ಎರಡು ದಿನಗಳ ಬಿಡುವು ಕೊಟ್ಟು ಮತ್ತೆ ಇಂದು ಮಳೆರಾಯ ಅಬ್ಬರಿಸಿ ಬೊಬ್ಬರಿದಿದ್ದಾನೆ. ಬೆಳಗ್ಗೆಯಿಂದ ಜಿಟಿಜಿಟಿಯಾಗಿ ಬಿದ್ದಮಳೆ ಮಧ್ಯಾಹ್ನದ ಹೊತ್ತಿಗೆ ಜೋರಾಗು ಸುರಿದು ಅಬ್ಬರಿಸಿದ್ದಾನೆ. ನಗರದ ಹಲವೆಡೆ ಮಳೆಯಾಗಿದ್ದು, ಮುಂದಿನ ಐದು ದಿನಗಳ ಕಾಲ ಇದೇ ರೀತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ಮುಂದುವರೆದ ಮಳೆ!
ಕಳೆದ ಕೆಲವು ದಿನಗಳಲ್ಲಿ ಬೆಂಗಳೂರಲ್ಲಿ ಭಯಂಕರ ಮಳೆಯಾಗುತ್ತಿದೆ. ಮಳೆಯ ತೀವ್ರತೆಗೆ ನಗರದಲ್ಲಿ ಸಾಲು ಸಾಲು ಅನಾಹುತಗಳು ನಡೆದು ಹೋಗಿವೆ. ರಾಜಕಾಲುವೆ ತುಂಬಿ ಬಡಾವಣೆಗಳಿಗೆ ನೀರು ನುಗ್ಗುತ್ತಿವೆ. ರಸ್ತೆಗಳೆಲ್ಲಾ ಕೆರೆಗಳಂತಾಗುತ್ತಿದೆ. ಜನರು ಆಸ್ತಿಪಾಸ್ತಿಗಳನ್ನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಸಾಲು ಸಾಲು ಅವಾಂತರಗಳಿಗೆ ಮಳೆರಾಯ ಮುನ್ನುಡಿ ಬರೆಯುತ್ತಿದ್ದಾನೆ. ಈ ಎಲ್ಲಾ ಅನಾಹುತಗಳಾಗಿ ವರುಣ ಎರಡು ದಿನಗಳ ಬಿಡುವು ನೀಡಿದ್ದೇ ತಡ ಇಂದು ಮತ್ತೆ ಜೋರಾಗಿ ಸುರಿದು ಬೆಂಗಳೂರಿಗರ ಆತಂಕ ಇಮ್ಮಡಿ ಮಾಡಿದ್ದಾನೆ. ಇಂದು ನಗರದ ಮೆಜೆಸ್ಟಿಕ್, ಜಯನಗರ, ಜೆಪಿನಗರ, ಶೇಷಾದ್ರಿಪುರಂ ಸೇರಿದಂತೆ ಬಹುತೇಕ ಕಡೆ ಒಂದು ತಾಸುಗಳ ಕಾಲ ನಿರಂತರ ಮಳೆಯಾಗಿದೆ.
ಇಂದು ಬೆಳಗ್ಗೆಯಿಂದ ಜಿಟಿಜಿಟಿ ಮಳೆಯಾಗುತ್ತಿತ್ತು. ಆದರೆ, ಮಧ್ಯಾಹ್ನದ ಹೊತ್ತಿಗೆ ಜೋರಾಗು ಉಯ್ಯಲು ಮಳೆ ಆರಂಭಿಸಿದೆ. ಪರಿಣಾಮ ನಗರದ ಹಲವೆಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡಿದೆ. ಮಲ್ಲೇಶ್ವರದ ಮಂತ್ರಿ ಮಾಲ್‌ನ ಮುಂಭಾಗದ ಸಂಪಿಗೆ ರಸ್ತೆಯಲ್ಲಿ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿತ್ತು. ಬೈಕ್ ಸವಾರರು ಹಾಗೂ ಪಾದಾಚಾರಿಗಳು ರಸ್ತೆ ದಾಟಲು ಹರಸಾಹಸ ಪಟ್ಟರು. ಕೇವಲ ಒಂದು ತಾಸು ನಿರಂತರ ಮಳೆ ಸುರಿದ ಹಿನ್ನೆಲೆ ಈ ರೀತಿಯಾದ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು.
ಮುಂದಿನ 5 ದಿನಗಳ ಕಾಲ ಗಾಳಿ ಸಹಿತ ಭಾರಿ ಮಳೆ ಸಾಧ್ಯತೆ!
ಇನ್ನು ಮುಂದಿನ ಐದು ದಿನಗಳ ಕಾಲ ನಗರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ನಾಳೆಯಿಂದ ಮೂರು ದಿನ ಗಾಳಿ ಸಹಿತ ಮಳೆಯಾದರೆ, 12 ಮತ್ತು 13 ರಂದು ಗುಡುಗು ಸಹಿತ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂದಹಾಗೆ, ನಗರದಲ್ಲಿ ಬೆಳಗ್ಗೆಯಿಂದ 8.4 ಮಿ.ಮಿ ಮಳೆ ದಾಖಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಳೆ ಬಿದ್ದ ಹಿನ್ನಲೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಇದೀಗ ಪುನಃ ಮೂರ್ನಾಲ್ಕು ದಿನ ಮಳೆ ಬರುವ ಸೂಚನೆ ನೀಡಿರುವ ಹವಮಾನ ಇಲಾಖೆ, ಎಚ್ಚರಿಕೆಯಿಂದಿರಲು ಸೂಚಿಸಿದೆ. ಹೀಗಾಗಿ ತಗ್ಗು ಪ್ರದೇಶದಲ್ಲಿ ಇರುವವರು ಹಾಗೂ ರಾಜಕಾಲುವೆ ದಂಡೆಯಲ್ಲಿ ಇರುವ ಬೆಂಗಳೂರಿಗರಲ್ಲಿ ಆತಂಕ ಹೆಚ್ಚಿದೆ. ಪ್ರತಿ ಬಾರಿಯಂತೆ ಮಳೆಗಾಲಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದಷ್ಟೇ ಹೇಳುವ ಬಿಬಿಎಂಪಿ ಪ್ರತಿ ಬಾರಿಯೂ ಅನಾಹುತಗಳನ್ನು ಸ್ವಾಗತಿಸಿ ನಂತರ ಪರದಾಡುತ್ತದೆ. ಈ ಬಾರಿಯಾದರೂ ಅಂಥಾ ದುರ್ಘಟನೆಗಳು ಮರುಕಳಿಸದಂತೆ ಪಾಲಿಕೆ ನೋಡಿಕೊಳ್ಳ ಬೇಕಿದೆ.