
ಒಪ್ಪುವ ಸಾಧ್ಯತೆ ಕ್ಷೀಣ
“ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರಿಗೆ ಸಾಹಿತ್ಯ ಗೋಷ್ಠಿ ನಡೆಸಲು ಅವಕಾಶ ನೀಡದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು (ಮಹೇಶ್ ಜೋಶಿ) , ಈ ಬಾರಿ ಸರ್ವಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಅವರಲ್ಲಾದ ಮಾನಸಿಕ ಪರಿವರ್ತನೆಯೇ?, ಅವರ ಮೇಲೆ ಇರುವ ಒತ್ತಡಗಳೇ?, ಸಾಮಾಜಿಕ ಸ್ಥಿತ್ಯಂತರವೇ? ಅಥವಾ ಮತ್ಯಾವುದೋ ಅನಿವಾರ್ಯವೇ? ಎಂಬುದನ್ನು ತಿಳಿದುಕೊಳ್ಳಬೇಕಿದೆ”-ಬಾನು ಮುಷ್ತಾಕ್
Muralidhara Khajane
ಬಳ್ಳಾರಿಯಲ್ಲಿ ನಡೆಯಲಿರುವ ೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಸ್ಥಾನ-ಮಾನವನ್ನು ಒಪ್ಪಿಕೊಳ್ಳಬೇಕೇ? ಬೇಡವೇ? ಎಂಬುದನ್ನು ಜಗತ್ತಿನ ಸಾಹಿತ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಬೂಕರ್ ಪ್ರಶಸ್ತಿಗೆ ಪಾತ್ರರಾಗಿರುವ ಬಾನು ಮುಷ್ತಾಕ್ ಇನ್ನೂ ತೀರ್ಮಾನಿಸಿಲ್ಲ. ಇದೊಂದು ಸ್ವಲ್ಪ ನೆಮ್ಮದಿಯ ಸಂಗತಿ ಏಕೆಂದರೆ, ತನ್ನ ಸುತ್ತ ವಿವಾದಗಳ ಹುತ್ತವನ್ನೇ ಕಟ್ಟಿಕೊಂಡಿರುವ ಮತ್ತು ಎಲ್ಲ ರೀತಿಯ ಭಂಡತನದ ಬಹಿರಂಗ ಪ್ರದರ್ಶನ ಮಾಡುತ್ತಿರುವ ಕನ್ನಡದ ಪ್ರಾತಿನಿಧಿಕ ಸಂಸ್ಥೆ-ಕನ್ನಡ ಸಾಹಿತ್ಯ ಪರಿಷತ್, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತಮ್ಮನ್ನು ಆಯ್ಕೆ ಮಾಡಿರಬೇಕು ಎಂಬ ಜ್ಞಾನೋದಯ ಬಾನು ಮುಷ್ತಾಕ್ ಅವರಿಗೆ ಆಗಿರುವಂತೆ ಕಾಣುತ್ತಿದೆ.

ಇನ್ನೂ ನಿರ್ಧಾರವಿಲ್ಲ
ಶನಿವಾರ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬಾನು ಮುಷ್ತಾಕ್; “೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ-ಮಾನವನ್ನು ಒಪ್ಪಿಕೊಳ್ಳುವ ಬಗ್ಗೆ ಮುಂದಿನ ಬೆಳವಣಿಗೆಗಳನ್ನು ಗಮನಿಸಿ ತೀರ್ಮಾನಿಸುತ್ತೇನೆ ಎಂದು ಹೇಳಿದ ನಂತರ ಸಾಹಿತ್ಯ ಲೋಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಕಣ್ಣಿಗೆ ಕಾಣಿಸುತ್ತಿರುವಂತೆ ಬಾನು ಮುಷ್ತಾಕ್ ಆತ್ಮಾವಲೋಕನ ಮಾಡಿಕೊಂಡ ನಂತರ ಈ ಮಾತುಗಳನ್ನು ಹೇಳಿದಂತೆ ತೋರುತ್ತಿದೆ.
ಯಾವ ಅನಿವಾರ್ಯ ಅರ್ಥವಾಗಬೇಕಿದೆ
ತಮ್ಮ ತೀರ್ಮಾನವನ್ನು ಪ್ರಕಟಿಸುತ್ತಲೇ, ಬಾನು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರಿಗೆ ಸಾಹಿತ್ಯ ಗೋಷ್ಠಿ ನಡೆಸಲು ಅವಕಾಶ ನೀಡದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು (ಮಹೇಶ್ ಜೋಶಿ) , ಈ ಬಾರಿ ಸರ್ವಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಅವರಲ್ಲಾದ ಮಾನಸಿಕ ಪರಿವರ್ತನೆಯೇ?, ಅವರ ಮೇಲೆ ಇರುವ ಒತ್ತಡಗಳೇ?, ಸಾಮಾಜಿಕ ಸ್ಥಿತ್ಯಂತರವೇ? ಅಥವಾ ಮತ್ಯಾವುದೋ ಅನಿವಾರ್ಯವೇ? ಎಂಬುದನ್ನು ತಿಳಿದುಕೊಳ್ಳಬೇಕಿದೆ. ಈ ನಡುವೆ ಪರಿಷತ್ತು ಮುಖ್ಯವೋ ಅಥವಾ ಅಧ್ಯಕ್ಷರು ಮುಖ್ಯವೋ? ಎಂಬ ಪ್ರಶ್ನೆ ಇದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ. ಮಹೇಶ್ ಜೋಶಿ ಅವರ ಮೇಲಿನ ಆರೋಪಗಳು ಸರ್ವಾಧ್ಯಕ್ಷ ಸ್ಥಾನವನ್ನು ತಾವಿನ್ನೂ ಒಪ್ಪಿಕೊಳ್ಳದಿರಲು ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. “ಇಂಥ ಅಧ್ಯಕ್ಷರಿರುವಾಗ ಈ ಸ್ಥಾನವನ್ನು ಒಪ್ಪಿಕೊಳ್ಳಬೇಕೋ? ಬಿಡಬೇಕೋ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ” ಎಂದು ಹೇಳಿರುವುದು. ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಇನ್ನು ಮುಂದೆ ಹೋದ ಬಾನು ಮುಷ್ತಾಕ್ “ಸಮ್ಮೇಳನದ ಲೆಕ್ಕಾಚಾರದಲ್ಲಿ ದೋಷವಾಗದಾಗ ಸರ್ಕಾರ ಏನು ಮಾಡುತ್ತಿತ್ತು?” ಆಗಲೇ ತನಿಖೆ ನಡೆಸಿದ, ಸರ್ಕಾರ ಕ್ರಮಕೈಗೊಳ್ಳಬೇಕಿತ್ತು ಅಲ್ಲವೇ?ʼ ಎಂದು ಕೇಳುವುದರ ಮೂಲಕ , ತಾವು ಸತ್ಯ ಮತ್ತು ನ್ಯಾಯದ ಪರ ಎಂಬುದನ್ನು ಮತ್ತಷ್ಟು ಗಟ್ಟಿಯಾಗಿ ಸ್ಪಷ್ಟಪಡಿಸಿದ್ದಾರೆ. ಇಷ್ಟು ಹೇಳಿದ ಮೇಲೂ, ಸರ್ವಾಧ್ಯಕ್ಷರ ಆಯ್ಕೆ ಪ್ರಜಾಸತ್ತಾತ್ಮಕವಾಗಿ ನಡೆದಿದ್ದು ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದವನ್ನೂ ಹೇಳಿದ್ದಾರೆ.
ದಸರೆ-ಈಗೇಕೆ? ಚರ್ಚೆ
ಇದೇ ರೀತಿ ದಸರೆಯ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸುವ ಚರ್ಚೆ ನಡೆದಿರುವುದಕೆ, ನೇರವಾಗಿ ಉತ್ತರಿಸದೆ, “ಕೂಸು ಹುಟ್ಟುವ ಮುನ್ನವೇ ಅದಕ್ಕೆ ಹೆಸರಿಟ್ಟು ಕುಲಾವಿ ಹೊಲಿಸುವುದೂ ಬೇಡ” ಎಂದು ಮುಂದೆ ಆಗಬಹುದಾದ ವಿವಾದಕ್ಕೆ ಮಂಗಳ ಹಾಡಿದ್ದಾರೆ. ಪ್ರಶಸ್ತಿ ಬಂದಿರುವುದಕ್ಕೆ ತಮ್ಮನ್ನು ಇದುವರೆಗೆ ಅಭಿನಂದಿಸದ ಪ್ರಧಾನಿ ಮೋದಿ ಅವರನ್ನೂ ಟೀಕಿಸಲಿಲ್ಲ. ಬದಲಿಗೆ “ಇದುವರೆಗೆ ಮೋದಿ ಅವರು ನನಗೆ ಅಭಿನಂದನೆ ಹೇಳಿಲ್ಲ. ಮುಂದೆ ಎಂದಾದರೂ ಹೇಳಬಹುದು” ಎಂದು ಅವರು ಮುಗುಳ್ನಗುತ್ತಾರೆ. ಅವರ ಈ ಎಲ್ಲ ಮಾತುಗಳ ತಾತ್ಪರ್ಯ ವಿವಾದಗಳ ಸುಳಿಯಲ್ಲಿ ಸಿಕ್ಕಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ ತನ್ನ ವಿಶ್ವಾಸಾರ್ಹತೆ ಸಾಬಿತು ಪಡಿಸಬೇಕು ಎಂಬುದೇ ಆಗಿದೆ ಎಂಬುದನ್ನು ಕನ್ನಡ ಸಾಂಸ್ಕೃತಿಕ ಲೋಕ ಅರ್ಥ ಮಾಡಿಕೊಳ್ಳಬೇಕಿದೆ.
ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ?
ಈ ಕಾಲಘಟ್ಟದ ದುರದೃಷ್ಟಕರ ಸಂಗತಿಯೆಂದರೆ, ಒಳ್ಳೆಯ ಕೆಲಸಕ್ಕಾಗಿ, ಸಾಹಿತ್ಯ ಸಂಸ್ಕೃತಿಯ ಉನ್ನತಿಗಾಗಿ ದುಡಿಯುತ್ತಿರುವ ಕಾರಣಕ್ಕಾಗಿ ಒಳ್ಳೆಯ ಸುದ್ದಿಯಾಗಬೇಕಾದ ಕನ್ನಡ ಸಾಹಿತ್ಯ ಪರಿಷತ್ತು, ಇಂದು ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದು. ತನ್ನ ಲೋಪಗಳಿಗಾಗಿ, ತನ್ನ ಹಣದ ದುರ್ಬಳಕೆಯ ಕಾರಣಕ್ಕೆ ಸರ್ಕಾರದ ತನಿಖೆಯನ್ನು ಎದುರಿಸಬೇಕಾದ ಸಂದರ್ಭ ಎದುರಾಗಿರುವುದು. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಯಾವಾಗ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮಧ್ಯ ಪ್ರವೇಶವಾಯಿತೋ, ಯಾವ ಪಕ್ಷದ ಫರ್ಮಾನಿನಿಂದ, ಅಥವ ನೆರವಿನಿಂದ ಈ ಮಹೇಶ್ ಜೋಶಿ ಅಧ್ಯಕ್ಷ ಗಾದಿಯನ್ನು ಹಿಡಿದರೋ, ಈ ಗಾದಿಯನ್ನು ಹಿಡಿಯಲು ಅವರು ಅನುಸರಿಸಿದ ಬಹುಜನರಿಗೆ ಸರಿಯಲ್ಲ ಎನ್ನಿಸಿದ ಮಾರ್ಗಗಳಿಂದ ಮುಂದಿನ ಭವಿಷ್ಯವನ್ನು ಯಾರಾದರೂ ಊಹಿಸಬಹುದಿತ್ತು. ಇವರ ನೆರವಿಗೆ ನಿಂತ ರಾಜಕೀಯ ಪಕ್ಷದ ಸರ್ವಾಧಿಕಾರಣ ಮೌಲ್ಯವನ್ನು ಜೋಶಿ ಆರಂಭದಿಂದಲೂ ಅನುಸರಿಸಿಕೊಂಡೇ ಬಂದು, ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ.

ಕನ್ನಡಾಂಬೆಯ ಕಣ್ಣೀರ
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಯ ಸಂವರ್ಧನೆ ಹಾಗೂ ರಕ್ಷಣೆಯ ಸದಾಶಯಗಳೊಂದಿಗೆ ಸುಮಾರು ನೂರಾ ಹತ್ತು ವರ್ಷಗಳ ಹಿಂದೆ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಇಂದು ತಲುಪಿರುವ ಸ್ಥಿತಿಯನ್ನು ಕಂಡರೆ, ವಿಧಾನ ಸೌಧದ ಬಳಿ ಕುಳಿತಿರುವ ಕನ್ನಡಾಂಬೆ ಕಣ್ಣೀರಿಡುತ್ತಿದ್ದರೇನೋ, ಎಂಬ ಭಾವನೆ ಕಾಡದಿರುವುದಿಲ್ಲ. “ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ. ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀನೆ…..!” ಎಂದು ಕಣ್ಣಿರಿಡುವ ಸ್ಥಿತಿ ಕನ್ನಡಿಗರದ್ದಾಗಿದೆ.
ಗೂಟದ ಕಾರು ಕಿತ್ತುಕೊಂಡ ಸರ್ಕಾರ
ಪರಿಷತ್ತಿನ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಕನ್ನಡದ ಹಿರಿಯ ಲೇಖಕರು, ಬರಹಗಾರರು ಪರಿಷತ್ತಿನಲ್ಲಿ ನಡೆದಿರುವ ಅವ್ಯವಹಾರಗಳ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ ಕಾರಣ ಸಹಕಾರ ಇಲಾಖೆ ಈಗಾಗಲೇ ತನಿಖೆ ಆರಂಭಿಸಿದೆ. ಪರಿಷತ್ತಿನ ಅಧ್ಯಕ್ಷರನ್ನು ವಜಾಗೊಳಿಸಿ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಒತ್ತಾಯವೂ ಕೇಳಿ ಬಂದಿದೆ. ಎಂಥ ದುರದೃಷ್ಟಕರ ಸಂಗತಿ ನೋಡಿ! ಪರಿಷತ್ತಿನ ಅಧ್ಯಕ್ಷರು ಆರೋಪಿಸ ಸ್ಥಾನದಲ್ಲಿರುವುದರಿಂದ ಅವರಿಗೆ ನೀಡಲಾಗಿರುವ ರಾಜ್ಯ ಸಚಿವ ಸ್ಥಾನಮಾನ ಮತ್ತು ಸವಲತ್ತುಗಳನ್ನು ಕರ್ನಾಟಕ ಸರ್ಕಾರ ಹಿಂದಕ್ಕೆ ಪಡೆದಿದೆ. ಈಗ ಅವರ ಬಳಿ ಗೂಟದ ಕಾರಿಲ್ಲ. ಢವಾಲಿ ಇಲ್ಲ. ಮಹೇಶ್ ಜೋಶಿ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ದಿನದಿಂದ ಒಂದಲ್ಲ ಒಂದು ವಿವಾದವನ್ನು ನಿರಂತರವಾಗಿ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅವರು ದೂರದರ್ಶನದ ಅಧಿಕಾರಿಯಾಗಿದ್ದಾಗಲೂ ಅವರ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳಿವೆ.
ಇಬ್ಬರು ಗೌರವ ಕಾರ್ಯದರ್ಶಿಗಳ ರಾಜೀನಾಮೆ
ಪರಿಷತ್ತಿನ ಅಧ್ಯಕ್ಷರಾದಮೇಲೆ ಅವರಿಂದ ಉಂಟಾಗಿರುವ ವಿವಾದಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನದ ಘನತೆಗೆ ಕಪ್ಪು ಮಸಿ ಬಳಿದಂತಾಗಿದೆ. ೨೦೨೪ರ ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಸಾಹಿತಿಗಳು, ಬರಹಗಾರರು, ಜೋಶಿ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬೆಂಗಳೂರು, ಹಾಸನ ಮುಂತಾದ ಜಿಲ್ಲೆಗಳಲ್ಲಿ ಜೋಶಿ ಅವರ ವಿರುದ್ಧ ಪ್ರತಿಭಟನೆ, ಹೋರಾಟ, ಚಳವಳಿ ನಡೆದಿದ್ದವು. ಇತ್ತೀಚೆಗೆ ಪರಿಷತ್ತಿನೊಳಗಿನಿಂದಲೇ ಅಧ್ಯಕ್ಷರ ನಡವಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಅಧ್ಯಕ್ಷರ ಧೋರಣೆಯನ್ನು ಪ್ರತಿಭಟಿಸಿ, ಪರಿಷತ್ತಿನ ಇಬ್ಬರು ಗೌರವ ಕಾರ್ಯದರ್ಶಿಗಳು ರಾಜಿನಾಮೆ ನೀಡಿದ್ದಾರೆ. ಬಳ್ಳಾರಿಯಲ್ಲಿ ನಡೆಯಲಿರುವ ೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ಮತ್ತು ಸ್ಥಳ ನಿಗದಿಯಾಗುವ ಮುನ್ನವೇ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿ, ಪರಷತ್ತಿನ ನಿಯಮಾವಳಿಗೆ ಧಕ್ಕೆ ತಂದಿರುವ ಅವರನ್ನು ಯಾರು ಯಾವ ರೀತಿ ಕ್ಷಮಿಸಲು ಸಾಧ್ಯ ಎಂದು ದಟ್ಟವಾಗಿ ಕೇಳಿಬರುತ್ತಿರುವ ಪ್ರಶ್ನೆ.
ಬತ್ತಲಾರದ ಗಂಗೆಯಂಥ ಪರಿಷತ್ತಿಗೆ ಬಂತು ಎಂಥ ಕುತ್ತಿದು ನೋಡು

ಕೊನೆಯ ಮಾತು: ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಾಯ ಮತ್ತಿತರ ಗಣ್ಯರ ದೂರದೃಷ್ಟಿ ಸದಾಶಯಗಳೊಂದಿಗೆ ೧೯೧೫ರಲ್ಲಿ ಅರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದಿರುವ ಇಂದಿನ ಸ್ಥಿತಿಯನ್ನು ಕಂಡಾಗ: “ಬತ್ತಲಾರದ ಗಂಗೆಗೆ ಬಂತು ಎಂಥ ಕುತ್ತಿದು ನೋಡು” ಎನ್ನಬಹುದೇನೋ. ಹಾಗೆಂದು ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ ವಿವಾದಕ್ಕೊಳಗಾಗಿಲ್ಲ. ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಸಂದರ್ಭದಲ್ಲಿ ಕೆಲವು ಆರೋಪಗಳು ಬಂದಿದ್ದರು, ಅವು ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಗೆ ಈ ಮಟ್ಟದ ಧಕ್ಕೆ ತಂದಿರಲಿಲ್ಲ ಎಂಬುದಂತೂ ಸತ್ಯ. ಈಗ ಸದ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ವಾಸಾರ್ಹತೆ ಕುರಿತು ಎದುರಾಗಿರುವ ಉತ್ತರ ದೊರೆಯಬೇಕಿದೆ. ಯಾವುದೋ ಒಬ್ಬ ವ್ಯಕ್ತಿಯ ಪ್ರತಿಷ್ಠೆಯ ಸಲುವಾಗಿ ಒಂದೂ ಕಾಲು ಶತಮಾನದ ಇತಿಹಾಸಕ್ಕೆ ಹತ್ತಿರವಾಗುತ್ತಿರುವ ಕನ್ನಡದ ಈ ಪ್ರಾತಿನಿಧಿಕ ಸಂಸ್ಥೆಯ ಘನತೆ ಮುಕ್ಕಾಗದಂತೆ ಕಾಯ್ದುಕೊಳ್ಳುವುದು ಈಗ ಕನ್ನಡಿಗರ ಕರ್ತವ್ಯ ಮತ್ತು ಜವಾಬ್ದಾರಿ.