ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಮಾರಾಮಾರಿ ನಡೆದಿದೆ. ಪ್ರತ್ಯೇಕ ವಿಚಾರಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದ ವೇಳೆ ಘರ್ಷಣೆ ಉಂಟಾಗಿದ್ದು, ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಮತ್ತೊಂದೆಡೆ, ಮಾರ್ಕ್ಸ್ ಕಾರ್ಡ್, ಫಲಿತಾಂಶ ತಡವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ಕೈಗೊಂಡಿತ್ತು.
ಈ ಸಂದರ್ಭದಲ್ಲಿ ಯಾರು ಪ್ರತಿಭಟನೆ ನಡೆಸಬೇಕು ಎನ್ನುವ ವಿಚಾರಕ್ಕೆ ಸಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದಿದೆ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರೊ ವಿಚಾರ ಇದೇ ದೊಡ್ಡದು ಈ ಕುರಿತು ಪ್ರತಿಭಟನೆ ಮಾಡುವುದು ಮುಖ್ಯ ಆದರೆ ಮಾರ್ಕ್ಸ್ ಕಾರ್ಡ್, ಫಲಿತಾಂಶ ತಡವಾಗೋದು ಇದೆಲ್ಲ ಮಾಮೂಲಿ ಎಂದು ಹೇಳಿದ್ದಾರೆ. ಇವತ್ತು ನಮ್ಮ ಪ್ರತಿಭಟನೆ ಇದೆ. ನೀವು ನಾಳೆ ಬನ್ನಿ ಎಂದು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘಟನೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಎರಡು ಸಂಘಟನೆಗಳ ನಡುವೆ ಮಾತಿಗೆ ಮಾತು ಬೆಳೆದು ಅದು ಘರ್ಷಣೆಗೆ ತಿರುಗಿದೆ.
ಸ್ಥಳಕ್ಕೆ ಆಗಮಿಸಿದ ಜ್ಞಾನ ಭಾರತಿ ಪೊಲೀಸರು ಗುಂಪು ಚದುರಿಸುವ ನಿಟ್ಟಿನಲ್ಲಿ ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಿದ್ದಾರೆ.