ರಾಜ್ಯದಲ್ಲಿ ಈಗಾಗ್ಲೇ ವ್ಯಾಪಕವಾದ ಬರದ ಛಾಯೆ ಆವರಿಸಿದೆ ಮುಂದಿನ ದಿನಗಳಲ್ಲಿ ರೈತರ ಬೆಳೆಗಳಿಗೆ ನೀರಿಲ್ಲದೆ ಸಂಕಷ್ಟ ಬರುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಕಾಣುತ್ತಿದೆ. ಇದರ ನಡುವೆ ಇದೀಗ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಧಾಕಾರ ಸೂಚಿಸಿದ್ದು ಕರ್ನಾಟಕ ಸರ್ಕಾರ ಈಗ ತಮಿಳುನಾಡಿಗೆ ನೀರು ಹರಿಸೋದಕ್ಕೆ ಪ್ರಾರಂಭ ಮಾಡಿದೆ.
ಇದರಿಂದ ಮುಂದಿನ ದಿನಗಳಲ್ಲಿ ಕೇವಲ ರೈತರ ಬೆಳೆಗಳಿಗೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಕೂಡ ಬವಣೆ ಉಂಟಾಗುವ ಸಾಧ್ಯತೆ ಇದೆ. ಇನ್ನು ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಇದೀಗ ರಾಜ್ಯ ಸರ್ಕಾರದ ವಿರುದ್ಧ ನಿಧಾನವಾಗಿ ವಿಪಕ್ಷಗಳು ಆಕ್ರೋಶ ವ್ಯಕ್ತ ಪಡಿಸಲು ಪ್ರಾರಂಭಿಸಿವೆ.
ಇದೇ ವಿಚಾರಕ್ಕೆ ಟ್ವಿಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ʼʼಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವುತ್ತ ಬಂದಿದೆ. ಈಗಾಗಲೇ ಸಿಡಬ್ಲುಎಂಎ ಆದೇಶದಂತೆ 10 ಸಾವಿರ ಕ್ಯೂಸೆಕ್ಸ್ ನಂತೆ ಸುಮಾರು 15 ಟಿಎಂಸಿ ನೀರು ಬಿಟ್ಟಿದೆ ಆದರೂ ಅದರ ವಿರುದ್ದ ಯಾವುದೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ.ʼʼ
ʼʼಈಗ ಸಿಡಬ್ಲುಎಂಎ ಸೂಚನೆ ಮೇರೆಗೆ 5000 ಕ್ಯುಸೆಕ್ಸ್ ನೀರು ಬಿಡಲು ಪ್ರಾರಂಭ ಮಾಡಿದ ಮೇಲೆ ಡಿಸಿಎಂ ಅವರು ಕಾನೂನು ತಜ್ಞರ ಜೊತೆ ಚರ್ಚೆ ಮಾಡುವುದರಲ್ಲಿ ಯಾವ ಅರ್ಥ ಇದೆ. ಹಿಂದಿನ ಆದೇಶದ ವಿರುದ್ದ ಈಗಾಗಲೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು, ಅದು ಕೂಡ ಮಾಡಿಲ್ಲ.ʼʼ
ʼʼಈಗ ನೀರು ಬಿಡುತ್ತಿರುವುದರಿಂದ ಕಾನೂನು ಹೋರಾಟಕ್ಕೆ ಅರ್ಥವಿಲ್ಲ. ಕೂಡಲೇ ನೀರು ನಿಲ್ಲಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ತೀವ್ರವಾದಂತಹ ಮನವರಿಕೆ ಮಾಡುವ ಮೂಲಕ ಕಾನೂನು ಹೋರಾಟ ಮಾಡಬೇಕೆಂದು ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದ ಕುಡಿಯುವ ನೀರು ಹಾಗೂ ರೈತರ ಹಿತಾಸಕ್ತಿ ಕಾಪಾಡಲು ವಿಫಲವಾಗಿದೆ.ʼʼ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದೀಗ ಸರ್ಕಾರದ ವಿರುದ್ಧ ವಿಪಕ್ಷಗಳು ಕೂಡ ಕೆಂಡ ಕಾರೋದಕ್ಕೆ ಪ್ರಾರಂಭ ಮಾಡಿದ್ದು ಸರ್ಕಾರ ಯಾವ ರೀತಿಯಾಗಿ ಮುಂದಿನ ಹೆಜ್ಜೆಗಳನ್ನ ಇಡಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.