ಪೊಲಿಸರು ಮತ್ತು ಸಾರ್ವಜನಿಕರ ಸಹಕಾರದಿಂದ ಸೌಹಾರ್ದಯುತವಾಗಿ ಗಣೇಶ ವಿಸರ್ಜನೆ:ಬಸವರಾಜ ಬೊಮ್ಮಾಯಿ

ಹಾವೇರಿ(ಶಿಗ್ಗಾವಿ) ಬಂಕಾಪುರ ಗಣೇಶನ ವಿಸರ್ಜನೆ ಸಂಪ್ರದಾಯದಂತೆ ನಡೆಯಬೇಕು ಎನ್ನುವುದು ಬಂಕಾಪುರ ಜನತೆಯ ಆಶಯವಾಗಿತ್ತು. ಪೊಲಿಸರು ಹಾಗೂ ಜನರ ಸಹಕಾರದಿಂದ ಸೌಹಾರ್ದಯುತವಾಗಿ ಗಣೇಶನ ವಿಸರ್ಜನೆ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿ, ಚಾಲನೆಯನ್ನು ನೀಡಿದರು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಬೇರೆ ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಹಾವೇರಿಯಲ್ಲಿ ಅನಗತ್ಯ ಆದೇಶಗಳನ್ನು ಮಾಡಿದ್ದರಿಂದ ಪೊಲೀಸರಿಗೂ ಕಷ್ಟವಾಗಿತ್ತು. ಈಗ ಅವರೂ ಸಹಕಾರ ಮಾಡಿದ್ದಾರೆ, ನಾವೂ ಸಹಕಾರ ಮಾಡಿದ್ದೇವೆ. ಹೀಗಾಗಿ ಗಣೇಶನ ವಿಸರ್ಜನೆ ಭಕ್ತಿ ಭಾವದಿಂದ ಸೌಹಾರ್ದತೆಯಿಂದ ನಡೆದಿದೆ. ಹೀಗಾಗಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದರು.

ಗಣೇಶನ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡಿದವರ ವಿರುದ್ದ ಹಾಕಿರುವ ಪ್ರಕರಣಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಜೆ ಬಳಕೆ ವಿಚಾರದಲ್ಲಿ ಹೈಕೋರ್ಟ್ ನಿರ್ದಿಷ್ಟ ಡೆಸಿಬಲ್ ಮೀರದಂತೆ ನಿರ್ದೇಶನ ನೀಡಿದೆ. ಅದನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸರ್ಕಾರದ ನಿಯಮದ ಪ್ರಕಾರ ರಾತ್ರಿ 10 ಗಂಟೆಯ ಮೇಲೆ ಬೆಳಗಿನ ನಾಲ್ಕು ಗಂಟೆಯ ಮುಂಚೆ ಸ್ಪೀಕರ್ ಹಚ್ಚಬಾರದು ಅಂತ ಇದೆ. ಆದರೆ, ಕೆಲವರು ಸ್ಪೀಕರ್ ಹಚ್ಚುತ್ತಾರೆ.ನಾವು ಅದನ್ನು ಧಾರ್ಮಿಕ ಕಾರ್ಯಕ್ರಮ ಅಂತ ಸುಮ್ಮನಾಗುತ್ತೇವೆ. ಸರ್ಕಾರ ಎಲ್ಲರಿಗೂ ಒಂದೇ ಆಗಿರಬೇಕು. ಕಾನೂನು ಒಂದೆ ಇರಬೇಕು. ಸರ್ಕಾರ ಸರಿಯಾಗಿ ನಡೆದುಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸರ್ಕಾರ ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಮಾಡಿದಾಗ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದರು.

ಪಕ್ಷ ಸಂಘಟನೆ ಚರ್ಚೆ
ಬಿಜೆಪಿ ಕೋರ್ ಕಮಿಟಿ ಸಭೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರಯ, ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಆಗಿರುವ ಹಾನಿಯ ಕುರಿತು ಪಕ್ಷದ ತಂಡ ನಡೆಸಿರುವ ಸಮೀಕ್ಷೆಯ ಕುರಿತು ಚರ್ಚೆ ಆ ನಿಟ್ಟಿನಲ್ಲಿ ಮುಂದಿನ ಕ್ರಮ ಏನು ತೆಗೆದುಕೊಳ್ಳಬೇಕು. ಪಕ್ಷದ ಸಂಘಟನೆ ಹಾಗೂ ಗ್ರೇಟರ್ ಬೆಂಗಳೂರು ಕುರಿತು ಚರ್ಚೆ ಮಾಡಿ ಪಕ್ಷದ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಟೋಪಿ ಬಗ್ಗೆ ಕಾಂಗ್ರೆಸ್ ಮನಸ್ಥಿತಿ
ಶಾಸಕ ಮುನಿರತ್ನ ಅವರು ಹಾಕಿದ್ದ ಆರ್ ಎಸ್ ಎಸ್ ಟೋಪಿಯ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿರುವ ಮಾತಿನ ಕುರಿತು ಕೇಳಿದ ಪ್ರಶ್ನೆಗೆ ಅದು ಕಾಂಗ್ರೆಸ್ ನವರ ಮನಸ್ಥಿತಿಯನ್ನು ತೋರಿಸುತ್ತದೆ. ಹಿಂದೆ ಗಾಂಧಿ ಟೋಪಿಯನ್ನು ಕಾಂಗ್ರೆಸ್ ಟೋಪಿಯನ್ನಾಗಿ ಮಾಡಿಕೊಂಡು ಅದಕ್ಕೆ ಅವಮಾನ ಮಾಡಿದ್ದರು. ಈಗ ಆರ್ ಎಸ್ ಎಸ್ ಟೋಪಿಗೆ ಅವಮಾನ ಮಾಡಿದ್ದಾರೆ. ಅದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ, ಯುವ ಮುಖಂಡರಾದ ಶ್ರೀ ಭರತ ಬೊಮ್ಮಾಯಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.