ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಾರ್ಡ್ ವಿಂಗಡನೆ ಆಗಿರುವುದು ಸರ್ಕಾರ ಹೊರಡಿಸಿರುವ ಗೆಜೆಟ್ ಪ್ರಕಾರವಾಗಿ ಎಂದು ಮೇಯರ್ ಗೌತಮ್ ಕುಮಾರ್ ಹಲವು ಬಾರಿ ಹೇಳಿದರೂ, ಅದರಲ್ಲಿರುವ ಹುಳುಕುಗಳು, ಕಣ್ಣಿಗೆ ರಾಚುವಂತಿವೆ. ಈಗ, ವಾರ್ಡ್ ವಿಂಗಡನೆಯ ವಿಚಾರದಲ್ಲಿ ಮೇಯರ್ ಗೌತಮ್ ತಮ್ಮ ಅಧಿಕಾರ ದುರುಪಯೋಗ ಮಾಡಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಈ ಮೊದಲು, ಕಾಂಗ್ರೆಸ್ ಪ್ರಾಬಲ್ಯವಿರುವ ವಾರ್ಡ್‌ಗಳನ್ನು ಒಡೆದು ಕಾಂಗ್ರೆಸ್ ಪ್ರಾಬಲ್ಯವಿರದ ವಾರ್ಡ್‌ಗಳೊಂದಿಗೆ ಸೇರಿಸಿದಕ್ಕಾಗಿ, ವಿರೋಧ ಪಕ್ಷದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ವಾರ್ಡ್‌ಗಳನ್ನು ಉದ್ದೇಶಪೂರ್ವಕವಾಗಿ ಒಡೆಯಲಾಗಿದೆ ಎಂಬ ಆಪಾದನೆ ಗೌತಮ್ ಮೇಲಿತ್ತು. ಈಗ, ಈ ವಿಷಯವು ಹೊಸ ತಿರುವು ಪಡೆದುಕೊಂಡಿದ್ದು ಗೌತಮ್ ಕುಮಾರ್ ಸ್ವಹಿತಾಸಕ್ತಿಗಾಗಿ ತಮ್ಮ ವಾರ್ಡ್ ಅನ್ನು ಬೇಕಾಬಿಟ್ಟಿಯಾಗಿ ರಚಿಸುವಂತೆ ಮಾಡಿ ಅಧಿಕಾರದ ದುರುಪಯೋಗ ಪಡೆದುಕೊಂಡಿದ್ದಾರೆ ಎಂಬ ಹೊಸ ವಿಚಾರ ಬೆಳಕಿಗೆ ಬಂದಿದೆ.
ಗೌತಮ್ ಕುಮಾರ್ ಕಾರ್ಪೊರೇಟರ್ ಆಗಿ ಪ್ರತಿನಿಧಿಸುತ್ತಿರುವ ಪ್ರಸ್ತುತ ವಾರ್ಡ್‌ನ ಸಂಖ್ಯೆ 89ನೇ ಜೋಗುಪಾಳ್ಯ ವಾರ್ಡ್. ವಾರ್ಡ್ ವಿಂಗಡನೆ ಆದ ನಂತರ ಅವರ ವಾರ್ಡ್ ಸಂಖ್ಯೆ 102 ಆಗಿದೆ. ವಾರ್ಡ್ ಸಂಖ್ಯೆ ಬದಲಾಗಿರುವುದು ದೊಡ್ಡ ವಿಚಾರವಲ್ಲ ಬಿಡಿ. ಆದರೆ, ಬದಲಾಗಿರುವ ವಾರ್ಡ್‌ನ ವ್ಯಾಪ್ತಿಯ ಮೇಲೆ ಈಗ ಪ್ರಶ್ನೆ ಎದ್ದಿರುವುದು. ಸ್ಥಳಿಯರ ಪ್ರಕಾರ ಜೋಗುಪಾಳ್ಯ ವಾರ್ಡ್‌ನ ವಿಂಗಡನೆ ಅವೈಜ್ಞಾನಿಕವಾಗಿ ಆಗಿದೆ. ಅದರಲ್ಲೂ ಅತೀ ಹೆಚ್ಚು ಆದಾಯ ಬರುವಂತಹ ಪ್ರದೇಶಗಳಾದ 100 ಅಡಿ ರಸ್ತೆ (100 feet road) ಈಗ ಜೋಗುಪಾಳ್ಯ ವಾರ್ಡ್‌ಗೆ ಸೇರಿದೆ. ಈ ಹಿಂದೆ 100 ಅಡಿ ರಸ್ತೆಯ ಬಹುತೇಕ ಭಾಗ ದೊಮ್ಮಲೂರು ವಾರ್ಡ್‌ಗೆ ಸೇರಿತ್ತು. 100 ಅಡಿ ರಸ್ತೆಯ 8, 9 ಮತ್ತು 10 ಮುಖ್ಯ ರಸ್ತೆಯ ಭಾಗ ಮಾತ್ರ ಜೋಗು ಪಾಳ್ಯ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿತ್ತು. ಒಂದರಿಂದ ಏಳನೇ ಮುಖ್ಯ ರಸ್ತೆಯ ಭಾಗಗಳು ದೊಮ್ಮಲೂರು ವಾರ್ಡ್‌ಗೆ ಸೇರಿತ್ತು.
ಸ್ಥಳೀಯರು ಹೇಳುವ ಪ್ರಕಾರ ಜೋಗು ಪಾಳ್ಯ ವಾರ್ಡ್ ವ್ಯಾಪ್ತಿಗೆ ಒಳಪಡುವಂತಹ 8, 9 ಮತ್ತು 10 ಮುಖ್ಯ ರಸ್ತೆಯ ಭಾಗವನ್ನು ದೊಮ್ಮಲೂರು ವಾರ್ಡ್‌ಗೆ ಸೇರಿಸಿದ್ದಲ್ಲಿ, ಅದು ಆಡಳಿತಕ್ಕೂ ಅನುಕೂಲ ಹಾಗೂ ಅಪರಿಪೂರ್ಣ ವಾರ್ಡ್ ಪೂರ್ಣವಾಗುವ ಸಾಧ್ಯತೆಗಳೂ ಇದ್ದವು. ಆದರೆ, ಈಗ 100 ಅಡಿ ರಸ್ತೆಯಲ್ಲಿ ಅತೀ ಹೆಚ್ಚು commercial ವಹಿವಾಟು ನಡೆಯುವ ಭಾಗಗಳನ್ನು ಮಾತ್ರ ಮೇಯರ್ ಗೌತಮ್ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಹೊಸತಾಗಿ ರೂಪುಗೊಂಡಿರುವ ಜೋಗುಪಾಳ್ಯ 102ನೇ ವಾರ್ಡ್‌ನ ವ್ಯಾಪ್ತಿ ಸರ್ಕಾರಿ ಗೆಜೆಟ್ ಪ್ರಕಾರ ಹೀಗಿದೆ.
ಉತ್ತರ: ಹಳೆ ಮದ್ರಾಸ್ ರಸ್ತೆ, ಮಳೆ ನೀರಿನ ಚರಂಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ,1ನೇ ಮುಖ್ಯ ರಸ್ತೆ, 13ನೇ ಅಡ್ಡ ರಸ್ತೆ, 10ನೇ ಮುಖ್ಯ ರಸ್ತೆ
ದಕ್ಷಿಣ: 15 ನೇ ಮುಖ್ಯ ರಸ್ತೆ, 13 ನೇ ‘ಡಿ’ ಮುಖ್ಯ ರಸ್ತೆ, 9 ನೇ ಅಡ್ಡ ರಸ್ತೆ, 13 ನೇ ‘ಬಿ’ 12 ನೇ ಅಡ್ಡ ರಸ್ತೆ, 13 ಮುಖ್ಯರಸ್ತೆ, 1 ನೇ ಮುಖ್ಯರಸ್ತೆ, 3 ನೇ ಅಡ್ಡ ರಸ್ತೆ, 8 ನೇ ಮುಖ್ಯ ರಸ್ತೆ, ಡಿಫೆನ್ಸ್ ಪ್ರದೇಶ ಕಾಂಪೌಂಡ್
ಪೂರ್ವ: 100 ಅಡಿ ರಸ್ತೆ (ಹಾಲಿ ಇರುವ ವಾರ್ಡ್‌ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
ಪಶ್ಚಿಮ: ಕೇಂಬ್ರಿಡ್ಜ್ ರಸ್ತೆ (ಹಾಲಿ ಇರುವ ವಾರ್ಡ್‌ನ ಗಡಿ)
ಈ ವಿಂಗಡನೆಯ ಪ್ರಕಾರ 100 ಅಡಿ ರಸ್ತೆ ಸಂಪೂರ್ಣವಾಗಿ ಜೋಗುಪಾಳ್ಯದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಈ ಹಿಂದೆ ದೊಮ್ಮಲೂರು ವಾರ್ಡ್‌ಗೆ ಸೇರುತ್ತಿದ್ದಂತಹ 100 ಅಡಿ ರಸ್ತೆಯ ಭಾಗಗಳೂ ಈಗ ಜೋಗುಪಾಳ್ಯದ ಪಾಲಾಗಿವೆ.
ವಾಣಿಜ್ಯ ಮಳಿಗೆಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ, ಆದಾಯವೂ ಹೆಚ್ಚು. ಎಲ್ಲಾ ಬಹುಮಳಿಗೆಯ ಕಟ್ಟಡ, ಮಾಲ್, ಪಬ್‌ಗಳು ಈ ವ್ಯಾಪ್ತಿಗೇ ಸೇರುತ್ತವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೇನೆಂದರೆ, ತಮ್ಮ ಪ್ರಭಾವ ಹೆಚ್ಚಿರುವ ಪ್ರದೇಶಗಳನ್ನು ಮಾತ್ರ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಎಲ್ಲಿ ತಮ್ಮ ಪ್ರಭಾವ ಕಡಿಮೆ ಇದೆಯೋ ಅಥವಾ ಎಲ್ಲಿ ತಮಗೆ ಮತಗಳು ಬೀಳುವುದಿಲ್ಲವೋ ಅಂಥಹ ಪ್ರದೇಶಗಳಿಂದ ದೂರವೇ ಉಳಿದಿದ್ದಾರೆ ಗೌತಮ್ ಕುಮಾರ್. ತಮಗೆ ಬೇಕಾದ ರೀತಿಯಲ್ಲಿ ವಾರ್ಡ್ ವಿಂಗಡನೆ ನಡೆಸಿ, ಚುನಾವಣೆಯಲ್ಲಿ ಗೆಲ್ಲಲು ತಾಕತ್ತಿಲ್ಲದವರು ವಾರ್ಡ್ ವಿಂಗಡನೆಗೆ ತಕರಾರು ಎತ್ತುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಅಷ್ಟು ಗೆಲ್ಲುವ ಧೈರ್ಯ ಇದ್ದಿದ್ದರೆ, ಪಕ್ಕದಲ್ಲೇ ಇದ್ದ ʼಅಗ್ರಂʼ ವಾರ್ಡ್ ಅನ್ನು ಇವರು ಜೋಗುಪಾಳ್ಯದೊಂದಿಗೆ ಸೇರಿಸಿಲ್ಲ ಏಕೆ ಎಂಬ ಪ್ರಶ್ನೆ ಮೂಡುತ್ತದೆ. ಉತ್ತರವೇನೋ ಸುಲಭ, ಅಲ್ಲಿ ಗೌತಮ್ ಕುಮಾರ್ ಪರವಾಗಿ ಮತ ಚಲಾಯಿಸುವವರ ಸಂಖ್ಯೆ ಕಡಿಮೆ. ಆದರೆ, ಈ ಮಾತನ್ನು ಒಪ್ಪಲು ಮೇಯರ್ ಗೌತಮ್ ತಯಾರಿದ್ದಾರೆಯೇ?
ಈ ಕುರಿತು ಮಾತನಾಡಿರುವ ದೊಮ್ಮಲೂರು ವಾರ್ಡ್‌ನ ಕಾರ್ಪೊರೇಟರ್ ಆಗಿರುವ ಲಕ್ಷ್ಮಿನಾರಾಯಣ ಅವರು ಮೇಯರ್ ಅವರ ಸ್ವಹಿತಾಸಕ್ತಿಗಾಗಿ ನಡೆಸಿರುವಂತಹ ವಾರ್ಡ್ ವಿಂಗಡನೆ ಇದು. ಒಂದು ವೇಳೆ ನ್ಯಾಯಯುತವಾಗಿ ನಡೆದಿದ್ದಲ್ಲಿ, ಅಗ್ರಂ ವಾರ್ಡ್‌ಅನ್ನು ಸಮಾನಾಗಿ ಹಂಚಬೇಕಿತ್ತು. ಆರ್ಥಿಕವಾಗಿ ಮುಂದುವರೆದಿರುವ ವಾರ್ಡ್‌ಗಳನ್ನು ಮೇಯರ್ ವಾರ್ಡ್ ಜೊತೆ ಸೇರಿಸಿಕೊಂಡು, ಅಭಿವೃದ್ದಿಯಲ್ಲಿ ಹಿಂದುಳಿದಿರುವ ವಾರ್ಡ್‌ಗಳನ್ನು ನಮ್ಮ ವಾರ್ಡ್ ಜೊತೆ ಸೇರಿಸಿದ್ದಾರೆ. ಇದು ಯಾವ ನ್ಯಾಯ? ಎಂದು ಹೇಳಿದ್ದಾರೆ.
ಈ ಕುರಿತು ಮೇಯರ್ ಗೌತಮ್ ಅವರನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.
ಕಾಂಗ್ರೆಸ್ ಶಾಸಕ ಹ್ಯಾರಿಸ್ ಕೃಪಾ ಕಟಾಕ್ಷವೇ?
ಗೌತಮ್ ಕುಮಾರ್ ಅವರ ಅಧಿಕಾರ ದುರ್ಬಳಕೆಯ ವಿರುದ್ದ ಗಂಭೀರವಾಗಿ ಹೋರಾಟ ನಡೆಸಬೇಕಿದ್ದ ಕಾಂಗ್ರೆಸ್ ಮುಖಂಡರು ಕೇವಲ ಮಾಧ್ಯಮಗಳಿಗೆ ʼಸ್ಟೇಟ್‌ಮೆಂಟ್ʼ ನೀಡುವಲ್ಲಿ ನಿರತರಾಗಿದ್ದಾರೆ. ಈ ಕುರಿತು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರೊಬ್ಬರು ಪ್ರತಿಧ್ವನಿಯೊಂದಿಗೆ ಮಾತನಾಡಿದ್ದು, ನಮಗೇನೋ ವಿರೋಧ ಮಾಡಲು ಮನಸ್ಸಿದೆ. ಆದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಮುಖಂಡರು ಈ ಕುರಿತು ಚಕಾರ ಎತ್ತುತ್ತಿಲ್ಲ. ಗೌತಮ್ ಕುಮಾರ್ ಗೆದ್ದ ಕೂಡಲೇ ಹ್ಯಾರಿಸ್ ಮನೆಗೆ ಬಂದು ಅವರ ಕಾಲಿಗೆ ಬೀಳುತ್ತಾರೆ. ಹ್ಯಾರಿಸ್ ಅವರು ಜೋಗುಪಾಳ್ಯ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ತಮ್ಮ ಕಾರ್ಯಕರ್ತರಲ್ಲಿ ಗೌತಮ್ ಗೆ ಮತ ಹಾಕಲು ತಿಳಿಸುತ್ತಾರೆ. ಇಂತಹ ಶಾಸಕನನ್ನು ಪಡೆದಿರುವುದು ನಮ್ಮ ದುರ್ದೈವ, ಎಂದಿದ್ದಾರೆ.
ನಿಜಕ್ಕೂ ಹೀಗಾಗಿದ್ದಲ್ಲಿ, ಕಾಂಗ್ರೆಸ್, ಮೇಯರ್ ಗೌತಮ್ ಅವರ ವಿರುದ್ದ ಯಾವುದೇ ದನಿ ಎತ್ತುವ ಸಾಧ್ಯತೆಗಳಿಲ್ಲ. ಇವೆಲ್ಲಾ ಆಗಿರುವುದು ಎಂಎಲ್‌ಎ ಹಾರಿಸ್ ಅವರ ಕೃಪಾಕಟಾಕ್ಷದಿಂದಲೇ ಎನ್ನುವುದು ಸಾಬೀತಾಗುತ್ತದೆ. ಇಲ್ಲವಾದಲ್ಲಿ, ಸರ್ಕಾರಿ ಗೆಜೆಟ್ ಹೊರಡಿಸಿ ಇಷ್ಟು ಸಮಯ ಕಳೆದರೂ, ಇನ್ನೂ ಯಾವುದೇ ರೀತಿಯ ಹೋರಾಟದ ಲಕ್ಷಣಗಳು ಬೆಂಗಳೂರಿನ ಕಾಂಗ್ರೆಸ್ ಮುಖಂಡರ ಕಡೆಯಿಂದ ಕಂಡು ಬರುತ್ತಿಲ್ಲ.
ಕಾನೂನು ಹೋರಾಟವೇ ದಾರಿ:
ಅತ್ತ ಕಾಂಗ್ರೆಸ್ ಮುಖಂಡರು ʼಕೈʼ ಹಿಡಿಯದಿದ್ದಾಗ ಇತ್ತ ಖುದ್ದು ಮೇಯರ್ ಅಧಿಕಾರ ದುರುಪಯೋಗ ಮಾಡಿಕೊಂಡಾಗ ಇವರನ್ನು ಮತಹಾಕಿ ಗೆಲ್ಲಿಸಿದ ಜನ ಮಾತನಾಡದೇ ಕುಳಿತುಕೊಳ್ಳುತ್ತಾರೆ ಎಂಬ ಲೆಕ್ಕಾಚಾರದಲ್ಲಿದ್ದ ರಾಜಕೀಯ ಮುಖಂಡರ ಲೆಕ್ಕ ಈ ಬಾರಿ ಉಲ್ಟಾ ಹೊಡೆಯುವ ಸಾಧ್ಯತೆಗಳಿವೆ. ಸ್ಥಳೀಯ ಕೆಲವು ನಾಗರೀಕರು, ಮೇಯರ್ ಗೌತಮ್ ಅವರ ಅಧಿಕಾರ ದುರುಪಯೋಗ ಹಾಗೂ ಅವೈಜ್ಞಾನಿಕ ವಾರ್ಡ್ ವಿಂಗಡನೆಯ ವಿರುದ್ದ ಕೋರ್ಟ್ ಮೆಟ್ಟಿಲೇರುವ ಅಭಿಲಾಷೆಯನ್ನು ಹೊರಹಾಕಿದ್ದು, ಇದಕ್ಕಾಗಿ ಇಂತಹ ಕೇಸುಗಳಲ್ಲಿ ಹೋರಾಡಿ ಅನುಭವವಿರುವ ಸಂಸ್ಥೆಯಾದ ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ (Committee for Public Accountability) ಮೊರೆ ಹೋಗಿದ್ದಾರೆ. ಏಕೆಂದರೆ, ಸ್ಥಳೀಯರೇ ಕೋರ್ಟ್ ಮೆಟ್ಟಿಲು ಹತ್ತಿದರೆ, ಎಲ್ಲಿ ರಾಜಕೀಯ ವ್ಯಕ್ತಿಗಳು ಅವರನ್ನು ತಮ್ಮತ್ತ ಸೆಳೆದು ಕೇಸು ವಾಪಾಸು ತೆಗೆದುಕೊಳ್ಳುವಂತೆ ಮಾಡುತ್ತಾರೋ ಎಂಬ ಕಾರಣಕ್ಕೆ ಈ ಸಂಸ್ಥೆಯ ಮೊರೆ ಹೋಗಲು ನಿರ್ಧರಿಸಿದ್ದಾರೆ ಸ್ಥಳೀಯರು.
ಒಟ್ಟಿನಲ್ಲಿ, ವಾರ್ಡ್ ವಿಂಗಡನೆಯ ವಿಚಾರದಲ್ಲಿ ಮೇಯರ್ ಗೌತಮ್ ಅವರು ಅಧಿಕಾರ ದುರುಪಯೋಗ ಮಾಡಿಕೊಂಡರೇ ಇಲ್ಲವೇ ಎನ್ನುವುದು ಕಾನೂನು ಹೋರಾಟದಲ್ಲಿ ತೀರ್ಮಾನವಾಗಲಿದೆ. ಆದರೆ, ತಮ್ಮ ಕೈಯಲ್ಲಿ ಅಧಿಕಾರ ಇದೆ ಎನ್ನುವ ಕಾರಣಕ್ಕೆ, ಎಲ್ಲವನ್ನೂ ಸ್ವಹಿತಕ್ಕಾಗಿ ಬಳಸಿಕೊಳ್ಳುವುದು ತಪ್ಪು. ಈ ವಿಚಾರದಲ್ಲಿ ಒಂದು ವೇಳೆ ತಪ್ಪು ನಡೆದಿದ್ದೇ ಆದರೆ, ವಿರೋಧ ಪಕ್ಷದವರು ಏಕೆ ಚಕಾರ ಎತ್ತುತ್ತಿಲ್ಲ? ಇದರಲ್ಲಿ ಆಡಳಿತ ಪಕ್ಷದವರೊಂದಿಗೆ ವಿರೋಧ ಪಕ್ಷದವರು ಸಂಧಾನ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನುಗಳು ಕೂಡಾ ಹುಟ್ಟಿಕೊಳ್ಳುತ್ತವೆ.