ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದ ವಸತಿ ಸಮುಚ್ಛಯಗಳಲ್ಲಿ ಖಾತಾ ಮೇಳ ಮಾಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಪಾಲಿಕೆ ಯೋಚಿಸಿದೆ. ಈ ಪೈಕಿ ನಗರದಲ್ಲಿ ಪ್ರಾಯೋಗಿಕವಾಗಿ 20 ವಸತಿ ಸಮುಚ್ಛಯಗಳನ್ನು ಗುರುತಿಸಿ ಶೀಘ್ರದಲ್ಲಿ ಖಾತಾ ಮೇಳ ಆಯೋಜಿಸಲು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
2022 – 23ರ ಬಜೆಟ್ ಮಂಡಿಸಲು ಬಿಬಿಎಂಪಿ (Bruhath Bengaluru Mahanagara Palike) ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಪ್ರಸಕ್ತ ಸಾಲಿನ ಬಜೆಟ್‌ಗೆ ಪಾಲಿಕೆ ಆದಾಯ ಕೊರತೆ ಎದುರಿಸುತ್ತಿದೆ. ಹೀಗಾಗಿ ಈಗಲೇ ಸ್ವಲ್ಪ ಆದಾಯ ಶೇಖರಣೆಗೆ ಪಾಲಿಕೆ ಮುಂದಾಗಿದ್ದು ಅಪಾರ್ಟ್‌ಮೆಂಟ್ ಅಸೋಸಿಯೇಶನ್ (Banglore Appartment Association) ಜೊತೆ ಸಭೆ ಮಾಡಿ ಆಸ್ತಿ ತೆರಿಗೆ (Property Tax) ಸಂಗ್ರಹಿಸಲು ಮುಂದಾಗಿದೆ. ಈ ಬಾರಿ ಎಂಟು ಸಾವಿರ ಕೋಟಿ ರೂಪಾಯಿ ಮೊತ್ತದ ದೊಡ್ಡ ಬಜೆಟ್ (BBMP Budget) ಮಂಡಿಸಲು ಲೆಕ್ಕಾಚಾರ ಹೊಂದಿದೆ. ಆದರೆ ಆದಾಯ ಕೊರತೆ ಹಾಗೂ ಸರ್ಕಾರದಿಂದ ಎಷ್ಟು ಅನುದಾನ ಸಿಗಲಿದೆ ಎಂಬ ಗೊಂದಲದಲ್ಲಿದೆ.
ಶೀಘ್ರವೇ ಆಸ್ತಿ ತೆರಿಗೆ ಸಂಗ್ರಹಿಸಲು ಆಯುಕ್ತರ ಆದೇಶ !
ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಬಂಧ ಬೆಂಗಳೂರು ಅಪಾರ್ಟ್ಮೆಂಟ್ಸ್ ಫೆಡರೇಷನ್ (Banglore Appartment Association) ಜೊತೆ ಇಂದು ನಡೆದ ವರ್ಚುಯಲ್ ಸಭೆಯನ್ನು (Virtual Meeting) ಉದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತ (Chief Commissioner) ಗೌರವ್ ಗುಪ್ತಾ, ಪಾಲಿಕೆಗೆ ಪ್ರಮುಖ ಆದಾಯದ ಮೂಲ (Source of Income) ಆಸ್ತಿ ತೆರಿಗೆಯಾಗಿದ್ದು, ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಈ ಪೈಕಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಎಲ್ಲಾ ಆಸ್ತಿಗಳನ್ನು ಗುರುತಿಸಿ, ತೆರಿಗೆ ವ್ಯಾಪ್ತಿಗೆ ತರಲು ಸೂಕ್ತ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಖಾತಾ ವ್ಯಾಪ್ತಿಯಿಂದ ಹೊರಗಿರುವ ಸಮುಚ್ಛಯಗಳ ಪತ್ತೆಗೆ ಸೂಚನೆ !
ನಗರದಲ್ಲಿ ತ್ವರಿತ ಗತಿಯಲ್ಲಿ ಖಾತಾ ಪ್ರಕ್ರಿಯೆಗಳು (Khatha Proceeder) ಜಾರಿಯಾಗಬೇಕೆಂಬ ಉದ್ದೇಶದಿಂದ ಆಯಾ ವಲಯಗಳಿಗೆ ಖಾತಾ ನೀಡುವ ಜವಾಬ್ದಾರಿಯನ್ನು ವಿಕೇಂದ್ರಿಕರಣಗೊಳಿಸಲಾಗಿದೆ (Decentralisation). ಈ ಸಂಬಂಧ ಖಾತೆ ನೀಡದೇ ಇರುವ ಕಟ್ಟಡಗಳನ್ನು ಗುರುತಿಸಿ, ಖಾತೆ ನೀಡುವ ಕೆಲಸ ಮಾಡಿದಾಗ ಆಸ್ತಿ ತೆರಿಗೆ ವ್ಯಾಪ್ತಿಗೆ ಹೆಚ್ಚು ಹೆಚ್ಚು ಆಸ್ತಿಗಳು ಸೇರ್ಪಡೆಯಾಗಿ ಗರಿಷ್ಟ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾಲಿಕೆಗೆ ಬರಲಿದೆ. ನಗರದಲ್ಲಿ ಒಂದು ವಸತಿ ಸಮುಚ್ಛಯದಲ್ಲಿನ ಎಲ್ಲಾ ಆಸ್ತಿಗಳಿಗೆ ಒಂದೇ ರೀತಿಯ ಖಾತೆಯಿರಬೇಕು. ಈ ಸಂಬಂಧ ಕಂದಾಯ ಅಧಿಕಾರಿಗಳು ವಸತಿ ಸಮುಚ್ಛಯ ಒಂದರಲ್ಲಿ ಯಾವ ಖಾತೆಗಳಿವೆ ಎಂಬುದನ್ನು ಪರಿಶೀಲಿಸಿ ಒಂದೇ ರೀತಿಯ ಖಾತೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.