಧಿಕಾರಿ ವರ್ಗಗಳಿಗೆ ಮಾತ್ರ ಆಸನದ ವ್ಯವಸ್ಥೆ ಇದೆ. 243 ವಾರ್ಡ್ ರೂಪುಗೊಂಡರೆ ಕೌನ್ಸಿಲ್ ಕಟ್ಟಡದಲ್ಲಿ ಅಷ್ಟೂ ಮಂದಿಗೆ ಬೇಕಾಗಿರುವ ಆಸನದ ವ್ಯವಸ್ಥೆ ಹಾಗೂ ಕೊಠಡಿಗಳ ಕೊರತೆ ಎದುರಾಗಲಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲೂ ಬಿಬಿಎಂಪಿ ಕೆಲಸ ಮಾಡುತ್ತಿದೆ.
ಹೊಸ ವಾರ್ಡ್ ಕರುಡಿನ ಅನ್ವಯ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಕೆಆರ್ ಪುರಂ, ದಾಸರಹಳ್ಳಿ ಹಾಗೂ ಮಹಾದೇವಪುರ ವಲಯಗಳಿಗೆ ಹೆಚ್ಚಿನ ವಾರ್ಡ್‌ಗಳು ಸೇರಿಕೊಳ್ಳಲಿದೆ. ಏಕೆಂದರೆ ಈ ಐದು ವಲಯಗಳು ಕೂಡ ಬೆಂಗಳೂರು ನಗರ ಜಿಲ್ಲೆಗಳಿಗೆ ಹೊಂದಿಕೊಂಡಿದ್ದು, ನಗರ ಜಿಲ್ಲೆಗಳಿಗೆ ಸೇರಿಕೊಂಡಿರುವ ಕೆಲವು ಹಳ್ಳಿಗಳು ಈ ವೇಳೆ ಬಿಬಿಎಂಪಿ ವ್ಯಾಪ್ತಿಗೆ ಸೇರಿಕೊಳ್ಳಲಿದೆ. ಇದೇ ವೇಳೆ ನಗರದ ಬಸವನಗುಡಿ, ಗಾಂಧಿನಗರ, ಗೋಂವಿದರಾಜನಗರ, ಹೆಬ್ಬಾಳ, ಸರ್ವಜ್ಞನಗರ ಮತ್ತು ಶಾಂತಿನಗರ ತಲಾ ಒಂದೊಂದು ಹೊಸ ವಾರ್ಡ್‌ಗಳು ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಭಾಗದಲ್ಲಿ ಬಿಜೆಪಿ ಶಾಸಕರೇ ಹೆಚ್ಚಿದ್ದು ಆಡಳಿತರೂಢ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿತ್ತು. ಕಳೆದ ಅಧಿಕಾರವಧಿಯಲ್ಲಿ ಬಿಜೆಪಿಯೇ ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿದಿದ್ದು ಬಿಜೆಪಿಯಿಂದ ಗೌತಮ್ ಕುಮಾರ್ ಮೇಯರ್ ಆಗಿದ್ದರು.
ಕರೋನಾ ಹಾಗೂ ಬಿಜೆಪಿಯ ರಾಜಕೀಯ ಲೆಕ್ಕಾಚಾರದ ಕಾರಣಗಳಿಗೆ ಮುಂದೂಡಲ್ಪಟ್ಟಿದ್ದ ಪಾಲಿಕೆ ಚುನಾವಣೆ ಇದೀಗ ಆಗಸ್ಟ್ ಹೊತ್ತಿಗೆ ನಡೆಯುವ ಸಂಭವ ದಟ್ಟವಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳು ಆಂತರಿಕವಾಗಿ ಸಿದ್ಧತೆಗಳು ಶುರು ಮಾಡಿದ್ದು, ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಾಹ್ಯವಾಗಿ ಚುನಾವಣೆ ಚಟುವಟಿಕೆಗಳು ತಾರಕಕ್ಕೇರಲಿದೆ.