
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಕಳೆದ 2 ವರ್ಷದಿಂದಲೂ ನೀರಿನ ಸಮಸ್ಯೆ ಎದುರಾಗಿದೆ. ಹಾಸ್ಟೆಲ್ ವಾರ್ಡನ್ ಸಹ ಸರಿ ಇಲ್ಲ ಅಂತ ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದಾರೆ. ಮಾತೆ ರಮಾ ಬಾಯಿ SC/ST ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ಬೆಂಗಳೂರು ವಿಶ್ವವಿದ್ಯಾಲಯದ ಮುಖ್ಯ ರಸ್ತೆಯನ್ನು ಬಂದ್ ಮಾಡಿದ್ದಾರೆ. ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್ ಹಾಗೂ ಕಾರುಗಳು ರಸ್ತೆಯಲ್ಲೇ ನಿಂತಿವೆ. ವಿವಿ ಕುಲಪತಿ ಹಾಗೂ ಕುಲ ಸಚಿವ ಸ್ಥಳಕ್ಕೆ ಬರುವವರೆಗೂ ಹೋರಾಟ ನಿಲ್ಲಲ್ಲ ಎಂದು ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ಸುಮಾರು 200 ಮಂದಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

ಇನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾತೆ ರಾಮಬಾಯಿ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ನಿನ್ನೆ ತಿಂಡಿಯಲ್ಲಿ ಜೇನು ನೊಣಗಳು ಪತ್ತೆಯಾಗಿದ್ದು, ಎಲ್ಲಾ ವಿದ್ಯಾರ್ಥಿನಿಯರು ಭಯಭೀತಿಯಾಗಿದ್ದಾರೆ. ಇದೇ ರೀತಿ ಅನೇಕ ಸಲ ಪ್ರಕರಣಗಳು ಬೆಳಕಿಗೆ ಬಂದರು, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬೆಂಗಳೂರು ವಿವಿ ಅಡಳಿತ ಅಧಿಕಾರಿಗಳಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜ ಆಗಿಲ್ಲ ಎಂದು ದೂರಿದ್ದಾರೆ. ಪ್ರತಿನಿತ್ಯ ಸಹ ನೀರು ಬಿಸಿ ನೀರು, ಪವರ್ ಸಮಸ್ಯೆ ಅದಕಿಂತ ಹೆಚ್ಚಾಗಿ ಅಡುಗೆ ಕ್ಲೀನ್ ಇರುವುದಿಲ್ಲ ಎಂದು ಆರೋಪ ಮಾಡಿದ್ದಾರೆ.

ವಿದ್ಯಾರ್ಥಿಗಳ ಊಟದ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ ಹಲವಾರು ನಿಲಯ ಪಾಲಕರು, ವಿದ್ಯಾರ್ಥಿ ನಿಲಯಗಳಿಗೆ ವಾರಕ್ಕೆ ಒಮ್ಮೆ ಸಹ ಭೇಟಿ ನೀಡಲ್ಲ. ಮತ್ತೊಂದು ಮಹಿಳಾ ವಿದ್ಯಾರ್ಥಿ ನಿಲಯದಲ್ಲೂ ಸಮಸ್ಯೆಗಳಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಸಮಸ್ಯೆ ಕಂಡುಬಂದಿದೆ. ಕೂಡಲೇ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹ ಮಾಡಿದ್ದಾರೆ.
