ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತದೆ.
ಬೊಮ್ಮನಹಳ್ಳಿ, ಬಿಟಿಎಂಲೇಔಟ್, ಜಯನಗರ, ಪದ್ಮನಾಭನಗರ, ಚಿಕ್ಕಪೇಟೆ, ಬಸವನಗುಡಿ, ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳು.
ಈ 8 ಕ್ಷೇತ್ರಗಳ ಪೈಕಿ 5 ಮಂದಿ ಬಿಜೆಪಿ ಶಾಸಕರುಗಳು, 3 ಮಂದಿ ಕಾಂಗ್ರೆಸ್‌ನ ಶಾಸಕರಿದ್ದಾರೆ.
ಇನ್ನು ಈ ಬಾರಿಯ ಅಖಾಡದಲ್ಲಿ ತೇಜಸ್ವಿ ಸೂರ್ಯ V/S ಸೌಮ್ಯರೆಡ್ಡಿ ಕಣದಲ್ಲಿದ್ದು, ಬಿಜೆಪಿ V/S ಕಾಂಗ್ರೆಸ್ ಅಖಾಡ ರಂಗೇರಿದೆ.

ಇನ್ನು ಲಾಭ ನಷ್ಟದ ಲೆಕ್ಕಾಚಾರಕ್ಕೆ ಬಂದರೆ, ಕಳೆದ 8 ಚುನಾವಣೆಯಿಂದಲೂ ಇದು ಬಿಜೆಪಿಯ ಭದ್ರಕೋಟೆ. ಅನಂತ್‌ಕುಮಾರ್ ಇಲ್ಲಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಬ್ರಾಹ್ಮಣ, ಒಕ್ಕಲಿಗ, ವೀರಶೈವ- ಲಿಂಗಾಯತ, ರೆಡ್ಡಿ, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮತಗಳಿದೆ.
ಇನ್ನು ಈ ಬಾರಿಯ ಅಖಾಡದಲ್ಲಿ ಇಬ್ಬರು ಯುವಕರು ಕಣದಲ್ಲಿದ್ದಾರೆ.
ಹಾಲಿ ಸಂಸದ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ತೇಜಸ್ವಿ ಸೂರ್ಯ, ರಾಜಕಾರಣದ ಹಿನ್ನೆಲೆಯನ್ನು ಹೊಂದಿದ್ದು, ಅನಂತ್‌ಕುಮಾರ್ ಅವರ ಕಟ್ಟಾ ಅನುಯಾಯಿಯಾಗಿ, ಕಳೆದ ಬಾರಿ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ್ರು. ಜೊತೆಗೆ ಅವರು ಈಗ ಬಿಜೆಪಿಯ ರಾಷ್ಟ್ರೀಯಾಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಬಿ.ಕೆ. ಹರಿಪ್ರಸಾದ್ ಅವರನ್ನು ಮಣಿಸಿ ಸಂಸತ್ ಪ್ರವೇಶಿಸಿದ್ರು. ಈ ಬಾರಿ ಸೌಮ್ಯರೆಡ್ಡಿ ಅವರನ್ನು ಎದುರಿಸುತ್ತಿದ್ದಾರೆ. ಇದು ಪ್ರಬಲ ಬಿಜೆಪಿಯ ಭದ್ರಕೋಟೆ ಆಗಿರುವ ಕಾರಣ, ಇಲ್ಲಿ ಗೆಲುವಿನ ಶೇಕಡಾವಾರು ತೇಜಸ್ವಿ ಸೂರ್ಯರದ್ದೇ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇನ್ನು ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡುವ ಆಸೆಯಿಂದ ಮಾಜಿ ಶಾಸಕಿ ಸೌಮ್ಯರೆಡ್ಡಿ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಳೆದ 2018 ರ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಜಯನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ರು. ಆದ್ರೆ ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 16 ಮತಗಳ ಅಂತರದಿಂದ ಬಿಜೆಪಿಯ ಸಿ.ಕೆ.ರಾಮಮೂರ್ತಿ ವಿರುದ್ಧ ಪರಾಭವಗೊಂಡಿದ್ದಾರೆ. ಇನ್ನು ರೆಡ್ಡಿ ಸಮುದಾಯಕ್ಕೆ ಸೇರಿದ ಸೌಮ್ಯರೆಡ್ಡಿಗೆ ತಂದೆ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಆಶೀರ್ವಾದ ಗಟ್ಟಿಯಾಗಿದೆ. ರಾಮಲಿಂಗಾರೆಡ್ಡಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೇಲೆ ಕಳೆದ ಮೂರುವರೆ ದಶಕಗಳಿಂದಲೂ ಹಿಡಿತ ಸಾಧಿಸಿದ್ದು, ಕ್ಷೇತ್ರದಲ್ಲಿ ಕಟ್ಟಾ ಕಾಂಗ್ರೆಸ್ಸಿಗ ಎಂಬ ಹೆಸರನ್ನು ಸಂಪಾದನೆ ಮಾಡಿದ್ದಾರೆ. ಇನ್ನು ಕ್ಷೇತ್ರದಲ್ಲಿನ 8 ವಿಧಾನಸಭಾ ಕ್ಷೇತ್ರಗಳಲ್ಲೂ ರಾಮಲಿಂಗಾರೆಡ್ಡಿ ಚಿರಪರಿಚಿತ. ಇತ್ತ ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಟಿಎಂಲೇಔಟ್‌ನ ಹಾಲಿ ಶಾಸಕರಾಗಿ, ಸರ್ಕಾರದಲ್ಲಿ ಸಾರಿಗೆ ಸಚಿವರಾಗಿಯೂ ರಾಮಲಿಂಗಾರೆಡ್ಡಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ತಂದೆ ಮಗಳ ಬೆನ್ನಿಗೆ ನಿಂತಿದ್ದಾರೆ. ಈ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ಫೈಟ್ ಏರ್ಪಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬೊಮ್ಮನಹಳ್ಳಿ, ಬಿಟಿಎಂಲೇಔಟ್ ವಿಧಾನಸಭಾ ಕ್ಷೇತ್ರಗಳ ರೆಡ್ಡಿ ಸಮುದಾಯದ ಮತಗಳು, ಜಯನಗರದ ಮಾಜಿ ಶಾಸಕಿಯಾಗಿರುವ ಕಾರಣ ಅಲ್ಲಿನ ಮತಗಳು ಸೌಮ್ಯರೆಡ್ಡಿ ಕೈ ಹಿಡಿಯುವ ಸಾಧ್ಯತೆಯಿದೆ ಎನ್ನಲಾಗಿದ್ದು, ಗೆಲುವು ಯಾರಿಗೆ ಸಲ್ಲುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
