ಮಳೆಗಾಲದ ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಬೆಂಗಳೂರು ನಗರದಲ್ಲಿ ನಮ್ಮ ಕ್ಲಿನಕ್ ಸ್ಥಾಪನೆ ಮಾಡೋದಾಗಿ ಹೇಳಿದ್ದರು. ಈ ಅಕ್ಟೋಬರ್ ನಲ್ಲಿ ನಗರದ ಎಲ್ಲಾ ವಾರ್ಡ್ ಗಳಲ್ಲೂ ನಮ್ಮ ಕ್ಲಿನಿಕ್ ಓಪನ್ ಆಗ ಬೇಕಿತ್ತು. ಆದರೆ ಅದ್ಯಾಕೋ ಜನಸ್ನೇಹಿ ಕ್ಲಿನಿಕ್ ಯೋಜನೆ ನೆನೆಗುದಿಗೆ ಬಿದ್ದಿದೆ.
ಕಳೆದ ಕೆಲವು ತಿಂಗಳುಗಳಿಂದ ಬಿಬಿಎಂಪಿ ಟೈಮ್ ಸರಿಯಿಲ್ಲ. ಯಾಕಂದ್ರೆ ಒಂದು ಕಡೆ ರಾಜಾ ಕಾಲುವೆ ಒತ್ತುವರಿ, ಇನ್ನೊಂದು ಕಡೆ ಮಳೆ ಬಂದು ಇಡೀ ಬೆಂಗಳೂರು ನಗರ ನೀರು ನುಗ್ಗಿ ಪ್ರವಾಹ, ರಸ್ತೆ ಗುಂಡಿ ಹೀಗೆ ಸಾಲು ಸಾಲು ಸಮಸ್ಯೆಗಳಿಂದ ಬಳಲುತ್ತಿರುವ ಬಿಬಿಎಂಪಿ ಗೆ ನಗರದ ಜನರು ಹಿಡಿ ಶಾಪ ಹಾಕಿದ್ರು. ಈಗ ಮತ್ತೆ ತನ್ನ ಹಳೆಯ ವರಸೆ ಮತ್ತೆ ಮುಂದುವರೆಸುತ್ತಿರುವ ಬಿಬಿಎಂಪಿ ಜನಸ್ನೇಹಿ ಯೋಜನೆಯೊಂದನ್ನು ಜಾರಿ ಮಾಡೋಕೆ ಮೀನಾಮೇಷ ಎಣಿಸುತ್ತಿದೆ. ನಗರದ ಜನರ ಉತ್ತಮ ಆರೋಗ್ಯಕ್ಕಾಗಿ ನಗರದ ಎಲ್ಲಾ ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತಾಗಿ ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಲು ಸರ್ಕಾರದಿಂದ ಪಾಲಿಕೆಗೆ ಸೂಚನೆ ಬಂದಿತ್ತು. ಮೊದಲ ಹಂತದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ 15 ವಾರ್ಡ್ ಗಳಲ್ಲಿ ಆರಂಭಿಸಲು ಚಿಂತನೆ ನಡೆಸಿದ್ದು, ಆರ್ ಆರ್ ನಗರ ದಾಸರಹಳ್ಳಿ ಮಹದೇವಪುರ ವಲಯಗಳ ವ್ಯಾಪ್ತಿಯಲ್ಲಿ ತೆರೆಯಲು ಯೋಜನೆ ಸಿದ್ಧವಾಗಿತ್ತು. ಈ ಅಕ್ಟೋಬರ್ ಅಂತ್ಯದ ವೇಳೆಗೆ ಕ್ಲಿನಿಕ್ ಲೋಕಾರ್ಪಣೆ ಆಗಬೇಕಿತ್ತು. ಆದರೀಗದು ವಿಳಂಬವಾಗಿದೆ.
ಈಗಾಗಲೇ ಬಿಬಿಎಂಪಿಯ 141 ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇದರ ಹೊರತಾಗಿ ಹೊಸದಾಗಿ ಡಿ ಲಿಮಿಟೇಷನ್ ಅನುಗುಣವಾಗಿ 243 ವಾರ್ಡ್ ಗಳಲ್ಲೂ ನಮ್ಮ ಕ್ಲಿನಿಕ್ ಸ್ಥಾಪನೆಗೆ ಯೋಜನೆ ಸಿದ್ಧಗೊಂಡಿತ್ತು. ಇದಕ್ಕಂತಲೇ ಸಿಎಂ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ 50 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಜನರ ದುರಾದೃಷ್ಟ ಎಂದರೆ ಬಿಬಿಎಂಪಿಗೆ ಇನ್ನೂ ಮೊದಲ ಹಂತದ ಕಾಮಗಾರಿಗೆ ಟೆಂಡರ್ ನೀಡೋಕೆ ಸಾಧ್ಯವಾಗಿಲ್ಲ.
ಇನ್ನೂ 141 ವಾರ್ಡ್ ಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೂ ಇದೇ ವೇಳೆ ನವೀಕರಣಗೊಳಿಸಲು ಪಾಲಿಕೆಗೆ ಸೂಚಿಸಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ನವೀಕರಣಕ್ಕೆಂದೇ ಸುಮಾರು 15 ಕೋಟಿ ಮೀಸಲಿಡಲಾಗಿದೆ. ಅದೂ ಕೂಡ ಆಮೆ ವೇಗ ಪಡೆದುಕೊಂಡಿದೆ. ಒಟ್ಟಾರೆ ದೇವರು ಕೊಟ್ಟರೂ ಪೂಜಾರಿ ಕೊಡ್ತಿಲ್ಲ ಎಂಬಂತಾಗಿದೆ ನಮ್ಮ ಕ್ಲಿನಿಕ್ ಯೋಜನೆ.