ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಬಿಜೆಪಿ ಸಂಸತ್ ಪಟು ಜೆ.ಸಿ ಮಾಧುಸ್ವಾಮಿ ಅವರನ್ನು ಕಣಕ್ಕಿಳಿಸಲು ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಲವು ತೋರಿದ್ದು, ಇದಕ್ಕೆ ಸಂಸದ ಜಿ.ಎಸ್ ಬಸವರಾಜು ತೀವ್ರ ವಿರೋಧ ತೋರಿದ್ದಾರೆ ಎಂದು ಗೊತ್ತಾಗಿದೆ.

ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್ ನೀಡಿದರೆ ಫಲಿತಾಂಶದ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಅವರು ಸೋತಿದ್ದಾರೆ. ದುರಹಂಕಾರ ದಿಂದ ವರ್ತಿಸಿದ್ದಾರೆ ಅಂತವರಿಗೆ ಜನ ಮತ ಹಾಕುವುದಿಲ್ಲ. ಹೈಕಮಾಂಡ್ ನಾಯಕರು ಜನಾಭಿಪ್ರಾಯ ನೋಡಿಕೊಂಡು ಅಭ್ಯರ್ಥಿಯನ್ನು ಘೋಷಿಸುತ್ತಾರೆ ಎಂದು ಬಸವರಾಜ್ ಹೇಳಿದ್ದಾರೆ.
ಬಸವರಾಜು ಅವರಿಗೆ 82 ವರ್ಷ ವಯಸ್ಸು, ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡುವುದಿಲ್ಲ, ಹೀಗಾಗಿ ತಮ್ಮ ನಂತರ ಸೋಮಣ್ಣ ಅವರಿಗೆ ಟಿಕೆಟ್ ನೀಡುವಂತೆ ಈ ಹಿಂದೆ ಒತ್ತಾಯಿಸಿದ್ದರು. ಇದಕ್ಕೆ ಸೋಮಣ್ಣ ನಾನು ಲೋಕಸಭಾ ಅಭ್ಯರ್ಥಿಯಲ್ಲ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಬೇಕು ಎಂದು ನಾನು ಯಾರನ್ನೂ ಕೇಳಿಲ್ಲ ಎಂದಿದ್ದರು

ಬಿಜೆಪಿ ಮುಖ್ಯಸ್ಥ ಬಿವೈ ವಿಜಯೇಂದ್ರ ಕೂಡ ಮಾಧುಸ್ವಾಮಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಒಲವು ತೋರಿದ್ದಾರೆ. ಆದರೆ ತುಮಕೂರು ಲೋಕಸಭೆ ಟಿಕೆಟ್ ಕುರಿತು ಅಮಿತ್ ಶಾ ಅವರ ಬಳಿ ಮಾತನಾಡಿ ವಸ್ತು ಸ್ಥಿತಿ ವಿವರಿಸುವುದಾಗಿ ಜಿಎಸ್ ಬಸವರಾಜು ಹೇಳಿದ್ದು ಹೈ ಕಮಾಂಡ್ ಯಾರಿಗೆ ಮಾತಿಗೆ ಮಣೆ ಹಾಕಿ ಟಿಕೆಟ್ ನೀಡುತ್ತೋ ಕಾದು ನೋಡಬೇಕಿದೆ. ಅಲ್ಲದೆ ಮಾಧುಸ್ವಾಮಿ ಸಚಿವರಾಗಿದ್ದಾಗ ಏಕವಚನದಲ್ಲಿ ನಿಂದಿಸಿದ್ದ ಬಸವರಾಜು, ಒಂದು ವೇಳೆ ಮಾಧುಸ್ವಾಮಿಗೆ ಟಿಕೆಟ್ ನೀಡಿದರೆ ಅವರ ಪರ ಕೆಲಸ ಮಾಡುತ್ತಾರೋ ಇಲ್ಲವಾ ಎಂಬುದು ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ