ಸಂಗದಿಂದ ಸನ್ಯಾಸಿಯೂ ಕೆಡ್ತಾನೆ ಅನ್ನೋ ಮಾತಿದೆ. ಅದಕ್ಕಾಗಿಯೇ ನಾವು ಮಾಡುವ ಸ್ನೇಹಿತರ ಬಳಗ ಉತ್ತಮ ಆಗಿರಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದರೆ ದರ್ಶನ್ ಸ್ನೇಹಿತರ ಬಳಗವೇ ಆ ರೀತಿಯ ದುಷ್ಕೃತ್ಯ ಎಸಗಲು ಪ್ರೇರಣೆ, ದರ್ಶನ್ ಕೊಲೆ ಮಾಡುವಷ್ಟು ಕ್ರೂರಿ ಅಲ್ಲ ಎಂದು ಸಾಕಷ್ಟು ಜನರು ಸಮರ್ಥನೆಯನ್ನೂ ಮಾಡಿದರು. ಆದರೆ ಇದೀಗ ದರ್ಶನ್ ಮಾಡಿರುವ ಸಂಗ ಎಂತಹದ್ದು..? ದರ್ಶನ್ ಸನ್ಮಾರ್ಗದಲ್ಲಿ ಸಾಗುತ್ತಿದ್ದಾರಾ..? ಅನ್ನೋ ಎಲ್ಲಾ ಅನುಮಾನಗಳಿಗೂ ಉತ್ತರ ಸಿಕ್ಕಿದೆ.
ಜೈಲಿನಲ್ಲಿ ನಟ ದರ್ಶನ್ ಮತ್ತು ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹರಟೆ ಹೊಡೆಯುತ್ತಿರುವ ಫೋಟೋ ಜೈಲಿನ ಕಾಂಪೌಡ್ ದಾಟಿಕೊಂಡು ಮಾಧ್ಯಮಗಳ ಎದುರು ಬಂದಿದೆ. ಸಿದ್ದಾಪುರ ಮಹೇಶ್ ಎಂಬ ರೌಡಿಶೀಟರ್ ಕೊಂದಿದ್ದ ಆರೋಪದಲ್ಲಿ ಆಗಸ್ಟ್ 2023ರಂದು ಕೋರ್ಟ್ಗೆ ಶರಣಾಗಿದ್ದ. ವಿಲ್ಸನ್ ಗಾರ್ಡನ್ ನಾಗನ ಮೇಲೆ ಕೋಕಾ ಕಾಯ್ದೆ ಹಾಕಲಾಗಿದೆ. ನಾಗನೊಂದಿಗೆ ಟೀ, ಸಿಗರೇಟ್ ಸೇದುತ್ತಾ ದರ್ಶನ್ ಹರಟೆ ಹೊಡೆಯುತ್ತಿರುವುದನ್ನು ನೋಡಿದಾಗ ದರ್ಶನ್‌ಗೆ ನಾಗ ಎಷ್ಟು ಆತ್ಮೀಯ ಅನ್ನೋದನ್ನು ಯಾರು ಬೇಕಿದ್ದರೂ ಊಹಿಸಬಹುದು.
ಇನ್ನು ವಿಲ್ಸನ್ ಗಾರ್ಡನ್ ನಾಗ ಅಷ್ಟೇ ಅಲ್ಲ, ಕುಳ್ಳ ಸೀನ ಕೂಡ ದರ್ಶನ್ ಜೊತೆ ಬಿಂದಾಸ್ ಮಾತುಕತೆ ಮಾಡ್ತಿದ್ದಾನೆ. ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನ ಕೂಡ ಬೆಂಗಳೂರಿನ ರೌಡಿ ಶೀಟರ್. ತಲಘಟ್ಟಪುರ ಠಾಣಾ ವ್ಯಾಪ್ತಿಯ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ಕುಳ್ಳ ಸೀನ, ಪರಪ್ಪನ ಅಗ್ರಹಾರ ಜೈಲಿನಲ್ಲಿ ರೆಸಾರ್ಟ್‌ನಲ್ಲಿ ಕುಳಿತು ಮಾತುಕತೆ ಮಾಡುವಂತೆ ಮೀಟಿಂಗ್ ಮಾಡಿದ್ದಾರೆ. ಜೈಲು ಸಿಬ್ಬಂದಿ ಕಣ್ಗಾವಲಿನಲ್ಲೇ ರೌಡಿಗಳ ಜೊತೆ ದರ್ಶನ್ ಚರ್ಚೆ ನಡೆಸಿರುವುದು ಓಪನ್ ಸೀಕ್ರೆಟ್.
ಫೋಟೋ ಕಥೆ ಇಷ್ಟಾದ್ರೆ ವಿಡಿಯೋ ಮಾಡಿರುವ ರೌಡಿ ಧರ್ಮನ ಮೊಬೈಲ್‌ನಿಂದ ಎನ್ನುವುದು ಕೂಡ ಬಯಲಾಗಿದೆ. ದರ್ಶನ್‌ಗೆ ವಿಡಿಯೋ ಕಾಲ್ ಮಾಡಿಕೊಟ್ಟಿದ್ದು ಬಾಣಸವಾಡಿ ಪೊಲೀಸ್ ಠಾಣೆ ರೌಡಿಶೀಟರ್ ಧರ್ಮ. ಕಳೆದ ಮೇ 7ರಂದು ಕಾರ್ತಿಕೇಯನ ಕೊಲೆ ಕೇಸ್‌ನಲ್ಲಿ ಆರೋಪಿ ಆಗಿರುವ ಧರ್ಮ, ದರ್ಶನ್ ಮಾತನಾಡಲು ವಿಡಿಯೋ ಕಾಲ್ ಮಾಡಿಕೊಟ್ಟಿದ್ದ. ನನ್ನ ಸೆಲ್‌ನಲ್ಲೇ ಬಾಸ್ ಇದ್ದಾರೆ ಎಂದು ಹೇಳಿಕೊಂಡಿದ್ದ ರೌಡಿ ಧರ್ಮ.
ರೌಡಿ ಸತ್ಯನ ಜೊತೆ ದರ್ಶನ್ ಸಂಬಂಧ. ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದು ರೌಡಿ ಸತ್ಯನ ಜೊತೆ ಎನ್ನುವುದು ಕೂಡ ಬಯಲಾಗಿದೆ. ರೌಡಿ ಸತ್ಯ ಬ್ಯಾಡರಹಳ್ಳಿ ರೌಡಿಶೀಟರ್ ಜನಾರ್ದನ್ ಅಲಿಯಾಸ್ ಜಾನಿ ಮಗ. ಕಾಲೇಜು ವಿದ್ಯಾರ್ಥಿಗೆ ಮಚ್ಚಿನಿಂದ ಹಲ್ಲೆ ಮಾಡಿ ಜೈಲುಪಾಲಾಗಿದ್ದ ರೌಡಿ ಸತ್ಯ, ದರ್ಶನ್ ಜೊತೆ ಮಾತಾಡಿ ವಿಡಿಯೋ ಹಂಚಿಕೊಂಡು ಬಿಲ್ಡಪ್ ತಗೊಂಡಿದ್ದ. ಕಲಾಸಿಪಾಳ್ಯದ ಕೆಲವು ಹುಡುಗರಿಗೂ ವಿಡಿಯೋ ಕಳಿಸಿದ್ದ ಎನ್ನುವುದು ಗೊತ್ತಾಗಿದೆ.
ಕೊಲೆ ಕೇಸ್‌ನಲ್ಲಿ ದರ್ಶನ್‌ನನ್ನು ಸಮರ್ಥಿಸಿ ಮಾತನಾಡುತ್ತಿದ್ದವರು ಈಗ ಉತ್ತರ ಕೊಡಬೇಕಿದೆ. ಕೊಲೆ ನಡೆದಿರುವುದು ಆಕಸ್ಮಿಕವೇ ಆಗಿರಬಹುದು. ಆದರೆ ದರ್ಶನ್ ತುಳಿದಿರುವ ಮಾರ್ಗ ಪಾತಕಲೋಕ. ಬೆಂಗಳೂರಿನ ಪಾತಕಲೋಕಕ್ಕೆ ಎಂಟ್ರಿಯಾದವರು ಹೊರಕ್ಕೆ ಬರುವುದು ಅಷ್ಟು ಸುಲಭದ ಮಾತಲ್ಲ ಎಂದು ಸಾಕಷ್ಟು ರೌಡಿಗಳು ತಮ್ಮದೇ ಕಥೆ ಹೇಳುವಾಗ ಹೇಳಿಕೊಂಡಿದ್ದೂ ಉಂಟು. ಇದೀಗ ನಾಲ್ಕೈದು ರೌಡಿಗಳ ಜೊತೆಗೆ ದರ್ಶನ್ ಸಂಪರ್ಕ ಇರುವುದು ಬಯಲಾಗಿದೆ. ದರ್ಶನ್ ಕೂಡ ಇನ್ನು ಪಾತಕ ಲೋಕದ ಮೇಲೆ ಹಿಡಿದ ಸಾಧಿಸ್ತಾರಾ..? ಅನ್ನೋ ಅನುಮಾನ ದಟ್ಟವಾಗ್ತಿದೆ.