ದೇಶದಲ್ಲಿ ಇಂಧನ ಬೆಲೆ ಸಾರ್ವತ್ರಿಕ ಗರಿಷ್ಠ ಮಟ್ಟ ತಲುಪಿರುವ ಬೆನ್ನಲೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕರ್ನಾಟಕದಲ್ಲಿ ಇಂಧನ ಮೇಲಿನ ಮಾರಾಟ ತೆರಿಗೆ ಮತ್ತು ಸೆಸ್ ದರವನ್ನ ಕಡಿಮೆ ಮಾಡುವ ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಉಪಚುನಾವಣೆ ನಡೆಯುತ್ತಿರುವ ಬೆನ್ನಲೇ ಮುಖ್ಯಮಂತ್ರಿಗಳ ನಡೆ ಸಾಕಷ್ಟು ಕುತುಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇದು ರಾಜಕೀಯ ಗಿಮಿಕ್ಕೋ ಅಥವಾ ನಿಜಕ್ಕು ಇಂಧನ ಮಾರಾಟ ತೆರಿಗೆಯನ್ನು ಕಡಿಮೆ ಮಾಡುತ್ತಾರ ಕಾದು ನೋಡಬೇಕು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಡಿದ ಬೊಮ್ಮಾಯಿ ʻʻಎಲ್ಲವೂ ಆರ್ಥಿಕತೆಯ ಮೇಲೆ ನಿಂತಿದೆ ನಾನು ಆರ್ಥಿಕ ಇಲಾಖೆಯ ಪರಿಶೀಲನಾ ಸಭೆಯನ್ನು ಕರೆದಿದ್ದೇನೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೆ ಪರಿಗಣನೆಗೆ ಅವಕಾಶವಿದೆʼʼ ಎಂದು ಹೇಳಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಬೊಮ್ಮಾಯಿ ಇಂಧನ ಮೇಲಿನ ತೆರಿಗೆ ವಿನಾಯಿತಿ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಪ್ರಸ್ತುತ ರಾಜ್ದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 109.16 ಕ್ಕೆ ತಲುಪಿದೆ ಡೀಸೆಲ್ ದರ 100 ರೂಪಾಯಿಗಳ ಗಡಿ ದಾಟಿದೆ.

ತಮಿಳುನಾಡು ಸರ್ಕಾರದಂತೆ ಕರ್ನಾಟಕದಲ್ಲಿಯು ಇಂಧನ ಮೇಲಿನ ತೆರಿಗೆಯನ್ನು 3 ರೂಪಾಯಿಗಳಷ್ಟು ಇಳಿಸುವಂತೆ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಈ ವೇಳೆ, ಭಾರತದಲ್ಲಿ ಇಂಧನ ಬೆಲೆ ಏರಿಕೆಯಾಗಲು ಆಡಳಿತರೂಢ ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವೇಳೆ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯುಪಿಎ ಆಡಳಿತಾವಧಿಯಲ್ಲಿ ಇಂಧನ ಬೆಲೆ ಶೇಕಡಾ 60%ರಷ್ಟು ಏರಿಕೆಯಾಗಿತ್ತು. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಇಂಧನ ಬೆಲೆಗಳು ಶೇಕಡಾ 30%ರಷ್ಟು ಹೆಚ್ಚಾಗಿದೆ ಎಂಧು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ʻಬೆಲೆ ಏರಿಕೆ ನೆಪದಲ್ಲಿ ಬಿಜೆಪಿ ಜನರನ್ನು ಲೂಟಿ ಮಾಡುತ್ತಿದೆʼ ಎಂದು ಆರೋಪಿಸಿದ್ದಾರೆ.