ಢಾಕಾ: ಬಾಂಗ್ಲಾದೇಶ(Bangladesh)ದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (BNP) ಭರ್ಜರಿ ಜಯ ಸಾಧಿಸಿದೆ. ತಾರಿಕ್ ರೆಹಮಾನ್(Tariqu Rahman) ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೇರಿದ್ದು, 35 ವರ್ಷಗಳ ಬಳಿಕ ಬಾಂಗ್ಲಾದಲ್ಲಿ ಪುರುಷ ಪ್ರಧಾನಿಯೊಬ್ಬರು ಅಧಿಕಾರಕ್ಕೇರುವ ಸಾಧ್ಯತೆಯಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿ ಶುಭಾಶಯ ಸಂದೇಶ ಕಳುಹಿಸಿದ್ದಾರೆ. ಈ ಗೆಲುವು ಬಾಂಗ್ಲಾದೇಶದ ಜನರು ನಿಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಭಾರತ ಯಾವಾಗಲೂ ಬಾಂಗ್ಲಾದೇಶಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಹಾಗೂ ಉಭಯ ದೇಶಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

300 ಸದಸ್ಯರ ಸಂಸತ್ತಿನಲ್ಲಿ ಬಿಎನ್‌ಪಿ 212ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ವರದಿಯಾಗಿದೆ. ಬಹುಮತಕ್ಕೆ ಅಗತ್ಯವಿರುವ 150 ಸ್ಥಾನಗಳನ್ನು ಮೀರಿಸಿ ಬಿಎನ್‌ಪಿ ಸ್ಪಷ್ಟ ಮುನ್ನಡೆ ಸಾಧಿಸಿದೆ. ಜಮಾತ್ ನೇತೃತ್ವದ ಮೈತ್ರಿಕೂಟ ಸುಮಾರು 70 ಸ್ಥಾನಗಳನ್ನು ಗೆದ್ದಿದೆ. ತಾರಿಕ್ ರೆಹಮಾನ್ ಅವರು ಮಾಜಿ ಪ್ರಧಾನಿ ಖಲೀದಾ ಜಿಯಾ (Khaleda Zia) ಅವರ ಪುತ್ರರಾಗಿದ್ದು, ದೇಶದ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಇದೆ. ಸುಮಾರು 20 ವರ್ಷಗಳ ಬಳಿಕ ಬಿಎನ್‌ಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಈ ಬಾರಿ 35 ವರ್ಷಗಳ ನಂತರ ಪುರುಷ ಪ್ರಧಾನಿಯನ್ನು ದೇಶ ಕಾಣುವ ಸಾಧ್ಯತೆ ಇದೆ.







