ಅಕ್ರಮ ಎ ಖಾತಾ ಹೊಂದಿರುವ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಹುದೊಡ್ಡ ಆಘಾತ ನೀಡಿದೆ. ಈ ಮೂಲಕ ಈಗ ಬರೋಬ್ಬರಿ 45 ಸಾವಿರ ಎ ಖಾತಾ ಆಸ್ತಿ ಪ್ರಮಾಣಪತ್ರಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿ ಖಾತೆ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತೆ ನೀಡಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ 45 ಸಾವಿರಕ್ಕೂ ಹೆಚ್ಚು ಅಕ್ರಮ ಎ ಖಾತಾ ಆಸ್ತಿಯ ಪ್ರಮಾಣ ಪತ್ರಗಳನ್ನು ರದ್ದು ಮಾಡುತ್ತಿದೆ ಎಂಬ ಮಾಹಿತಿ ಬಿಬಿಎಂಪಿ ಮೂಲಗಳಿಂದ ಲಭ್ಯವಾಗಿದೆ
ಈ ಹಿಂದಿನಿಂದಲೂ ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತೆ ನೀಡಿರುವ ಬಗ್ಗೆ ಸಾಕಷ್ಟು ವರ್ಷಗಳಿಂದ ಸಾಕಷ್ಟು ದೂರುಗಳು ಬಂದಿದ್ದವು
ಅಧಿಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈವರೆಗೆ ಪತ್ತೆಯಾದ ಅಕ್ರಮ ಆಸ್ತಿಗಳ ದಾಖಲೆಗಳನ್ನು ಮರುಪರಿಶೀಲಿಸಿರುವ ಬಿಬಿಎಂಪಿ ಅಕ್ರಮವಾಗಿ ಎ ಖಾತಾ ಪ್ರಮಾಣಪತ್ರ ನೀಡಿರುವುದು ದೃಢಪಟ್ಟರೆ, ಅಂಥ ಆಸ್ತಿಯನ್ನು ಬಿ ಖಾತಾ ದಾಖಲೆ ಪುಸ್ತಕಕ್ಕೆ ದಾಖಲಿಸುವಂತೆ ಆಯಾ ವಲಯ ಆಯುಕ್ತರಿಗೆ ಆದೇಶ ಹೊರಡಿಸಿದೆ
ಹೀಗಾಗಿ ಸದ್ಯದ ಮಟ್ಟಿಗೆ ಬೆಂಗಳೂರಿಗರು ಬಿಬಿಎಂಪಿ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ











