ನವದೆಹಲಿ : ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಎಚ್ಚರಿಕೆ ನೀಡಿದೆ.

ಸೆಪ್ಟೆಂಬರ್ 28 ರಿಂದ ಸೆಪ್ಟೆಂಬರ್ 30 ರವರೆಗೆ ಈ ಮುಷ್ಕರ ನಡೆಯಲಿದ್ದು, ಗ್ರಾಹಕರು ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವಂತೆ ಬ್ಯಾಂಕ್ ಸಲಹೆ ಮಾಡಿದೆ. ಸೆಪ್ಟೆಂಬರ್ 26 ಮತ್ತು 27 ರಂದು ವಾರಾಂತ್ಯದ ರಜೆ ಇರುವುದರಿಂದ, ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ಕೆಲಸದ ಅವಧಿ ಜಾರಿ, ಪಿಂಚಣಿ ಪರಿಷ್ಕರಣೆ, ಎಲ್ಲಾ ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ ಸೂತ್ರ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿರುವ (NPS) ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಗೆ (OPS) ಮರಳಲು ಅವಕಾಶ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಒಕ್ಕೂಟಗಳು ಈ ಮುಷ್ಕರ ಹಮ್ಮಿಕೊಂಡಿವೆ. ಶೇಕಡಾ 90 ರಷ್ಟು ಬ್ಯಾಂಕಿಂಗ್ ಸಿಬ್ಬಂದಿಯನ್ನು ಪ್ರತಿನಿಧಿಸುವ UFBU, ಇದೇ ಬೇಡಿಕೆಗಳಿಗಾಗಿ ಈ ಹಿಂದೆ ಸೆಪ್ಟೆಂಬರ್ 11 ರಂದೂ ದೇಶವ್ಯಾಪಿ ಮುಷ್ಕರ ನಡೆಸಿತ್ತು.

ತುರ್ತು ಬ್ಯಾಂಕ್ ವಹಿವಾಟುಗಳನ್ನು ಮುಷ್ಕರಕ್ಕೂ ಮುನ್ನವೇ ಪೂರ್ಣಗೊಳಿಸಲು ಎಸ್‌ಬಿಐ ಗ್ರಾಹಕರಿಗೆ ಸೂಚಿಸಿದೆ. ಮುಷ್ಕರದ ದಿನಗಳಲ್ಲಿ ನಗದು ಅಗತ್ಯಗಳಿಗಾಗಿ ಎಟಿಎಂ, ಎಡಿಡಬ್ಲ್ಯೂಎಂಗಳು, ಗ್ರಾಹಕ ಸೇವಾ ಕೇಂದ್ರಗಳು (CSP) ಹಾಗೂ ಡಿಜಿಟಲ್ ವ್ಯವಹಾರಗಳಿಗಾಗಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ (YONO), ಮೊಬೈಲ್ ಬ್ಯಾಂಕಿಂಗ್ ಮತ್ತು ಯುಪಿಐ ಸೇವೆಗಳನ್ನು ಬಳಸಿಕೊಳ್ಳಲು ಕೋರಲಾಗಿದೆ. ಮತ್ತೊಂದೆಡೆ, ಸಾರ್ವಜನಿಕರಿಗೆ ಅನನುಕೂಲವಾಗದಂತೆ ತುರ್ತು ಸೇವೆಗಳನ್ನು ಸುಗಮವಾಗಿ ನಡೆಸುವ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವಾಲಯವು ಸಾರ್ವಜನಿಕ ವಲಯ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮುಖ್ಯಸ್ಥರ ಮಹತ್ವದ ಸಭೆ ಕರೆದಿದೆ.
— State Bank of India (@TheOfficialSBI) September 19, 2026






