ಕೋಝಿಕ್ಕೋಡ್ (ಕೇರಳ): ಕೇರಳದ ಕೋಯಿಕ್ಕೋಡ್ನಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ 17 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣದೊಂದಿಗೆ ಬ್ಯಾಂಕ್ ಮ್ಯಾನೇಜರ್ ಪರಾರಿಯಾಗಿರುವ ಘಟನೆ ವರದಿ ಆಗಿದೆ. ಕೇರಳದ ಕೋಝಿಕ್ಕೋಡ್ನಲ್ಲಿರುವ ಬ್ಯಾಂಕ್ನಲ್ಲಿ ನಕಲಿ ಚಿನ್ನವನ್ನು ಇಟ್ಟು ಪರಾರಿ ಆಗಿದ್ದಾನೆ. ಆರೋಪಿಯನ್ನು ತಮಿಳುನಾಡಿನ ಮೆಟ್ಟುಪಾಳ್ಯಂ ಪತಿ ಸ್ಟ್ರೀಟ್ ನಿವಾಸಿ ಮಾಧಾ ಜಯಕುಮಾರ್ (34) ಎಂದು ಗುರುತಿಸಲಾಗಿದ್ದು, ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಶಾಖೆಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಜಯಕುಮಾರ್ ಅವರು 26 ಕಿಲೋಗ್ರಾಂಗಳಷ್ಟು ಚಿನ್ನದೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ, ಶಾಖೆಯಲ್ಲಿ ಮರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಚಿನ್ನದ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.ಗ್ರಾಹಕರು ಗಿರವಿ ಇಟ್ಟಿದ್ದ ಅಸಲಿ ಚಿನ್ನವನ್ನು ನಕಲಿ ಚಿನ್ನದಿಂದ ಬದಲಾಯಿಸುವ ಮೂಲಕ ಇವನು ಬ್ಯಾಂಕು ಮತ್ತು ಗ್ರಾಹಕರಿಗೂ ವಂಚನೆ ಎಸಗಿದ್ದಾನೆ. ನೂತನವಾಗಿ ನೇಮಕಗೊಂಡ ಮ್ಯಾನೇಜರ್ ವಿ ಇರ್ಷಾದ್ ಅವರು ಈ ಅಕ್ರಮವನ್ನು ಕಂಡು ಕೂಡಲೇ ವಡಕರ ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಕಳೆದ ಮೂರು ವರ್ಷಗಳಿಂದ ವಡಕರ ಶಾಖೆಯ ಮ್ಯಾನೇಜರ್ ಆಗಿದ್ದ ಮಾಧಾ ಜಯಕುಮಾರ್ ಅವರನ್ನು ಇತ್ತೀಚೆಗೆ ಜುಲೈನಲ್ಲಿ ಎರ್ನಾಕುಲಂನ ಪಲರಿವಟ್ಟಂ ಶಾಖೆಗೆ ವರ್ಗಾಯಿಸಲಾಯಿತು ಆದರೆ ಅಧಿಕಾರ ವಹಿಸಿಕೊಳ್ಳಲು ವಿಫಲರಾಗಿದ್ದರು.
ಕಳೆದ ಜೂನ್ 13 ಮತ್ತು ಜುಲೈ 6, 2024 ರ ನಡುವೆ ಗ್ರಾಹಕರು ಗಿರವಿ ಇಟ್ಟಿದ್ದ 42 ಖಾತೆಗಳಲ್ಲಿ ಕಾಣೆಯಾದ ಚಿನ್ನವನ್ನು ಅಡಮಾನ ಮಾಡಿಕೊಳ್ಳಲಾಗಿತ್ತು. ವಡಕರ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತಿದ್ದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಬ್ಯಾಂಕ್ ಮ್ಯಾನೇಜರ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.