ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ಹಿನ್ನಲೆಯಲ್ಲಿ ಸಂಚಾರ ಮಾರ್ಗದಲ್ಲಿ ಕೆಲವೊಂದು ಮಾರ್ಪಾಡಿಸಲಾಗಿದೆ. ಫೆಬ್ರವರಿ 3 ರಿಂದ ಮೂರುದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಏರ್ ಇಂಡಿಯಾ ಶೋ ನಡೆಯಲಿದೆ. ಯಲಹಂಕ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಮಾರ್ಗ ಬದಲಾವಣೆಯ ಬಗ್ಗೆ ಗಮನಿಸುವ ಅಗತ್ಯವಿದೆ. ಫೆಬ್ರವರಿ 3 ರಿಂದ 5 ರವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಏರ್ ಶೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧಿಕೃತ ಚಾಲನೆ ನೀಡಿದ್ದಾರೆ. ಕರೋನಾ ಲಗ್ಗೆಯಿಟ್ಟ ನಂತರ ಏಷ್ಯಾದಲ್ಲಿಯೇ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿದೆ.
ಬದಲಾವಣೆಗೊಂಡ ಸಂಚಾರ ಮಾರ್ಗ
ಬಾಗಲೂರು ರೇವಾ ಕಾಲೇಜಿನ ಜಂಕ್ಷನ್ ನಿಂದ ಬಾಗಲೂರು ಕ್ರಾಸ್ ವರೆಗೂ ಸಂಚಾರ ನಿಷೇಧ ಮಾಡಲಾಗಿದೆ. ಹೆಬ್ಬಾಳ ಫ್ಲೈ ಓವರ್ ನಿಂದ ಸಾದಹಳ್ಳಿ ಗೇಟ್ ವರೆಗೂ ಸಂಚಾರ ನಿಷೇಧಿಸಲಾಗಿದೆ. ತುರ್ತು ಸೇವೆ, ಪಾಸ್ ಹೊಂದಿದವರಿಗೆ, ವಿಐಪಿ, ಬಿಎಂಟಿಸಿ ಬಸ್ಸುಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಏರ್ ಶೋ ಹಿನ್ನಲೆ ನಿರ್ಬಂಧಿಸಿದಂತಹ ಮಾರ್ಗಗಳಲ್ಲಿ ಮುಂಜಾನೆ 5 ರಿಂದ ರಾತ್ರಿ 10 ರವರೆಗೆ ಲಾರಿಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ರಾತ್ರಿ 10 ಗಂಟೆಯ ನಂತರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 1500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಪಾರ್ಕಿಂಗ್ ಏರ್ಪೋರ್ಸ್ ಅಧಿಕಾರಿಗಳ ನಿಯಂತ್ರಣದಲ್ಲಿರುತ್ತದೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಕರೋನಾ ಕಾರಣದಿಂದ ಏರ್ ಶೋ ವೀಕ್ಷಿಸಲು ಪ್ರತಿದಿನ ಮೂರು ಸಾವಿರ ಜನರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದ್ದು, ವಸ್ತು ಪ್ರದರ್ಶನ ಮಳಿಗೆಗಳಿಗೆ 15 ಸಾವಿರ ಜನರಿಗೆ ಅವಕಾಶ ನೀಡಲಾಗಿದೆ.
5 ದಿನಗಳ ಕಾಲ ನಡೆಯ ಬೇಕಿದ್ದಂತಹ ಏರ್ ಶೋ ಈ ಬಾರಿ ಕರೋನಾ ಕಾರಣದಿಂದಾಗಿ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಆತ್ಮನಿರ್ಭರ ಯೋಜನೆ ಅಡಿ 70 ವಿದೇಶಿ ಕಂಪನಿಗಳು ಸೇರಿದಂತೆ 600 ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ. ಈ ಬಾರಿಯ ಏರ್ ಶೋ ನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳು ಪ್ರದರ್ಶನಕ್ಕೆ ಬಳಸಲಾಗಿದೆ.