ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ರಾಜ್ಯ ಹೈಕೊರ್ಟ್ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಕ್ರಮಕ್ಕೆ ಸೂಚಿಸಿದೆ. ಇತ್ತೀಚೆಗ ಬೆಂಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ ಪ್ರಯಾಣಿಕರ ಜೀವಕ್ಕೆ ಇದು ಅಪಾಯಕಾರಿಯಾಗಿ ಪರಿಣಮಿಸಿರುವ ಪರಿಣಾಮ ಖುದ್ದು ಹೈಕೋರ್ಟ್ ಮಧ್ಯಪ್ರವೇಶಿಸಿದೆ.
ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಆದಷ್ಟು ಬೇಗ ಶುರು ಮಾಡಬೇಕು. ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಹದಗೆಟ್ಟ ರಸ್ತೆಗಳಲ್ಲಿ ಜನ ಸಂಚರಿಸಲು ಪರದಾಡುತ್ತಿದ್ದಾರೆ. ಕೆಲವರು ರಸ್ತೆ ಗುಂಡಿಗಳಿಗೆ ಬಿದ್ದು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರು, ಮೈಮರೆತು ಕುಳಿತುಕೊಂಡಿರುವ ಬಿಬಿಎಂಪಿಗೆ ರಾಜ್ಯ ಹೈಕೋರ್ಟ್ ಚಾಟಿ ಬೀಸಿದೆ.
ʻಸಾಲ ಮಾಡುತ್ತೀರೋ ಅಥವಾ ಕಳ್ಳತನ ಮಾಡುತ್ತೀರೋʼ ಅದು ನಿಮ್ಮಗೆ ಬಿಟ್ಟ ವಿಚಾರ. ಜನರಿಗೆ ಮೂಲ ಸೌಕರ್ಯ ಒದಗಿಸುವುದು ನಿಮ್ಮ ಕರ್ತವ್ಯ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.
ಅಭಿವೃದ್ದಿ ಕಾರ್ಯಕ್ರಮಗಳಿಗೆ ಹಣ ಮೀಸಲಿಡುವುದು ಸರ್ಕಾರದ ಕರ್ತವ್ಯ ಆದ್ದರಿಂದಲೇ ಅನುದಾನ ನೀಡಲೇಬೇಕು ಎಂದು ತಾಕೀತು ಮಾಡಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ದುರಸ್ತಿಗೆ ಸಂಭಂದ ಪಟ್ಟ ಪ್ರಾಧಿಕಾರಗಳಿಗೆ ಸೂಚಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರದ ವಿರುದ್ದ ತೀವ್ರ ಅಸಮಾಧಾನವನ್ನ ಹೊರಹಾಕಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ.ಆರ್.ಮೋಹನ್, ಸರ್ಕಾರ ಅನುದಾನ ನೀಡುವುದಾಗಿ ಭರವಸೆ ನೀಡಿ ಹಣ ಬಿಡುಗಡೆ ಮಾಡಿಲ್ಲ. ಈ ಹಿಂದೆ 2018-19ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ 500 ಕೋಟಿ ರೂಪಾಯಿ ಅನುದಾನವನ್ನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ಮಾರ್ಟ್ ಸಿಟಿ ಯೋಜನೆಯ ಕಾರಣ ನೀಡಿ ಹಿಂಪಡೆದಿತ್ತು.
ಇತ್ತೀಚಿಗೆ ನ್ಯಾಯಾಲಯ ಅನುದಾನದ ಹಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದರು ಸರ್ಕಾರ ಅದನ್ನು ಪಾಲಿಸಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗಾಗಿ ಅಗೆಯಲಾಗಿದ್ದ ರಸ್ತೆಗಳನ್ನು ಮುಚ್ಚದೆ ಹಾಗೆ ಬಿಡಲಾಗಿದೆ. ಮಳೆ ಸುರಿದಿರುವ ಕಾರಣ ರಸ್ತೆಗಳು ಇನ್ನಷ್ಟು ದುಸ್ತಿತಿಗೆ ತಲುಪಿದ್ದು ಜನ ಒಡಾಡಲು ಕಷ್ಟವಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಪರಿಸ್ಥಿತಿ ಹೀಗೆಯೆ ಇದೆ. ಇದೀಗ ರಾಜ್ಯದಲ್ಲಿ ಶಾಲೆಗಳು ಪುನಾರಂಭಗೊಂಡಿದ್ದು, ಮಕ್ಕಳು ಶಾಲೆಗೆ ಹಾಳಾದ ರಸ್ತೆಗಳಲ್ಲೇ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂಬ ವಿಚಾರವನ್ನ ನ್ಯಾಯಪೀಠದ ಗಮನಕ್ಕೆ ತಂದರು.
ಪಾಲಿಕೆ ಪರ ವಾದಿಸಿದ ವಕೀಲರು ಮಳೆಯಿಂದ ರಸ್ತೆ ಕಾಮಗಾರಿಯು ವಿಳಂಬವಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದರೆ ಆದಷ್ಟು ಬೇಗ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು. ಬಿಬಿಎಂಪಿ ಪರ ವಕೀಲರ ವಾದ ಆಲಿಸಿದ ನ್ಯಾಪೀಠವು ತೀವ್ರ ಅಸಮಾಧಾನವನ್ನ ಹೊರಹಾಕಿತ್ತು.
ಆದರೆ, ನ್ಯಾಯಾಲಯ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲೇಬೇಕು ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಆದಷ್ಟು ಬೇಗ ಕಾಮಗಾರಿಗೆ ಹಣ ಬಿಡುಗಡೆ ಮಾಡಬೇಕು ಈ ಕುರಿತ ವರದಿಯನ್ನು ಜನವರಿ 5ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೇಯನ್ನು ಮುಂದೂಡಿದೆ.